ಕೇಂದ್ರ ಸಚಿವ ಸೋಮಣ್ಣ ಎದುರಲ್ಲೇ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಗದ್ದಲ ; ಶಿಷ್ಟಾಚಾರ ನೆಪದಲ್ಲಿ ತಂಗಡಗಿ ಬೆಂಬಲಿಗರ ಗೂಂಡಾಗಿರಿ, ಸೋಮಣ್ಣ ಮೇಲೆ ಕುರ್ಚಿ ತೂರಲು ಯತ್ನ, ರೈಲ್ವೇ ಕಾರ್ಯಕ್ರಮ ಅರ್ಧಕ್ಕೆ ಬಿಟ್ಟು ನಡೆದ ಸಚಿವ ! 

05-01-26 08:17 pm       HK News Desk   ಕರ್ನಾಟಕ

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಎದುರೇ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ಹೊಯ್ದಾಟ ನಡೆಸಿದ ಘಟನೆ ನಡೆದಿದ್ದು ತೀವ್ರ ಗದ್ದಲ, ವಾಗ್ವಾದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. 

ಕೊಪ್ಪಳ, ಜ.5 : ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಎದುರೇ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ಹೊಯ್ದಾಟ ನಡೆಸಿದ ಘಟನೆ ನಡೆದಿದ್ದು ತೀವ್ರ ಗದ್ದಲ, ವಾಗ್ವಾದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪ್ರೋಟೋಕಾಲ್‌ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಅವರ ಹೆಸರು ಇಲ್ಲದಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಪ್ರೋಟೋಕಾಲ್ ಉಲ್ಲಂಘನೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ಸಚಿವ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಾರ್ಯಕರ್ತರು ಕುರ್ಚಿ ಎಸೆಯಲು ಯತ್ನಿಸಿದ್ದು, ಸಚಿವ ಸೋಮಣ್ಣ ಅವರ ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.

ಸಚಿವ ಸೋಮಣ್ಣ ಶಂಕುಸ್ಥಾಪನೆ ಮಾಡಲು ಮುಂದಾದಾಗ, ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೂಡ ಪ್ರೋಟೋಕಾಲ್ ವಿಚಾರವನ್ನು ಮುಂದಿಟ್ಟು ಸಚಿವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಬಳಿ ಸಚಿವ ಸೋಮಣ್ಣ, “ಇಂತಹ ಕಾರ್ಯಕ್ರಮಗಳಲ್ಲಿ ಪಟಾಲಂ ತೆಗೆದುಕೊಂಡು ಗಲಾಟೆ ಮಾಡಬೇಡಿ” ಎಂದು ಹೇಳಿದ್ದು ತಂಗಡಗಿ ಬೆಂಬಲಿಗರನ್ನು ಕೆರಳಿಸಿತು. ವೇದಿಕೆ ಬಳಿಯೇ ಎರಡೂ ಕಡೆಯ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. 

ಗಲಾಟೆ ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಸಚಿವ ಸೋಮಣ್ಣ ಕಾರ್ಯಕ್ರಮ ಮೊಟಕುಗೊಳಿಸಿ ಸ್ಥಳದಿಂದ ತೆರಳಿದರು. ಹೀಗಾಗಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯದೆ ಅರ್ಧದಲ್ಲೇ ಮುಕ್ತಾಯಗೊಂಡಿತು. ಕಾರ್ಯಕ್ರಮ ಮುಗಿಸಿ ಹೊರಟಾಗಲೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಮೇಲೆ ಕುರ್ಚಿ ತೂರಲು ಯತ್ನಿಸಿದ್ದು, ಅಂಗರಕ್ಷಕರು ತಕ್ಷಣ ಅಡ್ಡ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. 

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸೋಮಣ್ಣ, ಪ್ರೋಟೋಕಾಲ್ ಏನೂ ಉಲ್ಲಂಘನೆ ಆಗಿಲ್ಲ. ಇದು ಕೇಂದ್ರ ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಯೋಜನೆ. ಉದ್ದೇಶಪೂರ್ವಕ ಕಾರ್ಯಕರ್ತರನ್ನು ತಂದು ಗಲಾಟೆ ಮಾಡಿಸಲಾಗಿದೆ” ಎಂದು ಆರೋಪಿಸಿದರು.

A railway flyover foundation event in Hitnal village turned chaotic when BJP and Congress workers clashed in front of Union Minister V. Somanna over alleged protocol violations. Congress supporters objected to the absence of District In-charge Minister Shivaraj Tangadagi and MP Rajshekhar Hitnal’s names on the event invitation.