ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾಪಕ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಮನೆ ಹಂಚಿಕೆ ನಿರ್ಧಾರಕ್ಕೆ ಸದ್ಯಕ್ಕೆ ತಡೆ 

02-01-26 01:58 pm       Bangalore Correspondent   ಕರ್ನಾಟಕ

ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಅಲ್ಲಿಂದ ತೆರವು ಮಾಡಲಾಗಿತ್ತು. ಅಲ್ಲಿನ ನಿರಾಶ್ರಿತರಿಗೆ ಮಾನವೀಯತೆ ದೃಷ್ಟಿಯಿಂದ ಮನೆಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು.

ಬೆಂಗಳೂರು, ಜ.2 : ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಅಲ್ಲಿಂದ ತೆರವು ಮಾಡಲಾಗಿತ್ತು. ಅಲ್ಲಿನ ನಿರಾಶ್ರಿತರಿಗೆ ಮಾನವೀಯತೆ ದೃಷ್ಟಿಯಿಂದ ಮನೆಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ವಿಪಕ್ಷಗಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮನೆ ಹಂಚಿಕೆಯನ್ನು ತಾತ್ಕಾಲಿಕ ಮುಂದಕ್ಕೆ ಹಾಕಿದೆ. 

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಿದ್ದು, ಕೇರಳ ಸರ್ಕಾರದ ಟೀಕೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಯೋಜನೆಯಡಿ ಮನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ, ಜನವರಿ 2ಕ್ಕೆ ಮನೆ ಹಂಚಿಕೆ ಮಾಡಲಾಗುವುದು ಎಂದೂ ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಇದಕ್ಕೆ ತೀವ್ರ ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು.

ಅಲ್ಪಸಂಖ್ಯಾತ ಸಮುದಾಯವನ್ನು ತೃಪ್ತಿಪಡಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ರಮವಾಗಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಂದ ವಲಸೆ ಬಂದವರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೇರಳದ ಒತ್ತಡಕ್ಕೆ ಮಣಿದು ಈ ಕೆಲಸಕ್ಕೆ ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನಾವು ಹೊರ ರಾಜ್ಯ ದೇವರಿಗೆ ಮನೆ ನೀಡುವುದಿಲ್ಲ. ಫಲಾನುಭವಿಗಳ ದಾಖಲೆಗಳ ಪರಿಶೀಲನೆಯ ನಂತರ ರಾಜ್ಯದವರಿಗೆ ಮಾತ್ರ ಮನೆಗಳನ್ನು ನೀಡುವುದಾಗಿ ಹೇಳಿದ್ದರು. ಜಿಬಿಎ ಮತ್ತು ರಾಜೀವ್ ಗಾಂಧಿ ವಸತಿ ನಿಗಮವು ಕುಟುಂಬದ ದಾಖಲೆಗಳನ್ನು ಪರಿಶೀಲಿಸಿ ಬೈಯಪ್ಪನಹಳ್ಳಿಯ ಕರ್ನಾಟಕ ವಸತಿ ಮಂಡಳಿಯ ವತಿಯಿಂದ ನಿರ್ಮಾಣಗೊಂಡ ಕ್ವಾಟ್ರಸ್ ಗಳಲ್ಲಿ ಅರ್ಹರಿಗೆ ಮಾತ್ರ ವಸತಿ ಒದಗಿಸಲಾಗುವುಸು ಎಂದು ತಿಳಿಸಿದ್ದರು.‌

ಅಕ್ರಮ ವಲಸಿಗರಲ್ಲಿ ಬಾಂಗ್ಲಾದವರಿದ್ದಾರೆ, ಕಾಂಗ್ರೆಸ್ ಸರ್ಕಾರ ಅವರಿಗೆ ಮನೆಗಳನ್ನು ನೀಡುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆ, ಟಿಪ್ಪಣಿಯಿಂದಾಗಿ ರಾಜ್ಯ ಸರ್ಕಾರ ಮನೆಗಳ ಹಂಚಿಕೆಯನ್ನು ಸದ್ಯಕ್ಕೆ ತಡೆಹಿಡಿದು ಮುಂದಕ್ಕೆ ಹಾಕಿದೆ. ಬಿಜೆಪಿ ಇದೇ ವಿಚಾರವನ್ನು ದೊಡ್ಡದಾಗಿ ಕೈಗೆತ್ತಿಕೊಂಡು ಪ್ರಚಾರ ಮಾಡುವುದರಿಂದ ಸರ್ಕಾರದ ಘನತೆಗೆ ಕುಂದು ಬರುತ್ತದೆ ಎಂದು ಮನೆ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ.

The Karnataka government has temporarily halted its decision to allot houses to the displaced residents of Bengaluru’s Kogilu settlement after strong public and opposition criticism. Earlier, the government had planned to provide homes under the Rajiv Gandhi Housing Corporation following the demolition of illegal structures. Opposition parties, especially the BJP, alleged that houses were being granted to illegal migrants from Bangladesh and other states.