ಬ್ರೇಕಿಂಗ್ ನ್ಯೂಸ್
18-04-24 11:00 pm Mangalore Correspondent ಕರಾವಳಿ
ಮಂಗಳೂರು, ಎ.18: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಮಟ್ಟಿಗೆ ಭದ್ರಕೋಟೆ. ಯಾಕಂದ್ರೆ, ಕಳೆದ 33 ವರ್ಷಗಳಿಂದ ಬಿಜೆಪಿ ಹಿಂದುತ್ವದ ವಿಚಾರಧಾರೆ ಇಟ್ಟುಕೊಂಡೇ ಈ ಕ್ಷೇತ್ರವನ್ನು ಗೆದ್ದುಕೊಂಡು ಬಂದಿದೆ. ಅದಕ್ಕೂ ಹಿಂದೆ ಜನಾರ್ದನ ಪೂಜಾರಿಯವರು ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು. 1991ರಲ್ಲಿ ಕಾಂಗ್ರೆಸ್ ಪಾಲಿನ ದೊಡ್ಡ ನಾಯಕರಾಗಿದ್ದ ಜನಾರ್ದನ ಪೂಜಾರಿ ಸೋತ ಬಳಿಕ ದಕ್ಷಿಣ ಕನ್ನಡ ಕ್ಷೇತ್ರದ ಚಹರೆಯೇ ಬದಲಾಗಿತ್ತು. ಸೀಮಿತ ಸಂಖ್ಯೆಯ ಸಾಮಾನ್ಯ ಜೈನ ಕುಟುಂಬದ ಧನಂಜಯ ಕುಮಾರ್ ಎದುರಲ್ಲೂ ಪೂಜಾರಿ ಗೆಲ್ಲಲಿಕ್ಕಾಗಲಿಲ್ಲ. ಇಲ್ಲಿ ಹಿಂದುತ್ವ ಗಟ್ಟಿಗೊಂಡಿದ್ದಕ್ಕೆ ಕಾಂಗ್ರೆಸ್ ನಾಯಕರು ಮಾಡಿಕೊಂಡ ಎಡವಟ್ಟುಗಳು, ತುಷ್ಟೀಕರಣದ ಹೇಳಿಕೆಗಳೂ ಕಾರಣವಾಗಿದ್ದವು.
1990ರ ದಶಕದಲ್ಲಿ ಎಲ್.ಕೆ.ಆಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ದೇಶಾದ್ಯಂತ ಹಿಂದುಗಳನ್ನು ಒಟ್ಟುಗೂಡಿಸಲು ಹಮ್ಮಿಕೊಂಡಿದ್ದ ರಥಯಾತ್ರೆ, ಅಯೋಧ್ಯೆ ಸಲುವಾಗಿ ನಡೆಸಿದ್ದ ಚಳವಳಿ ಉತ್ತರ ಭಾರತದಲ್ಲಿ ಹೆಚ್ಚು ಪರಿಣಾಮಗಳನ್ನು ಮೂಡಿಸಿದ್ದರೆ, ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಪ್ರಭಾವ ಬೀರಿತ್ತು. ಆನಂತರ ನಡೆದುಬಂದ ಅಯೋಧ್ಯೆ ಪರ ಚಳವಳಿ ಹಿಂದು ಜನರನ್ನು ದೇಶದಲ್ಲಿ ಧ್ರುವೀಕರಣಗೊಳಿಸುತ್ತ ಸಾಗಿದರೆ, ಇತ್ತ ಕೆಲವು ಕಾಂಗ್ರೆಸ್ ನಾಯಕರು ರಾಮನ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಎತ್ತಿದ್ದು ಆ ಪಕ್ಷದತ್ತ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಿತ್ತು. ಇದರ ಪರಿಣಾಮವೇ ರಾಷ್ಟ್ರೀಯ ಹಿತಾಸಕ್ತಿ ಎನ್ನುವ ಹೊಸ ಪದಪುಂಜ ಹಿಂದುಗಳಲ್ಲಿ ಜಾಗೃತಗೊಳ್ಳತೊಡಗಿತ್ತು. ಅಯೋಧ್ಯೆ, ರಾಮನ ಕುರಿತ ಪ್ರಶ್ನೆಗಳು ಕರ್ನಾಟಕದ ಮಲೆನಾಡು ಮತ್ತು ಕರಾವಳಿಯಲ್ಲಿ ಹಿಂದು ಮತಗಳನ್ನು ಸ್ಪಷ್ಟವಾಗಿ ವಿಭಜನೆಗೊಳ್ಳಲು ಕಾರಣವಾಗಿದ್ದವು. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಇದಕ್ಕೆಲ್ಲ ನೀರೆರೆದು ಪೋಷಿಸುತ್ತ ಬರುತ್ತಿದ್ದರೆ, ಕಾಂಗ್ರೆಸ್ ನಾಯಕರು ಇದನ್ನು ಎದುರಿಸುವ ಬಗೆ ತಿಳಿಯದೇ ಚಡಪಡಿಸುತ್ತಿದ್ದರು.
ಅದಕ್ಕೂ ಮುನ್ನ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಛಾಪು ಮಾತ್ರ ಇತ್ತು. ಬಿಜೆಪಿ ಪಾಲಿಗೆ ಒಂದೆರಡು ಶಾಸಕ ಸ್ಥಾನ ಬಿಟ್ಟರೆ ಪ್ರತ್ಯೇಕ ಅಸ್ತಿತ್ವವೇ ಇರಲಿಲ್ಲ. ಮಲೆನಾಡಲ್ಲಿ ದೇವೇಗೌಡರು, ರಾಮಕೃಷ್ಣ ಹೆಗಡೆ, ಕರಾವಳಿಯಲ್ಲಿ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರೇ ದೊಡ್ಡ ನಾಯಕರಾಗಿದ್ದರು. ಯಡಿಯೂರಪ್ಪ ಶಾಸಕರಾಗಿದ್ದರೂ ಅವರ ವರ್ಚಸ್ಸು ಜಿಲ್ಲೆಯ ಗಡಿ ಮೀರಿರಲಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಉಡುಪಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ತಳಮಟ್ಟದಲ್ಲಿ ಪಕ್ಷಕ್ಕೆ ಅಡಿಪಾಯ ಒದಗಿಸಿತ್ತು ಅನ್ನುವುದು ಬಿಟ್ಟರೆ, ಇದು ಮುಂದೆ ಹಿಂದುತ್ವ ಶಕ್ತಿಯ ರಾಜಧಾನಿ ಆಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಬಳಿಕ ನಡೆದ ಚುನಾವಣೆಗಳಲ್ಲಿ ವಿಧಾನಸಭೆಗೆ ಕಾಂಗ್ರೆಸಿನತ್ತ ಮತ ಚಲಾಯಿಸಿದರೂ, ಲೋಕಸಭೆಯಲ್ಲಿ ರಾಷ್ಟ್ರೀಯ ವಿಚಾರಧಾರೆಗಳೇ ಪ್ರಮುಖವಾಗುತ್ತಿದ್ದವು. ಲೋಕಸಭೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತ ಬಂದಿದ್ದು ಮತದಾರನ ಒಲವು, ಬದಲಾವಣೆಯ ಗತಿಯನ್ನು ತೋರಿಸುತ್ತಿತ್ತು.
ಆ ಕಾಲದಲ್ಲಿ ಕರಾವಳಿಯ ಕಾಂಗ್ರೆಸ್ ಅಂದರೆ, ಜನಾರ್ದನ ಪೂಜಾರಿ ಅವರೇ ಕೈ, ಬಾಯಿ ಎನ್ನುವಂತಹ ಸ್ಥಿತಿ ಇತ್ತು. ಎಷ್ಟರ ಮಟ್ಟಿಗೆ ಅಂದರೆ, ಪೂಜಾರಿಯವರ ಎದುರಲ್ಲಿ ಇತರೇ ನಾಯಕರು ಕುಳಿತುಕೊಳ್ಳುವುದಕ್ಕೂ ಅಪ್ಪಣೆ ಬೇಕಿತ್ತು. ಪೂಜಾರಿ ಕುಳಿತಿದ್ದರೆ ಹೆಚ್ಚಿನ ನಾಯಕರು ನಿಂತೇ ಅವರೊಂದಿಗೆ ಮಾತನಾಡುತ್ತಿದ್ದರು. ಗಾಂಧಿ ಕುಟುಂಬದ ವರೆಗೂ ಸಂಪರ್ಕ ಇಟ್ಟುಕೊಂಡಿದ್ದ ಕಾರಣ ಜನಾರ್ದನ ಪೂಜಾರಿ ಅವರನ್ನು ಪ್ರಶ್ನಿಸುವಷ್ಟು ಧೈರ್ಯ ಯಾರಿಗೂ ಇರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂಜಾರಿ ಹೇಳಿದ್ದೇ ವೇದವಾಕ್ಯ ಎನ್ನುವಂತಿತ್ತು. ಆನಂತರ, ಉಡುಪಿ ಜಿಲ್ಲೆ ಪ್ರತ್ಯೇಕಗೊಂಡ ಬಳಿಕ ಜನಾರ್ದನ ಪೂಜಾರಿ ಗರಡಿಯಲ್ಲೇ ಬೆಳೆದು ಸೋನಿಯಾ ಗಾಂಧಿಗೆ ಹತ್ತಿರವಾಗಿದ್ದ ಆಸ್ಕರ್ ಫೆರ್ನಾಂಡಿಸ್ ಉಡುಪಿ ಕಾಂಗ್ರೆಸಿನ ಹಿಡಿತ ತೆಗೆದುಕೊಂಡಿದ್ದರು.
ಜನಾರ್ದನ ಪೂಜಾರಿಯವರ ಅಹಮಿಕೆ, ನಿಷ್ಠುರ ಮಾತು, ವರ್ತನೆಯಿಂದಾಗಿ ಬರಬರುತ್ತಾ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸಿನಲ್ಲಿ ಬಣಗಳ ಗೊಣಗಾಟ ಶುರುವಾಗಿತ್ತು. ರಮಾನಾಥ ರೈ ಮತ್ತು ವೀರಪ್ಪ ಮೊಯ್ಲಿ ಬಣ ಪೂಜಾರಿಗೆದುರಾಗಿ ಗಟ್ಟಿಗೊಳ್ಳತೊಡಗಿತ್ತು. ಇತ್ತ ಹಿಂದುತ್ವದ ವಿಚಾರಧಾರೆ ಉಚ್ಛ್ರಾಯಗೊಳ್ಳುತ್ತಿದ್ದರೆ, ಪ್ರತಿಯಾಗಿ ಕಾಂಗ್ರೆಸ್ ನಾಯಕರಲ್ಲಿ ದಾಳಗಳೇ ಇರಲಿಲ್ಲ. ಬದಲಿಗೆ, ಒಬ್ಬರಿಗೊಬ್ಬರನ್ನು ಸೋಲಿಸುವುದೇ ಇವರ ಗುರಿಯಾಗಿರುತ್ತಿತ್ತು. ಆಗೆಲ್ಲಾ ಮೊಬೈಲ್ ಇಲ್ಲದ ಕಾಲದಲ್ಲಿಯೂ ಜನಾರ್ದನ ಪೂಜಾರಿಯವರು ಮುಸ್ಲಿಮರ ಬಗ್ಗೆ ಆಡುತ್ತಿದ್ದ ಆಪ್ತ ಮಾತುಗಳು ಹಿಂದುಗಳ ನಡುವೆ ಬಿರುಕು ಮೂಡಿಸುತ್ತಿದ್ದವು. ಮರುದಿನ ಪತ್ರಿಕೆಯಲ್ಲಿ ಬರುತ್ತಿದ್ದ ವರದಿಗಳೇ ಜನಮಾನಸದಲ್ಲಿ ಚರ್ಚೆಗೀಡು ಮಾಡುತ್ತಿದ್ದವು. ಪೂಜಾರಿ ಆಡಿದ ಮಾತುಗಳನ್ನೇ ಬಿಜೆಪಿ ನಾಯಕರು ಚುನಾವಣೆಯಲ್ಲಿ ಅಸ್ತ್ರವಾಗಿಸುತ್ತಿದ್ದರೆ, ಹಿಂದುತ್ವ ಸಂಘಟನೆಗಳು ಮತ ಧ್ರುವೀಕರಣದ ಕೆಲಸ ಮಾಡುತ್ತಿದ್ದವು.
ಹತ್ತು ವರ್ಷದ ಯುಪಿಎ ಆಳ್ವಿಕೆ ಸಂದರ್ಭದಲ್ಲಿ ರಾಮಸೇತು ಮತ್ತು ರಾಮನ ಬಗ್ಗೆ ಸುಪ್ರೀಂ ಕೋರ್ಟಿಗೆ ನೀಡಿದ್ದ ಅಫಿಡವಿಟ್ಟಿಗೆ ಕರಾವಳಿಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. 2009 ಮತ್ತು 2014ರಲ್ಲಿ ಜನಾರ್ದನ ಪೂಜಾರಿ ಸೋಲಿಗೆ ಬಿಜೆಪಿ ಜೊತೆಗಿದ್ದ ಹಿಂದುತ್ವ ಒಂದು ಕಾರಣವಾಗಿದ್ದರೆ, ಕಾಂಗ್ರೆಸಿನಲ್ಲಿದ್ದ ಬಣಗಳೂ ಅಷ್ಟೇ ಕಾರಣವಾಗಿದ್ದವು. 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆಗಷ್ಟೇ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರಕಾರ ಕೊನೆಗೊಂಡಿತ್ತು. ಭ್ರಷ್ಟಾಚಾರದಿಂದಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರೆ, ಒಳ ಜಗಳದಿಂದಾಗಿ ಮೂವರು ಮುಖ್ಯಮಂತ್ರಿ ಪದ ಏರುವಂತಾಗಿತ್ತು. ಭ್ರಷ್ಟಾಚಾರದ ಕೊಳೆ ಮತ್ತು ಬಿಜೆಪಿ ವಿರುದ್ಧ ಯಡಿಯೂರಪ್ಪ ತೊಡೆತಟ್ಟಿ ಕೆಜೆಪಿ ಕಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪರಿಣಾಮ ಬೀರಿತ್ತು. ಆದರೆ ಒಂದೇ ವರ್ಷದಲ್ಲಿ ಎದುರಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಮೋದಿ ಬಿರುಗಾಳಿ ಮತ್ತು ಹಿಂದುತ್ವದ ಗಾಳಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿತ್ತು.
ಹಾಗೆ ನೋಡಿದರೆ, 2019ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದರ ಬಗ್ಗೆಯೇ ಒಲವು ಇರಲಿಲ್ಲ. ಕಾಂಗ್ರೆಸ್ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಬದಲು ತಮ್ಮೊಳಗಿನ ಬಿರುಕನ್ನೇ ಸರಿಮಾಡಿಕೊಂಡಿರಲಿಲ್ಲ. ಮಿಥುನ್ ರೈ ಅಭ್ಯರ್ಥಿಯಾಗಿ ತನ್ನದೇ ಬೆಂಬಲಿಗರನ್ನು ಕಟ್ಟಿಕೊಂಡು ಓಡಾಡಿದ್ದು ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಈ ಬಾರಿ ಕಾರ್ಯಕರ್ತರ ವಿರೋಧ ಮತ್ತು ಆಡಳಿತ ವಿರೋಧಿ ಅಲೆ ಎದುರಿಸಲು ಬಿಜೆಪಿ ಹೊಸ ಮುಖ, ಸೇನಾ ಹಿನ್ನೆಲೆಯ, ಬಂಟ ಸಮುದಾಯದ ಕ್ಯಾ.ಬ್ರಿಜೇಶ್ ಚೌಟರನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ ಜನಾರ್ದನ ಪೂಜಾರಿ ಜಾಗವನ್ನು ಮತ್ತೆ ಪಡೆಯಬೇಕೆಂದು ಅವರ ಶಿಷ್ಯ, ಅವರದೇ ಸಮುದಾಯದ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ. ಬಿಲ್ಲವ ಮತ್ತು ಬಂಟ ಸಮುದಾಯದ ಅಭ್ಯರ್ಥಿಗಳಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲ ಪೈಪೋಟಿಯ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಪರವಾಗಿ ಮುಸ್ಲಿಮರಾದಿಯಾಗಿ ಜಾತ್ಯತೀತ ಶಕ್ತಿಗಳು ಒಂದಾಗಿ ಹೆಜ್ಜೆ ಹಾಕತೊಡಗಿದ್ದರೆ, ಬಿಜೆಪಿ ಮೋದಿ ಬಿರುಗಾಳಿ ಮತ್ತು ಹಿಂದುತ್ವದ ಶಕ್ತಿಯನ್ನು ನೆಚ್ಚಿಕೊಂಡಿದೆ. ಬಿಜೆಪಿಯ ಹಿಂದುತ್ವದ ಕೋಟೆಯನ್ನು ಅಲುಗಾಡಿಸಲು ಕಾಂಗ್ರೆಸ್ ಜಾತಿ ಅಸ್ತ್ರವನ್ನು ಪ್ರಯೋಗಿಸಿದೆ. ಬಿಲ್ಲವರು ಅತಿ ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಅವರನ್ನು ಓಲೈಸಲು ಮುಂದಾಗಿದೆ. ಆದರೆ ಹಿಂದುತ್ವ ಶಕ್ತಿಯೆದುರು ಜಾತಿ ಅಸ್ತ್ರ ಇಲ್ಲಿ ಗೌಣ ಅನ್ನುವುದನ್ನು ಇಲ್ಲಿನ ಮತದಾರರು ಬಹಳ ಬಾರಿ ಸಾಬೀತು ಮಾಡಿದ್ದಾರೆ. ಹಿಂದೆಲ್ಲಾ ಚುನಾವಣೆ ಬಂದಾಗ ಸಂಘ ಪರಿವಾರದಿಂದ ಹಿಂದು ಸಮಾಜೋತ್ಸವ ಮಾಡುತ್ತಿದ್ದರು. ಈ ಬಾರಿ ಹಿಂದು ಸಮಾಜೋತ್ಸವ, ಹಿಂದುತ್ವದ ಕಹಳೆಯನ್ನು ಬಹಿರಂಗವಾಗಿ ಮೊಳಗಿಸಿಲ್ಲ ಅನ್ನುವುದಷ್ಟೇ ವ್ಯತ್ಯಾಸ. ಈ ಬಾರಿ ಅಯೋಧ್ಯೆಯಲ್ಲಿ ರಾಮನ ಮಂದಿರ ತಲೆಯೆತ್ತಿದ್ದು ಬಿಜೆಪಿಗೆ ಪ್ಲಸ್ ಆಗಿದ್ದರೆ, ರಾಮನ ಅಸ್ತಿತ್ವದ ಪ್ರಶ್ನಿಸಿದ್ದೇ ಕಾಂಗ್ರೆಸಿಗೆ ಮೈನಸ್. ಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ನಾಯಕರು ದೂರ ನಿಂತಿದ್ದೂ ವಿರೋಧಿ ಪಾಳಯಕ್ಕೆ ಅಸ್ತ್ರವಾಗಿದೆ.
Political report by Headline Karnataka. Dakshina Kannada Lok Sabha constituency is a stronghold for BJP. After all, for the last 33 years, BJP has won this constituency by keeping the ideology of Hindutva. Before that, Janardhan Pujari was the MP for four times in this constituency. In 1991, the face of Dakshina Kannada constituency changed after Janardana Pujari, who was the biggest leader of the Congress party, lost.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm