Goa Fire Accident, 23 dead: ಗೋವಾದ ನೈಟ್‌ಕ್ಲಬ್‌ನಲ್ಲಿ ಭಾರೀ ಬೆಂಕಿ, ಸಿಲಿಂಡರ್ ಸ್ಫೋಟಕ್ಕೆ 23 ಮಂದಿ ಬಲಿ, ಪ್ರವಾಸಿಗರು ಗಲಿಬಿಲಿ

07-12-25 02:04 pm       HK News Desk   ದೇಶ - ವಿದೇಶ

ಗೋವಾದ ರೆಸ್ಟೋರೆಂಟ್-ಕ್ಲಬ್‌ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಪ್ರವಾಸಿಗರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿಗಳು ಸೇರಿ ಮೂವರು ಮಹಿಳೆಯರು ಮತ್ತು 20 ಪುರುಷರು ಸಜೀವ ದಹನವಾಗಿದ್ದಾರೆ.

ಗೋವಾ, ಡಿ 07: ಗೋವಾದ ರೆಸ್ಟೋರೆಂಟ್-ಕ್ಲಬ್‌ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಪ್ರವಾಸಿಗರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿಗಳು ಸೇರಿ ಮೂವರು ಮಹಿಳೆಯರು ಮತ್ತು 20 ಪುರುಷರು ಸಜೀವ ದಹನವಾಗಿದ್ದಾರೆ.

ಉತ್ತರ ಗೋವಾದ, ಅರ್ಪೋರಾ ದಲ್ಲಿರುವ ಬರ್ಚ್ ಬೈ ರೋಮಿಯೋ ಲೇನ್ ಎಂಬ ಕ್ಲಬ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಗೋವಾ ಸಿಎಂ ಪ್ರಮೋದ್ ಸಾವಂತ್, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಘಟನೆಗೆ ಕಾರಣಕರ್ತರಾದವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟಿರುವ ಮೃತದೇಹಗಳನ್ನು ಕ್ಲಬ್ ನಿಂದ ಹೊರತೆಗೆಯಲಾಗಿದೆ. ಭಾನುವಾರ ಮುಂಜಾನೆಯವರೆಗೂ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಪೊಲೀಸರ ಪ್ರಕಾರ, ಈ ಬೆಂಕಿ ಹೊತ್ತಿಕೊಳ್ಳಲು ಮಧ್ಯರಾತ್ರಿ ಸುಮಾರಿಗೆ ಸಿಲಿಂಡರ್ ಸ್ಫೋಟವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕ್ಲಬ್‌ನ ಸಿಬ್ಬಂದಿಗಳೇ ಹೆಚ್ಚು ಬೆಂಕಿಗೆ ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಗೋವಾದ ಇತರ ಪ್ರವಾಸಿ ಸ್ಥಳಗಳ ಸುರಕ್ಷತೆ ಕುರಿತೂ ಗಂಭೀರ ಪ್ರಶ್ನೆ ಕೇಳಿಬಂದಿವೆ. ಕ್ರಮಕ್ಕೆ ಒತ್ತಾಯಿಸಲಾಗಿದೆ.

ಬಿಜೆಪಿ ಶಾಸಕ ಮೈಕೆಲ್ ಲೋಬೋ ಮಾತನಾಡಿ, ಈ ಘಟನೆ ತುಂಬಾ ಅಘಾತಕಾರಿಯಾಗಿದೆ ಎಂದಿದ್ದು, ನಾವು ಗೋವಾದಲ್ಲಿರುವ ಇತರ ಎಲ್ಲಾ ಕ್ಲಬ್‌ಗಳ ಸುರಕ್ಷತಾ ಪರಿಶೀಲನೆ ನಡೆಸಬೇಕಾಗುತ್ತದೆ, ಇದು ಬಹಳ ಮುಖ್ಯವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಈ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಇಂದು ನಮಗೆಲ್ಲರಿಗೂ ಬಹಳ ನೋವಿನ ದಿನ. ಅರ್ಪೋರಾದಲ್ಲಿ ನಡೆದ ಈ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅನಿರೀಕ್ಷಿತ ನಷ್ಟದಲ್ಲಿ ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತೇನೆ. ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ..." ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಘಟನೆ ಗೋವಾದ ಪ್ರಮುಖ ಪ್ರವಾಸಿ ತಾಣವಾದ ಬಾಗಾ ಬೀಚ್ ಬಳಿ ನಡೆದಿದೆ. ಈ ಕ್ಲಬ್ ಗೋವಾದಲ್ಲಿ ಬಹಳ ಜನಪ್ರಿಯವಾಗಿದ್ದ ಸ್ಥಳಗಳಲ್ಲಿ ಒಂದಾಗಿದೆ. ಬೆಂಕಿ ಹೊತ್ತಿಕೊಂಡಾಗ ಹೆಚ್ಚಿನ ಜನರು ಕ್ಲಬ್ ಒಳಗೆ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಹಲವು ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭಾನುವಾರ ಮುಂಜಾನೆಯವರೆಗೂ ನಡೆದಿತ್ತು. ಉತ್ತರ ಗೋವಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಡಿಜಿಪಿಯವರೂ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ.

A devastating fire broke out late Saturday night at the popular Birch by Romeo Lane restaurant-club in Arpora, North Goa, killing 23 people, including tourists and staff members. Among the victims were three women and twenty men, most of whom are believed to be club employees.