ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ ನೀಡಲು ಚರ್ಚೆ ; ಗೃಹ ಸಚಿವ ಪರಮೇಶ್ವರ್

09-01-26 02:05 pm       Bangalore Correspondent   ಕರ್ನಾಟಕ

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಮತ್ತು ಬಳ್ಳಾರಿ ಗಲಾಟೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ನೀಡಲು ಚರ್ಚೆ ನಡೆದಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. 

ಬೆಂಗಳೂರು, ಜ 09 : ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಮತ್ತು ಬಳ್ಳಾರಿ ಗಲಾಟೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ನೀಡಲು ಚರ್ಚೆ ನಡೆದಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. 

ಪೊಲೀಸರ ಅಮಾನತಿಗೆ ವಿಪಕ್ಷ ನಾಯಕ ಆರ್.ಅಶೋಕ್ ಗಡುವು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಹುಬ್ಬಳ್ಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಸಿಐಡಿಗೆ ಕೊಡಲು ಚರ್ಚೆ ನಡೆದಿದೆ. ಸಿಎಂ ಅನುಮತಿ ಪಡೆದು ಸಿಐಡಿ ತನಿಖೆಗೆ ಕೊಡ್ತೇವೆ. ಸಿಐಡಿ ತನಿಖೆಯ ನಂತರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮಹಿಳೆಯ ವಿವಸ್ತ್ರ ಪ್ರಕರಣದ ಬಗ್ಗೆ ಬಿಜೆಪಿಯವರು ಒಂದು, ನಮ್ಮವರು ಇನ್ನೊಂದು ರೀತಿ ಹೇಳುತ್ತಿದ್ದಾರೆ. ಹಾಗಾಗಿ, ಸಿಐಡಿ ತನಿಖೆಯಿಂದ ಎಲ್ಲವೂ ಹೊರಬರಲಿ ಎಂದರು.

ಸಿಐಡಿಯವರು ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಆ ನಂತರ ಸರ್ಕಾರ ಯಾರು ತಪ್ಪಿತಸ್ಥರು, ಯಾರ ನಿರ್ಲಕ್ಷ್ಯವಿದೆ ಎಲ್ಲವನ್ನೂ ಪರಿಗಣಿಸಿ ಮುಂದಿನ ತೀರ್ಮಾನ ಮಾಡಲಿದೆ. ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ. ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ವಿವರವಾಗಿ ತನಿಖೆ ಮಾಡಬೇಕಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು. ಕುಮಾರಸ್ವಾಮಿ ಹೇಳುವ ಪ್ರಕಾರ ಅವರಿಗೆ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಸಂವಿಧಾನಾತ್ಮಕವಾಗಿ ಸರಿ ಇರಬಹುದು. ಆದರೆ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಹೋಗಿರುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಅಲ್ಲಿಗೆ ನಾನು ಹೋಗುವುದಕ್ಕೆ ಆಗಿಲ್ಲ. ಆ ಜವಾಬ್ದಾರಿಯಿಂದ ಅವರು ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಡೆಪ್ಯೂಟಿ ಚೀಫ್ ಮಿನಿಸ್ಟರ್ ಎಂದು ಪ್ರಮಾಣ ವಚನ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಾನು ಇಲಾಖೆಯ ಸಚಿವ. ಘಟನೆ ನಡೆದ ಕೂಡಲೇ ನಾನು ಹೋಗಿದ್ದರೆ, ಪೊಲೀಸರಿಗೆ ಏನೇನೋ ಸೂಚನೆಗಳನ್ನು ಕೊಟ್ಟಿದ್ದಾರೆ, ಅವರ ಪರವಾಗಿ ಸೂಚನೆ ನೀಡಿದ್ದಾರೆ ಎಂಬೆಲ್ಲ ಆರೋಪಗಳು ಕೇಳಿ ಬರುತ್ತಿದ್ದವು. ನಾವು ಭೇಟಿ ನೀಡುವಾಗ ಯೋಚನೆ ಮಾಡಿ, ತನಿಖೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣದಿಂದ ವಿಳಂಬ ಮಾಡುತ್ತೇವೆ. ಅದೇ ಕಾರಣದಿಂದ ಇದುವರೆಗೂ ಬಳ್ಳಾರಿಗೆ ಹೋಗಿಲ್ಲ ಎಂದು ತಿಳಿಸಿದರು.

ಯಾರೂ ಹಸ್ತಕ್ಷೇಪ ಮಾಡಿಲ್ಲ-ಪರಂ: 

ನಮ್ಮ ತೀರ್ಮಾನಗಳಲ್ಲಿ ಯಾರೂ ಕೂಡ ಇಲ್ಲಿಯವರೆಗೆ ಹಸ್ತಕ್ಷೇಪ ಮಾಡಿಲ್ಲ. ಮುಖ್ಯಮಂತ್ರಿಗಳು ಮತ್ತು ನಾನು ಒಟ್ಟಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇನೆ ಎಂದು ನಾನು ನೇರವಾಗಿ ಹೇಳಬಹುದಿತ್ತು. ಆದರೆ, ಸಿಎಂ ಗಮನಕ್ಕೆ ತರದೇ ಇಂತಹ ತೀರ್ಮಾನಗಳನ್ನು ಮಾಡಲಾಗುತ್ತದೆಯೇ? ಎಂದರು.

ಬಳ್ಳಾರಿ ವಲಯ ಐಜಿಪಿ ವರ್ಗಾವಣೆ ಮಾಡುವ ವಿಚಾರ ನನಗೆ ಗೊತ್ತಿಲ್ಲ ಎಂದು ನಾನು ಹೇಳಿಲ್ಲ. ನನಗೆ ಗೊತ್ತಿದೆ, ವರ್ಗಾವಣೆಯನ್ನು ಡಿಪಿಎಆರ್‌ನವರು ಮಾಡುತ್ತಾರೆ. ಆ ಅರ್ಥದಲ್ಲಿ ಹೇಳಿದ್ದೇನೆ. ಕಡತಕ್ಕೆ ಸಹಿ ಹಾಕಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವವರು ಮುಖ್ಯಮಂತ್ರಿಗಳು. ಬಳ್ಳಾರಿ ಗಲಾಟೆ ಪ್ರಕರಣವನ್ನೂ ಸಿಐಡಿ ತನಿಖೆಗೆ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಸಿಎಂ ಭೇಟಿ ಬಳಿಕ ಇದರ ಬಗ್ಗೆ ಮಾತನಾಡ್ತೇನೆ ಎಂದು ತಿಳಿಸಿದರು.

ಮನರೇಗಾ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಪ್ರತಿಭಟನೆ ಮಾಡಿ, ನರೇಗಾ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಆಗುವುದನ್ನು ತಿಳಿಸುತ್ತೇವೆ. ಹೆಸರು ಬದಲಾವಣೆ ಮಾಡಿರುವುದು ಮಹಾತ್ಮ ಗಾಂಧೀಜಿಯವರಿಗೆ‌ ಮಾಡಿರುವ ಅಪಮಾನ ಒಂದು ಭಾಗವಾದರೆ, ಪ್ರತಿ ಹಳ್ಳಿಗಳಲ್ಲಿ ಉದ್ಯೋಗ ನೀಡಲಾಗುವುದಿಲ್ಲ. ಹಣದ ತೀರ್ಮಾನ ದೆಹಲಿಯಲ್ಲಿ ಆಗಬೇಕು ಎಂಬ ವಿಚಾರವನ್ನು ಜನರ ಮುಂದಿಡುತ್ತೇವೆ ಎಂದಿದ್ದಾರೆ.

Karnataka Home Minister G. Parameshwara said discussions are underway to transfer the Hubballi woman stripping case and the Ballari unrest case to the Criminal Investigation Department (CID). He stated that the decision will be taken after obtaining Chief Minister’s approval, and that a CID probe will bring out the truth amid conflicting claims from political parties.