Umanath Kotian Mangalore; ಬಿಲ್ಲವರು ಜಾತಿ ನೋಡಿದವರಲ್ಲ, ಜನಾರ್ದನ ಪೂಜಾರಿಯಂತವರಿಗೇ ಜಾತಿ ನೋಡಿ ಓಟ್ ಹಾಕಿಲ್ಲ, ಜಿಲ್ಲೆಯ ಜನ ದೇಶಕ್ಕಾಗಿ ಮತ ಚಲಾಯಿಸುತ್ತಾರೆ ; ಉಮಾನಾಥ ಕೋಟ್ಯಾನ್ 

13-04-24 08:14 pm       Mangaluru correspondent   ಕರಾವಳಿ

ಬಿಲ್ಲವರು ಜಾತಿಗೆ ಆದ್ಯತೆ ನೀಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಖಡಕ್ ಉತ್ತರ ನೀಡಿದ್ದಾರೆ. ಜನಾರ್ಧನ ಪೂಜಾರಿ ಅವರಂತಹ ಮೇರು ನಾಯಕ ಚುನಾವಣೆ ನಿಂತಾಗಲೂ ಈ ಜಿಲ್ಲೆಯ ಜನ ಜಾತಿಯನ್ನು ನೋಡಿಲ್ಲ.

ಮಂಗಳೂರು, ಎ.13: ಬಿಲ್ಲವರು ಜಾತಿಗೆ ಆದ್ಯತೆ ನೀಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಖಡಕ್ ಉತ್ತರ ನೀಡಿದ್ದಾರೆ. ಜನಾರ್ಧನ ಪೂಜಾರಿ ಅವರಂತಹ ಮೇರು ನಾಯಕ ಚುನಾವಣೆ ನಿಂತಾಗಲೂ ಈ ಜಿಲ್ಲೆಯ ಜನ ಜಾತಿಯನ್ನು ನೋಡಿಲ್ಲ. ಬಿಲ್ಲವರು ಅವರ ಪರ ನಿಲ್ಲಲಿಲ್ಲ. ಹಾಗಿರುವಾಗ ಈ ಬಾರಿ ಜಾತಿ ನೋಡುತ್ತಾರೆ ಎಂಬ ವಿಶ್ವಾಸವಿದೆಯೇ ಎಂದು ಉಮಾನಾಥ ಕೋಟ್ಯಾನ್ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಯುವ ನಾಯಕ, ಭಾರತೀಯ ಸೇನೆಯಲ್ಲಿ ದುಡಿದು ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪಕ್ಷ ಅವಕಾಶ ನೀಡಿದೆ. ಮೋದಿಯವರು ದೇಶದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮದಿಂದಾಗಿ ಜನ ಮತ್ತೆ ಅವರನ್ನು ಆಯ್ಕೆ ಮಾಡಲಿದ್ದಾರೆ. ಇಡೀ ದೇಶದಲ್ಲಿ ಮೋದಿ ಹವಾ ಎದ್ದಿದ್ದು ಜನ ಜಾತಿ ಮತ ನೋಡದೆ ಆಯ್ಕೆ ಮಾಡಲಿದ್ದಾರೆ ಎಂದರು. 

ಮುಲ್ಕಿಯಲ್ಲಿ ನೀವು ಬಿಲ್ಲವ ಅಭ್ಯರ್ಥಿಗಳಿಗೆ ಮತ ಕೊಡಬೇಕು ಎಂದಿದ್ರಲ್ಲಾ ಎಂದು ಕೇಳಿದ ಪ್ರಶ್ನೆಗೆ, ಬಿಲ್ಲವ ರಾಷ್ಟ್ರೀಯ ಸಮಾವೇಶದಲ್ಲಿ ನಾನು ಆ ಮಾತು ಹೇಳಿದ್ದೆ. ಅಲ್ಲಿ ಜಾತಿ ವಿಷಯ ಮಾತನಾಡಬೇಕಿತ್ತು. ಅದು ನನ್ನ ಕರ್ತವ್ಯ, ನಾನು ಸಮಾಜದ ಒಬ್ಬ ಪ್ರತಿನಿಧಿಯಾಗಿ ಅಲ್ಲಿ ಮಾತನಾಡಿದ್ದೇನೆ. ಇಲ್ಲಿ ನಾನು ಮಾತನಾಡಬೇಕಿರುವುದು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ. ಶಿಸ್ತಿನ ಸಿಪಾಯಿಯಾಗಿ, ಆರ್.ಎಸ್.ಎಸ್ ಸ್ವಯಂಸೇವಕನಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು. 

ನಳಿನ್ ಅವರು ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದಾಗ ಜಿಲ್ಲೆಯಲ್ಲಿ ಅವರು ಯಾರೆಂದೇ ಗೊತ್ತಿರಲಿಲ್ಲ‌. ಅವರ ಹೆಸರಿಬ ಕಾರಣಕ್ಕೆ ಹೆಣ್ಣೋ ಗಂಡೋ ಅನ್ನುವ ಸಂಶಯವೂ ಕೆಲವರಲ್ಲಿತ್ತು‌. ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಬಿಟ್ಟು ಮತದಾರನಿಗೆ ಪರಿಚಯ ಇರಲಿಲ್ಲ. ಚುನಾವಣೆ ಸಂದರ್ಭ ಮೊದಲ ಬಾರಿಗೆ ಹಿಂದೂ ಸಮಾಜೋತ್ಸವ ನಡೆದಾಗ, ಇವರು ನಳಿನ್ ಕುಮಾರ್ ಕಟೀಲ್ ನಮ್ಮ ಅಭ್ಯರ್ಥಿʼ ಎಂದು ಹೇಳಿಕೊಂಡು ನಳಿನ್ ಕುಮಾರ್ ಕಟೀಲ್ ಕೈ ಹಿಡಿದು ಒಂದು ಸುತ್ತು ಬಂದಿದ್ದೇನೆ. ಮೂರು ದಶಕಗಳಿಂದ ಈ ಕ್ಷೇತ್ರದ ಜನ ದೇಶಕ್ಕಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಅತೀ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು.

ಜನಪ್ರತಿನಿಧಿಯಾದವರು ಅನುದಾನವನ್ನು ತಂದುಕೊಡಲು ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕಾದವರು ಸಂಬಂಧಿತ ಅಧಿಕಾರಿಗಳು. ದ.ಕ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಯುವಕ ನಾಯಕನನ್ನು, ಸೇನೆಯಲ್ಲಿ ಕೆಲಸ ಮಾಡಿ ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರು ಎಲ್ಲ ಭಾಷೆಗಳನ್ನು ಬಲ್ಲವರು. ಹಿಂದೂ ಸಮಾಜೋತ್ಸವಕ್ಕೆ ಜನ ಸೇರುವಂತೆಯೇ ಚೌಟರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಜನಸ್ತೋಮ ಸೇರಿ ಬೆಂಬಲ ಕೊಟ್ಟಿದೆ. ಖಂಡಿತವಾಗಿಯೂ ಕ್ಯಾ. ಚೌಟರು ಎಲ್ಲ ಕಾರ್ಯಕರ್ತರು- ಮುಖಂಡರ ಪ್ರಯತ್ನದಿಂದ ಕಳೆದ ಬಾರಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲುವುದು ನಿಶ್ಚಿತ. ಯಾವುದೇ ಗೊಂದಲ ನಮ್ಮ ಜಿಲ್ಲೆಯಲ್ಲಿಲ್ಲ. ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ 30 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬರಿ 50 ಸಾವಿರಕ್ಕೂ ಹೆಚ್ಚಿನ ಲೀಡ್ ತಂದುಕೊಡುತ್ತೇವೆ ಎಂದು ಶಾಸಕ ಕೋಟ್ಯಾನ್ ಹೇಳಿದರು.

ಬಲಿಷ್ಠ ಭಾರತದ ನಿರ್ಮಾಣಕ್ಕೆ, ವಿಶ್ವಗುರು ಆಗಲು ಹಂತ ಹಂತಗಳಲ್ಲಿ ಪ್ರಧಾನಿ ಮೋದಿ ಯೋಜನೆ ಕೈಗೊಂಡಿದ್ದಾರೆ. ಮಹಾ ಮುತ್ಸದ್ದಿ, ಅಪ್ರತಿಮ ದೇಶಭಕ್ತ ಮೋದಿ ಅವರು ಮತ್ತೊಮ್ಮೆ ಗೆದ್ದು ಬರಲಿದ್ದಾರೆ. ನಾಳೆ ಎಲ್ಲರಿಗೂ ಹಬ್ಬದ ವಾತಾವರಣ. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಜನತೆ ಆಗಮಿಸಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್ ವರೆಗೆ ಬೃಹತ್ ರೋಡ್ ಶೋ ನಡೆಯುತ್ತದೆ.

ಬಿಜೆಪಿ ಎಲ್ಲರ ಪಕ್ಷ. ಜಾತಿ- ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಬಿಜೆಪಿಯ ಪರವಾಗಿದ್ದಾರೆ. ಮುಸ್ಲಿಮರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಆಂಧ್ರದಲ್ಲಿ ರಾಜ್ಯಪಾಲರಾಗಿರುವುದು ನಮ್ಮ ಜಿಲ್ಲೆಯ ನಜೀರ್ ಅವರು. ಹೀಗಾಗಿ ರಾಷ್ಟ್ರೀಯವಾದಿ ಧೋರಣೆ ಹೊಂದಿರುವ ಎಲ್ಲರೂ ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ ಎಂದು ಕೋಟ್ಯಾನ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್‌, ಬಂಟ್ವಾಳ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ ಉಪಸ್ಥಿತರಿದ್ದರು.

Umanath Kotian, MLA of Mulki Moodbidri Constituency, highlighted the achievements of Nalin Kumar Kateel and emphasized the significance of having Narendra Modi as prime minister during his address to the media on Saturday, April 13.