11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 20 ಲಕ್ಷ ದಂಡ ; ಮನೆಗೆ ದಾಳಿಗೈದ ಪೊಲೀಸರಿಂದ ಯುವತಿಗೆ ಹಲ್ಲೆ ಆರೋಪ, ಬ್ರಹ್ಮಾವರ ಠಾಣೆ ಮುಂದೆ ಪ್ರತಿಭಟನೆ, ಐವರು ಪೊಲೀಸರ ವಿರುದ್ಧವೇ ಎಫ್ಐಆರ್ ! 

18-12-25 10:51 pm       Udupi Correspondent   ಕರಾವಳಿ

ನ್ಯಾಯಾಲಯದ ಆದೇಶ ಪಾಲನೆ ನೆಪದಲ್ಲಿ ಮಲ್ಪೆ ಠಾಣೆ ಪೊಲೀಸರು ಉಪ್ಪೂರಿನಲ್ಲಿ ನಸುಕಿನ ವೇಳೆ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆಗೈದ ಆರೋಪ ಕೇಳಿಬಂದಿದ್ದು ಘಟನೆ ಖಂಡಿಸಿ ಬುಧವಾರ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಪ್ರಮುಖರ ನೇತೃತ್ವದಲ್ಲಿ ಬ್ರಹ್ಮಾವರ ಠಾಣೆ ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದ್ದು ಕೊನೆಗೆ ಆರೋಪಿತ ಪೊಲೀಸರ ವಿರುದ್ಧ ಎಫ್ಐಆರ್ ಆಗುವಂತೆ ಮಾಡಿದ್ದಾರೆ.‌

ಉಡುಪಿ, ಡಿ.18 : ನ್ಯಾಯಾಲಯದ ಆದೇಶ ಪಾಲನೆ ನೆಪದಲ್ಲಿ ಮಲ್ಪೆ ಠಾಣೆ ಪೊಲೀಸರು ಉಪ್ಪೂರಿನಲ್ಲಿ ನಸುಕಿನ ವೇಳೆ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆಗೈದ ಆರೋಪ ಕೇಳಿಬಂದಿದ್ದು ಘಟನೆ ಖಂಡಿಸಿ ಬುಧವಾರ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಪ್ರಮುಖರ ನೇತೃತ್ವದಲ್ಲಿ ಬ್ರಹ್ಮಾವರ ಠಾಣೆ ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದ್ದು ಕೊನೆಗೆ ಆರೋಪಿತ ಪೊಲೀಸರ ವಿರುದ್ಧ ಎಫ್ಐಆರ್ ಆಗುವಂತೆ ಮಾಡಿದ್ದಾರೆ.‌

ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮೌನ ಮೆರವಣಿಗೆಯಲ್ಲಿ ಸಾಗಿ ಬಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದು ಸಂಜೆ ತನಕ ಪ್ರತಿಭಟನೆ ನಡೆಸಿದರು.

ಈ ವೇಳೆ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಎಡಿಶನಲ್ ಎಸ್ಪಿ ಸುಧಾಕರ ನಾಯಕ್ ಮತ್ತು ಅಪರ ಜಿಲ್ಲಾಧಿಕಾರಿ ಆಭಿದ್ ಗದ್ಯಾಳ ಅವರು ಪ್ರತಿಭಟನಾಕಾರರನ್ನು ಮನವೊಲಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಎಸ್ಪಿ ಹರಿರಾಮ್ ಶಂಕರ್ ಸ್ಥಳಕ್ಕಾಗಮಿಸಿ ತಪ್ಪಿತಸ್ಥರ ವಿರುದ್ಧ ಎಫ್ ಐಆರ್ ದಾಖಲಿಸಬೇಕೆಂದು ಒತ್ತಾಯ ಮಾಡಿದ್ದಾರೆ.‌ 

ಕೊನೆಗೆ, ಎಸ್ಪಿ ಹರಿರಾಮ್ ಶಂಕರ್ ಬ್ರಹ್ಮಾವರ ಠಾಣೆಯಲ್ಲಿ ಪ್ರತಿಭಟನಾಕಾರ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಅವರ ಒತ್ತಾಯದಂತೆ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಮತ್ತು ಅವಳ ತಾಯಿ ಮೇಲೆ ದೌರ್ಜನ್ಯ ಮಾಡಿದ 5 ಮಂದಿ ಪೊಲೀಸರ ಮೇಲೆ ಎಫ್ ಐಆರ್ ದಾಖಲಿಸಿದರು. ಕೊನೆಗೆ, ಎಫ್ಐಆರ್ ಪ್ರತಿಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಅಂತ್ಯ ಮಾಡಲಾಯಿತು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್‌ ಪೂಜಾರಿ, ಮಾಜಿ ಉಡುಪಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

11 ವರ್ಷ ಹಳೆ ಪ್ರಕರಣದಲ್ಲಿ ಆರೋಪಿಗೆ 20 ಲಕ್ಷ ದಂಡ 

2014ರಲ್ಲಿ ನಡೆದ ಅಪಘಾತ ಪ್ರಕರಣ ಸಂಬಂಧಿಸಿ ಆರೋಪಿ ಆಶಿಕ್ ಎಂಬವರಿಗೆ ನ್ಯಾಯಾಲಯ ಸಜೆ ವಿಧಿಸಿದ್ದಲ್ಲದೆ, ಇದರ ಬಗ್ಗೆ 20 ಲಕ್ಷ ದಂಡ ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವ ಕುರಿತು ತೀರ್ಪು ನೀಡಿತ್ತು. ಆರೋಪಿ ಆಶಿಕ್‌ ನ್ಯಾಯಾಯಕ್ಕೆ ಹಾಜರಾಗದೇ ಹಾಗೂ ದಂಡವನ್ನು ಕಟ್ಟದೇ ಇರುವುದರಿಂದ, ಆರೋಪಿಯನ್ನು ದಸ್ತಗಿರಿ ಮಾಡಿ ಡಿ.17ರ ಒಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ಕೋರ್ಟ್ ಆದೇಶ ಮಾಡಿರುತ್ತದೆ.

ನ್ಯಾಯಾಲಯದ ಆದೇಶದಂತೆ ವಾರಂಟ್ ಜಾರಿ ಮಾಡಲು, ಮಲ್ಪೆ ಪೊಲೀಸರು ಎರಡು ದಿನಗಳ ಹಿಂದೆ ಬ್ರಹ್ಮಾವರದ ಆರೋಪಿ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾಯಿಸಿ ಬೇರೊಬ್ಬ ತನಿಖಾಧಿಕಾರಿಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೇ, ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ, ಲೋಪಗಳು ಕಂಡುಬಂದಲ್ಲಿ ಪೊಲೀಸರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದೇನೆ ಎಂದು ಎಸ್ಪಿ ಹರಿರಾಮ್ ಶಂಕರ್ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದರು.‌

An FIR has been registered against five Malpe police personnel following allegations that they assaulted a young woman and her mother during a pre-dawn house raid in Uppoor, carried out under the pretext of executing a court order. The incident sparked widespread outrage, leading to an all-day protest in front of the Brahmavar police station on Wednesday under the leadership of the Udupi District Billava Yuva Vedike.