ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ; ಕೊಲ್ಕತ್ತಾ ಆರೆಸ್ಸೆಸ್ ಶತಮಾನೋತ್ಸವದಲ್ಲಿ ಮೋಹನ್ ಭಾಗವತ್ 

22-12-25 06:32 pm       HK News Desk   ದೇಶ - ವಿದೇಶ

ಭಾರತ "ಹಿಂದೂ ರಾಷ್ಟ್ರ" ಎನ್ನುವುದನ್ನು ಸಾಬೀತುಪಡಿಸಲು ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. 

ಕೊಲ್ಕತ್ತಾ, ಡಿ.22 : ಭಾರತ "ಹಿಂದೂ ರಾಷ್ಟ್ರ" ಎನ್ನುವುದನ್ನು ಸಾಬೀತುಪಡಿಸಲು ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. 

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಭಾರತೀಯ ಸಂಸ್ಕೃತಿಯನ್ನು ಪ್ರಶಂಸಿಸುವವರು, ಅನುಸರಿಸುವವರು ಇರುವ ವರೆಗೂ ಭಾರತ ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎನ್ನುವುದಕ್ಕೆ ಸಂವಿಧಾನದ ಉಲ್ಲೇಖ ಅಗತ್ಯವಿದೆಯೇ? ಈ ಪ್ರಕ್ರಿಯೆ ಎಂದಿನಿಂದ ನಡೆಯುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಅದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಾಗುತ್ತದೆಯೇ? ಹಿಂದೂಸ್ತಾನವು ಹಿಂದೂ ರಾಷ್ಟ್ರ ಎನ್ನುವುದಕ್ಕೂ ಅಂತಹ ಮಾನ್ಯತೆ ಬೇಕಾಗಿಲ್ಲ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವವರು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ ಎಂದು ಮೋಹನ್‌ ಭಾಗವತ್‌ ನುಡಿದರು. 

ಸಂಸತ್ತು ಎಂದಾದರೂ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಈ ರೀತಿ ಮಾಡದಿದ್ದರೂ ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ. ಏಕೆಂದರೆ ಸಮಸ್ತ ಭಾರತೀಯರು ಹಿಂದೂಗಳು ಎಂದು ನಾವು ನಂಬುತ್ತೇವೆ" ಎಂದು ಮೋಹನ್‌ ಭಾಗವತ್‌ ಹೇಳಿದರು. 

ಹುಟ್ಟಿನ ಆಧಾರದಲ್ಲಿ ಬರುವ ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿದ ಭಾಗವತ್‌, "ಸಂಸ್ಕೃತಿ ಮತ್ತು ಹಿಂದೂ ಧರ್ಮೀಯರ ಸಂಬಂಧಗಳನ್ನು ಗಮನಿಸಿದರೆ, ಭಾರತವು ಆದಿಕಾಲದಿಂದಲೂ ಹಿಂದೂ ರಾಷ್ಟ್ರ ಎನ್ನುವುದು ತಿಳಿಯುತ್ತದೆ. ಆರ್‌ಎಸ್‌ಎಸ್ ಹಿಂದಿನಿಂದಲೂ ಇದೇ ಮಾತನ್ನು ಹೇಳುತ್ತ ಬಂದಿದೆ. ಜಾತ್ಯತೀತ ಪದವು ಮೂಲತಃ ಸಂವಿಧಾನದ ಪೀಠಿಕೆಯ ಭಾಗವಾಗಿರಲಿಲ್ಲ. ಅದನ್ನು 1976ರ ಸಂವಿಧಾನದ 42ನೇ ತಿದ್ದುಪಡಿ ಮೂಲ ಸೇರಿಸಲಾಯಿತು ಎಂದು ಭಾಗವತ್ ಇತಿಹಾಸವನ್ನು ನೆನಪಿಸಿದರು. 

ಇದೇ ವೇಳೆ ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ದಯನೀಯ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೋಹನ್‌ ಭಾಗವತ್‌, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ ನೆಪದಲ್ಲಿ ಹಿಂದೂಗಳನ್ನು ಕೊಲ್ಲುತ್ತಿರುವುದು ಅತ್ಯಂತ ಖಂಡನೀಯ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

India does not require any constitutional validation to be called a “Hindu Rashtra,” RSS Sarsanghchalak Mohan Bhagwat said at the Rashtriya Swayamsevak Sangh’s centenary celebrations in Kolkata.