ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿಳು ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳ ಬಗ್ಗೆ ಆರೋಪ 

16-12-25 01:56 pm       HK News Desk   ದೇಶ - ವಿದೇಶ

ಮಂಗಳೂರು ಆರ್ ಟಿಓ ಕಚೇರಿ ರೀತಿಯಲ್ಲೇ ಭಟ್ಕಳ ತಹಸೀಲ್ದಾರ್ ಕಚೇರಿಗೆ ತಮಿಳುನಾಡು ಸರ್ಕಾರದ ಐಪಿಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಬಾಂಬ್ ಸ್ಫೋಟದ ಬೆದರಿಕೆ ಹಾಕಲಾಗಿದೆ. ತಮಿಳರು ಹಾಗೂ ಪಾಕಿಸ್ತಾನಿಗಳು ಸೇಡು ತೀರಿಸಲು ತಹಶೀಲ್ದಾರ್ ಕಚೇರಿಯಲ್ಲಿ ಪ್ರಬಲ ಬಾಂಬ್ ಸ್ಫೋಟಿಸಲಿದ್ದಾರೆ. ಅಲ್ಲಿನ ಸಿಬಂದಿಯನ್ನು ಕೂಡಲೇ ತೆರವುಗೊಳಿಸಿ ಎಂದು ಕನ್ನಡದಲ್ಲಿ ಹೆಡ್ಡಿಂಗ್ ನೀಡಿ ಇಂಗ್ಲಿಷ್ ನಲ್ಲಿ ಇ-ಮೇಲ್ ಕಳುಹಿಸಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ. 

ಭಟ್ಕಳ, ಡಿ.15 : ಮಂಗಳೂರು ಆರ್ ಟಿಓ ಕಚೇರಿ ರೀತಿಯಲ್ಲೇ ಭಟ್ಕಳ ತಹಸೀಲ್ದಾರ್ ಕಚೇರಿಗೆ ತಮಿಳುನಾಡು ಸರ್ಕಾರದ ಐಪಿಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಬಾಂಬ್ ಸ್ಫೋಟದ ಬೆದರಿಕೆ ಹಾಕಲಾಗಿದೆ. ತಮಿಳರು ಹಾಗೂ ಪಾಕಿಸ್ತಾನಿಗಳು ಸೇಡು ತೀರಿಸಲು ತಹಶೀಲ್ದಾರ್ ಕಚೇರಿಯಲ್ಲಿ ಪ್ರಬಲ ಬಾಂಬ್ ಸ್ಫೋಟಿಸಲಿದ್ದಾರೆ. ಅಲ್ಲಿನ ಸಿಬಂದಿಯನ್ನು ಕೂಡಲೇ ತೆರವುಗೊಳಿಸಿ ಎಂದು ಕನ್ನಡದಲ್ಲಿ ಹೆಡ್ಡಿಂಗ್ ನೀಡಿ ಇಂಗ್ಲಿಷ್ ನಲ್ಲಿ ಇ-ಮೇಲ್ ಕಳುಹಿಸಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ. 

ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ ಎಂಬ ಹೆಸರಿನ ಇಮೇಲ್ ಮೂಲಕ ಇಂದು ಬೆಳಗ್ಗೆ 7.25ಕ್ಕೆ ಸಂದೇಶ ರವಾನೆ ಮಾಡಲಾಗಿದೆ. ತಮಿಳುನಾಡು ಡಿಎಂಕೆ ಸರಕಾರದ ವಿರುದ್ಧ ಬರಹ ಬರೆಯಲಾಗಿದೆ. ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನಗೋಲು ಮುಂತಾದವರ ಸೂಚನೆಯಂತೆ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು. ಇದು ಹತೋಟಿ ತಪ್ಪಿದಾಗ ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಎಂಬವರು ಗೆಲಿಲಿಯೋ ಆ್ಯಪ್ ಮೂಲಕ ಕನ್ನಡದವರ ಮೇಲೆ ಗೂಢಚಾರಿಕೆ ಮಾಡಿದ್ದರು. ಡಿಎಂಕೆ ಉದಯನಿಧಿಯ ಉದ್ದೇಶ ಹಣ ಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಎಂದು ಸಂದೇಶದಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಬರೆಯಲಾಗಿದೆ. 

ಅಲ್ಲದೇ, ತಮಿಳುನಾಡಿನಲ್ಲಿ ಹಲವು ಅನಾಥಾಶ್ರಮಗಳ ಹೆಣ್ಣು ಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ. ಡಿಎಂಕೆ ನಾಯಕತ್ವಕ್ಕೆ ಈ ಬಗ್ಗೆ ಮಾಹಿತಿಯಿದ್ದು, ಹೆಣ್ಣು ಮಕ್ಕಳನ್ನು ಮಾನಸಿಕ ಖಿನ್ನತೆಗೆ ಒಳಪಡಿಸಿ ಬಳಸಲಾಗುತ್ತಿದೆ ಎಂದು ಇಮೇಲ್‌ನಲ್ಲಿ ಸಂದೇಶ ಬರೆಯಲಾಗಿದೆ. ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು ಬಾಂಬ್ ಹಾಗೂ ಡಾಗ್ ಸ್ಕ್ವಾಡ್‌ನಿಂದ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಭಟ್ಕಳ ಶಹರ ಠಾಣೆಗೂ ಬಾಂಬ್ ಬೆದರಿಕೆ ಬಂದಿದ್ದು ಪ್ರಕರಣದಲ್ಲಿ ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಭಟ್ಕಳದಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದ್ದು ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Following a similar incident at the Mangaluru RTO office, the Bhatkal Tahsildar office received a bomb threat via email on Monday morning, triggering high alert among authorities. The email, sent at 7.25 am from an address identified as Gaina Ramesh@outlook.com , warned of a powerful bomb blast at the Tahsildar office and demanded immediate evacuation of staff.