Mangalore Landslide, Death: ಗುಡ್ಡ ಕುಸಿದು ಕಾರ್ಮಿಕ ಸಾವು ಪ್ರಕರಣ ; ಕಾಮಗಾರಿ ವೇಳೆ ನಿರ್ಲಕ್ಷ್ಯದಿಂದ ಸಾವು, ಮನೆ ಮಾಲೀಕ- ಗುತ್ತಿಗೆದಾರನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ 

16-12-25 10:25 pm       Mangalore Correspondent   ಕರಾವಳಿ

ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದಾಗ ಗುಡ್ಡ ಕುಸಿದು ವಲಸೆ ಕಾರ್ಮಿಕ ಮೃತಪಟ್ಟ ಘಟನೆಗೆ ಮನೆ ಮಾಲೀಕ ಮತ್ತು ಗುತ್ತಿಗೆದಾರ ಸಮರ್ಪಕ ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿದ್ದು ಕಾರಣವೆಂದು ಮನೆ ಮಾಲೀಕ ಗೌತಮ್ ರಾಜ್ ಮತ್ತು ಗುತ್ತಿಗೆದಾರನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಳ್ಳಾಲ, ಡಿ.16 : ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದಾಗ ಗುಡ್ಡ ಕುಸಿದು ವಲಸೆ ಕಾರ್ಮಿಕ ಮೃತಪಟ್ಟ ಘಟನೆಗೆ ಮನೆ ಮಾಲೀಕ ಮತ್ತು ಗುತ್ತಿಗೆದಾರ ಸಮರ್ಪಕ ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿದ್ದು ಕಾರಣವೆಂದು ಮನೆ ಮಾಲೀಕ ಗೌತಮ್ ರಾಜ್ ಮತ್ತು ಗುತ್ತಿಗೆದಾರನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳವಾರ ಬೆಳಗ್ಗೆ ನಡೆದ ದುರ್ಘಟನೆಯಲ್ಲಿ ಮಂಗಳೂರಿನ ಕೂಳೂರಿನಲ್ಲಿ ವಾಸವಾಗಿದ್ದ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹನುಮಕಟ್ಟೆ ನಿವಾಸಿ ಬಾಳಪ್ಪ ಜಾವೂರು (37) ಮೃತಪಟ್ಟಿದ್ದರು. ಸೇವಂತಿಗುತ್ತು ಗೌತಮ್ ರಾಜ್ ಎಂಬವರು ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ನಡೆಸಲು ಪದವಿನಂಗಡಿಯ ಅವಿನಾಶ್ ಎಂಬವರಿಗೆ ಗುತ್ತಿಗೆ ನೀಡಿದ್ದರು. ಕಾರ್ಮಿಕರಾದ ಬಾಳಪ್ಪ, ಯಮನಪ್ಪ ಪರಸಪ್ಪ ಶಿರಹಟ್ಟಿ, ಭೀಮಪ್ಪ ಬಾದಾಮಿ, ಕೊಪ್ಪಳದ ಶಿವು ಕುಷ್ಟಗಿ ಮತ್ತು ಹನುಮಪ್ಪ ಬಾದಾಮಿ ಎಂಬವರು ಕಾಮಗಾರಿಯಲ್ಲಿ ತೊಡಗಿದ್ದರು. 

ಬೆಳಗ್ಗೆ ಸುಮಾರು 11.45ರ ವೇಳೆ ಮನೆಯ ಹಿಂಭಾಗದ ಸುಮಾರು 25 ಅಡಿ ಎತ್ತರದ ಗುಡ್ಡದ ಮಣ್ಣಿನ ದಿಣ್ಣೆ ಏಕಾಏಕಿ ಬಾಳಪ್ಪ ಅವರ ಮೇಲೆಯೇ ಕುಸಿದು ಬಿದ್ದಿದೆ. ಈ ವೇಳೆ ಜತೆಯಲ್ಲಿದ್ದ ಕಾರ್ಮಿಕರಾದ ಹನುಮಪ್ಪ ಮತ್ತು ಯಮನಪ್ಪ ಅವರ ಮೇಲೂ ಮಣ್ಣು ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮಣ್ಣಿನಡಿ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಳಪ್ಪನನ್ನ ಕಾರ್ಮಿಕರು ಮತ್ತು ಸ್ಥಳೀಯರು ಹರಸಾಹಸ ಪಟ್ಟು ಹೊರ ತೆಗೆದಿದ್ದರೂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗುಡ್ಡ ಕುಸಿತದ ತೀವ್ರತೆಗೆ ಕಾಮಗಾರಿಯಲ್ಲಿ ತೊಡಗಿದ್ದ ಹಿಟಾಚಿ ಯಂತ್ರವೊಂದು ಮಣ್ಣಿನಡಿ ಸಿಲುಕಿದೆ.

ಮೃತ ಕೂಲಿ ಕಾರ್ಮಿಕ ಬಾಳಪ್ಪ ಅವರಿಗೆ ಯಾವುದೇ ರೀತಿಯ ಸುರಕ್ಷಿತ ಸಲಕರಣೆಗಳಿಂದ ಭದ್ರತೆಯನ್ನು ನೀಡದೇ ಹಾಗೂ ಸೂಕ್ತ ಮುಂಜಾಗ್ರತೆ ವಹಿಸದೇ  ಗುತ್ತಿಗೆದಾರ ಅವಿನಾಶ್ ಮತ್ತು ಮನೆ ಮಾಲೀಕರಾದ ಗೌತಮ್ ರಾಜ್ ರವರು ನಿರ್ಲಕ್ಷ್ಯತನ ತೋರಿದ್ದಾರೆ. ಇವರಿಬ್ಬರ ನಿರ್ಲಕ್ಷ್ಯತನದಿಂದಲೇ ಬಾಳಪ್ಪ ಜಾವೂರು ಅವರ ಸಾವು ಸಂಭವಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಜರಗಿಸುವಂತೆ ಕೂಲಿ ಕಾರ್ಮಿಕರಾದ ಯಮನಪ್ಪ ಪರಸಪ್ಪ ಅವರು ನೀಡಿರುವ ದೂರಿನಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In connection with the death of a migrant labourer caused by a landslide during retaining wall construction in Ullal, police have registered an FIR against the house owner and the contractor, citing negligence and failure to take safety precautions.