BJP Vijayendra in Bantwal, Brijesh Chowta: ದಕ್ಷಿಣ ಕನ್ನಡ ಜನರು ದೇಶಭಕ್ತರು, ಸೇನಾ ಹಿನ್ನೆಲೆಯ ಅಭ್ಯರ್ಥಿ ಸಿಕ್ಕಿರುವುದು ನಮ್ಮ ಸೌಭಾಗ್ಯ, ಕ್ಯಾ.ಬ್ರಿಜೇಶ್ ಚೌಟರನ್ನು ಮೂರು ಲಕ್ಷ ಅಂತರದಿಂದ ಗೆಲ್ಲಿಸಲಿದ್ದಾರೆ ; ಬಿ.ವೈ ವಿಜಯೇಂದ್ರ

20-04-24 08:16 pm       Mangalore Correspondent   ಕರಾವಳಿ

ನಮಗೆ ಬಿಜೆಪಿ ಅಭ್ಯರ್ಥಿಯಾಗಿ ಸೇನೆಯಲ್ಲಿ ದುಡಿದ ವ್ಯಕ್ತಿ ಸಿಕ್ಕಿರುವುದು ಸೌಭಾಗ್ಯ. ಸೇನೆಯಲ್ಲಿ ದುಡಿದು ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳಿಂದ ಈ ಜಿಲ್ಲೆಯ ಮತದಾರರು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ, ಎ.20: ದಕ್ಷಿಣ ಕನ್ನಡದ ಜನರು ದೇಶಭಕ್ತರು. ಅವರ ರಕ್ತದ ಕಣ ಕಣದಲ್ಲಿ ಹಿಂದುತ್ವ ಇದೆ. ಕುಟುಂಬ, ಸಂಬಂಧಗಳನ್ನು ದೂರ ಇರಿಸಿ ದೇಶ ಕಾಯುವ ಸೈನಿಕರಿಗೆ ಬೇರಾವುದೂ ಸಾಟಿ ಇಲ್ಲ. ನಮಗೆ ಬಿಜೆಪಿ ಅಭ್ಯರ್ಥಿಯಾಗಿ ಸೇನೆಯಲ್ಲಿ ದುಡಿದ ವ್ಯಕ್ತಿ ಸಿಕ್ಕಿರುವುದು ಸೌಭಾಗ್ಯ. ಸೇನೆಯಲ್ಲಿ ದುಡಿದು ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳಿಂದ ಈ ಜಿಲ್ಲೆಯ ಮತದಾರರು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಬಿಸಿ ರೋಡ್ ಬಳಿಯ ನಾರಾಯಣ ಗುರು ಮಂದಿರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಹತ್ತು ವರ್ಷಗಳ ನಂತರವೂ ಒಬ್ಬ ನಾಯಕ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಂದರೆ, ಆ ವ್ಯಕ್ತಿ ಜನರ ನಂಬಿಕೆ ಉಳಿಸಿಕೊಂಡಿದ್ದಾರೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದ್ದಾರೆ ಎಂದರ್ಥ. ನರೇಂದ್ರ ಮೋದಿಯವರು ನುಡಿದಂತೆ ದೇಶದ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದಾರೆ. ಸರ್ವಜನರ ಅಭಿವೃದ್ಧಿಗಾಗಿ ಯೋಜನಗೆಳನ್ನು ಹಮ್ಮಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಪ್ರತಿ ಬೂತಿನಲ್ಲೂ ನಾವು ಅತಿ ಹೆಚ್ಚು ಮತ ಪಡೆಯುವ ಸವಾಲು ಪಡೆಯಬೇಕು. ಅದಕ್ಕಾಗಿ ಮತದಾರರನ್ನು ಭೇಟಿಯಾಗಿ ಮೋದಿಯವರ ಯೋಜನೆಗಳನ್ನು ಹೇಳಿ ಮತಗಿಟ್ಟಿಸುವ ಕೆಲಸ ಮಾಡಬೇಕು ಎಂದರು.

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಉಲ್ಲೇಖಿಸಿದ ವಿಜಯೇಂದ್ರ, ಘಟನೆಯಾದ ಕೂಡಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಅದು ವೈಯಕ್ತಿಕ ಎಂದು ಹೇಳಿಕೆ ನೀಡುತ್ತಾರೆ. ಒಂದು ಕೊಲೆ ವೈಯಕ್ತಿಕ ಹೇಗಾಗುತ್ತದೆ. ಹೋದ ಜೀವಕ್ಕೆ ಬೆಲೆ ಇಲ್ಲವೇ.. ಅಲ್ಲಿ ಆರೋಪಿ ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ಕೊಲೆ ಕೃತ್ಯ ಕ್ಷುಲ್ಲಕ ಆಗುತ್ತದೆಯೇ ಎಂದು ಪ್ರಶ್ನಿಸಿದರು.

'ಆಗದ್ದನ್ನು' ಮೋದಿ ಮಾಡಿ ತೋರಿಸಿದ್ದಾರೆ ; ಬ್ರಿಜೇಶ್ ಚೌಟ 

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದನ್ನು ಖಂಡಿಸುವುದಕ್ಕೂ ಕಾಂಗ್ರೆಸಿಗರಿಗೆ ಧೈರ್ಯ ಇಲ್ಲ. ಈ ರೀತಿಯ ತುಷ್ಟೀಕರಣ ಮಾಡಿದರೆ ದೇಶದ ಉಳಿವು ಸಾಧ್ಯವೇ ಎಂದು ಪ್ರಶ್ನಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಈ ಜೀವಮಾನದಲ್ಲಿ ನಾವು ನೋಡುತ್ತೇವೋ ಎನ್ನುವ ಸಂಶಯದಲ್ಲಿದ್ದೆವು. ಆದರೆ ಮೋದಿಯವರು ಮಂದಿರವನ್ನು ಮಾಡಿ ತೋರಿಸಿದ್ದಾರೆ. ರಾಮ ಈ ದೇಶದ ಅಸ್ಮಿತೆ. ಜನರ ಭಾವನೆಯ ಪ್ರತಿಬಿಂಬ. ರಾಮನ ಮಂದಿರವನ್ನು ಆತನ ಜನ್ಮಸ್ಥಾನದಲ್ಲಿಯೇ ಮಾಡಿತೋರಿಸಿದ್ದು ಮೋದಿಯವರ ಶಕ್ತಿ. ಅಂಥ ಶಕ್ತಿಯೇ ಮತ್ತೊಮ್ಮೆ ಈ ದೇಶ ಆಳಲು ನಾವೆಲ್ಲ ಕೈಜೋಡಿಸಬೇಕಾಗಿದೆ. ಮುಂದಿನ ಇಪ್ಪತ್ತೈದು ವರ್ಷ ಹಿಂದುತ್ವದ ಅಸ್ಮಿತೆಯ ಕಾಲ. ಈ ಚುನಾವಣೆ ರಾಷ್ಟ್ರವನ್ನು ಗೆಲ್ಲಿಸುವ ಚುನಾವಣೆ. ದೇಶದಲ್ಲಿ ಕಾಂಗ್ರೆಸ್ ಬಿತ್ತುತ್ತಿರುವ ರಾಷ್ಟ್ರವಿರೋಧಿ ಮಾನಸಿಕತೆ ವಿರುದ್ಧ ಮತ ಚಲಾಯಿಸಬೇಕಿದೆ  ಎಂದರು.

ಬಿಜೆಪಿಗೆ ಹೋಗಲು ಜನಾರ್ದನ ಪೂಜಾರಿ ಆಶೀರ್ವಾದ ಮಾಡಿದ್ದಾರೆ ; ಕವಿತಾ ಸನಿಲ್ 

ಸಮಾವೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಮತ್ತು ಬಂಟ್ವಾಳದ ತಾಲೂಕು ಪಂಚಾಯತ್ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ, ಮಾತನಾಡಿದ ಕವಿತಾ ಸನಿಲ್, ನನ್ನ ರಾಜಕೀಯ ಗುರು ಜನಾರ್ದನ ಪೂಜಾರಿ. ಬಿಜೆಪಿ ಸೇರುವಾಗಲೂ ಪೂಜಾರಿಯವರ ಆಶೀರ್ವಾದ ಕೇಳಿದ್ದೇನೆ. ಬಿಜೆಪಿಗೆ ಹೋಗಿ, ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ, ನೇಹಾ ಹತ್ಯೆಯನ್ನು ಕ್ಷುಲ್ಲಕ ಎನ್ನುವ ರೀತಿ ಬಿಂಬಿಸಿದ್ದನ್ನು ನೋಡಿದ್ದೇವೆ. ದೇಶದಲ್ಲಿ ಮೋದಿಯವರ ಆಡಳಿತ ಮೆಚ್ಚಿದ್ದು ದೇಶದಲ್ಲಿ ಹಿಂದುತ್ವ ಉಳಿಯಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿ ಸೇರುತ್ತಿದ್ದೇನೆ. ಕಾಂಗ್ರೆಸಿಗೆ ಹೋಲಿಸಿದರೆ ಸೇನೆಯಲ್ಲಿ ದುಡಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಒಳ್ಳೆಯ ಮತ್ತು ಸಮರ್ಥ ಅಭ್ಯರ್ಥಿ. ದೇಶ ಕಾಯುವ ಸೈನಿಕ ನಮ್ಮನ್ನು ಕಾಯುತ್ತಾರೆಂಬ ವಿಶ್ವಾಸ ಇದೆ. ಅವರ ಗೆಲುವಿಗಾಗಿ ನಾವೆಲ್ಲ ಜಾತಿ ಮತ ಭೇದ ಬದಿಗಿಟ್ಟು ಶ್ರಮಿಸಬೇಕಿದೆ ಎಂದರು. 

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಜೆಡಿಎಸ್ ಮುಖಂಡ ಅಕ್ಷಿತ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪೂಜಾ ಪೈ, ಜಗದೀಶ ಶೇಣವ, ಯತೀಶ್ ಆರ್ವಾರ್, ಕೆ.ಹರಿಕೃಷ್ಣ ಬಂಟ್ವಾಳ, ರಾಜೇಶ್ ಕಾವೇರಿ, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಕಿಶೋರ್ ಕುಮಾರ್, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸಭೆಯಲ್ಲಿದ್ದರು. ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು.

No doubt Brijesh Chowta will win the elections and be the MP of DK says Vijayendra in Bantwal. We are lucky enough that we have got a Indian  solider as our candidate from the BJP party he added.