ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ 'ದಾದಾಸಾಹೇಬ್ ಫಾಲ್ಕೆ' ಗೌರವ ; 2024ರ ಸಾಲಿನ ಪ್ರಶಸ್ತಿಗೆ ಆಯ್ಕೆ 

16-09-26 10:40 pm       kannada news   ಕರ್ನಾಟಕ

ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಸಾಲಿನ ಪ್ರತಿಷ್ಠಿತ ʻದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯನ್ನ ಪರಿಗಣಿಸಿ ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. 

ಬೆಂಗಳೂರು, ಸೆ.16 ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಸಾಲಿನ ಪ್ರತಿಷ್ಠಿತ ʻದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯನ್ನ ಪರಿಗಣಿಸಿ ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. 

1995ರಲ್ಲಿ ಕನ್ನಡ ಚಿತ್ರರಂಗದ ಡಾ. ರಾಜ್‌ಕುಮಾರ್ ಅವರಿಗೆ ಮೊದಲ ಬಾರಿಗೆ ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿ  ಲಭಿಸಿತ್ತು. ತದನಂತರ, 2008ರಲ್ಲಿ ಕನ್ನಡಿಗ ವಿ.ಕೆ ಮೂರ್ತಿ ಅವರಿಗೆ ಈ ಪ್ರಶಸ್ತಿ ಒಲಿದುಬಂದಿತ್ತು. ಈಗ ಬರೋಬ್ಬರಿ 16 ವರ್ಷಗಳ ಸುದೀರ್ಘ ವಿರಾಮದ ಬಳಿಕ ಮತ್ತೊಬ್ಬ ಕನ್ನಡದ ನಟ ಅನಂತ್ ನಾಗ್ ಅವರಿಗೆ ಅತ್ಯುನ್ನತ ಗೌರವ ಲಭಿಸಿದೆ. ಅಭಿನಯ ಕ್ಷೇತ್ರದಲ್ಲಿ ಡಾ. ರಾಜ್‌ಕುಮಾರ್ ನಂತರ ಚಿತ್ರರಂಗದ ಶ್ರೇಷ್ಠ ಪ್ರಶಸ್ತಿಯೆಂದು ಗುರುತಿಸಲ್ಪಡುವ ಫಾಲ್ಕೆ ಪಡೆಯುತ್ತಿರುವ ಎರಡನೇ ನಟ ಎಂಬ ಹೆಗ್ಗಳಿಕೆ ಅನಂತ್ ನಾಗ್ ಅವರದ್ದು. ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ನಟನೆಯ ತೋರಿಸಿದರೂ, ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಬೆಳೆದಿದ್ದು ಕನ್ನಡದಲ್ಲಿ. 

ಸಿನಿಮಾ ರಂಗದ ಅತ್ಯುನ್ನತ ಗೌರವವೆನಿಸಿದ ಈ ಪ್ರಶಸ್ತಿಯು ಅನಂತ್ ನಾಗ್ ಅವರ ಹಲವು ದಶಕಗಳ ಅದ್ಭುತ ಸಿನಿಮಾ ಪಯಣಕ್ಕೆ ಸಂದ ಗೌರವವೂ ಹೌದು. ಇದೇ ಸೆಪ್ಟೆಂಬರ್ 22, 2026ರಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಲಿರುವ ʻ72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಪ್ರದಾನ ಸಮಾರಂಭದಲ್ಲಿ ಫಾಲ್ಕೆ ಗೌರವವನ್ನ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಚಿತ್ರರಂಗದ ಪ್ರಮುಖರು, ಸಚಿವ ಹೆಚ್‌ಡಿ ಕುಮಾರಸ್ವಾಮಿ, ಸಿಎಂ ಡಿಕೆ ಶಿವಕುಮಾರ್‌, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.