ದೇರಳಕಟ್ಟೆ ; ಕಣಚೂರು ಕಾಲೇಜಿನಲ್ಲಿ ರ್‍ಯಾಗಿಂಗ್ ಭೂತ !! 18 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು !

10-02-21 05:54 pm       Mangalore Correspondent   ಕ್ರೈಂ

ದೇರಳಕಟ್ಟೆಯ ಕಣಚೂರು ಎಜುಕೇಷನ್ ಇನ್ಸ್ ಟಿಟ್ಯೂಟ್ ಸಂಸ್ಥೆಯ ಬಿಪಿಟಿ ವಿಭಾಗದಲ್ಲಿ ರ್‍ಯಾಗಿಂಗ್ ಆಗಿರುವ ಬಗ್ಗೆ ಆರೋಪ ಕೇಳಿಬಂದಿದೆ. 

ಉಳ್ಳಾಲ, ಫೆ.10 : ದೇರಳಕಟ್ಟೆಯ ಕಣಚೂರು ಎಜುಕೇಷನ್ ಇನ್ಸ್ ಟಿಟ್ಯೂಟ್ ಸಂಸ್ಥೆಯ ಬಿಪಿಟಿ (ಬ್ಯಾಚುಲರ್ ಆಫ್ ಫಿಸಿಯೋಥೆರಪಿ) ವಿಭಾಗದಲ್ಲಿ ರ್‍ಯಾಗಿಂಗ್  ಆಗಿರುವ ಬಗ್ಗೆ ಆರೋಪ ಕೇಳಿಬಂದಿದ್ದು ಉಳ್ಳಾಲ ಠಾಣೆಯಲ್ಲಿ 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. 

ಬಿಪಿಟಿ ವಿಭಾಗದ ಪ್ರಥಮ ವರ್ಷದ ಐದು ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ 18 ಮಂದಿ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾಗಿ ಪ್ರಕರಣ ದಾಖಲಾಗಿದೆ. ಫೆ.4 ರಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಫೆ.8ರಂದು ಠಾಣೆಗೆ ದೂರು ನೀಡಿದೆ. 

ಬಿಪಿಟಿ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕೇರಳ ಮೂಲದ ಅಮಲ್ ಮಹಮ್ಮದ್, ಆಸಿಮ್ ಜಾಸಿಮ್ ಕೆ.ಎಂ., ಮಹಮ್ಮದ್ ಜೀಹಾವ್, ಆಕಿಬ್ ಜಿಹಾದ್ , ಅಹಮ್ಮದ್ ಶಿಬಿಲಿ, ಶಿನಾಸ್ ಮೊಯಿದುನ್ನಿ ಎಂಬ ಐವರನ್ನು ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಶೋಷಣೆ ಮಾಡಿದ್ದಾರೆ. ತಮ್ಮ ತರಗತಿ ಕೋಣೆಗೆ ಒತ್ತಾಯಪೂರ್ವಕ ಕರೆಸಿಕೊಂಡು ಕಿರಿಯ ವಿದ್ಯಾರ್ಥಿಗಳು ತಮ್ಮೆದುರು ತಲೆ ತಗ್ಗಿಸಿ ನಿಲ್ಲಬೇಕು, ಮೀಸೆ ಬೋಳಿಸಬೇಕು ಎಂದು ಧಮ್ಕಿ ಹಾಕಿದ್ದಾರೆ. ಐದು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ತಳ್ಳಾಟ ನಡೆಸಿದ್ದು ಈ ಬಗ್ಗೆ ಕಾಲೇಜಿನವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದರಿಂದ ನೊಂದ  ಕಿರಿಯ ಐವರು ವಿದ್ಯಾರ್ಥಿಗಳು ಬಿಪಿಟಿ ಕ್ಯಾಂಪಸ್ ಮುಖ್ಯಸ್ಥರಾದ ಮಾರ್ಟಿನ್ ಜಾರ್ಜ್ ಅವರಿಗೆ ದೂರನ್ನು ನೀಡಿದ್ದರು. 

ಉಪನ್ಯಾಸಕ ಮಾರ್ಟಿನ್ ಜಾರ್ಜ್ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ, 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ‌

ಆರೋಪಿತರನ್ನು ಮಹಮ್ಮದ್ ಶಮ್ಮಾಸ್, ಅಕ್ಷಯ್ ಕೆ.ಎಸ್, ರಾಬಿನ್ ಬಿಜು, ಅಬ್ದುಲ್ ಇನಾಸ್ ಮಹಮ್ಮದ್, ಜಿಪ್ರಿನ್ ರೊಚಾ, ಆಲ್ವಿನ್ ಜಾಯ್ , ಸಾಧನ್ ನವಿಲ್, ಮಹಮ್ಮದ್ ಸೂರಜ್ , ಅಮೀನ್ ಶಮ್ಮಾಸ್ , ಅಬ್ದುಲ್ ವಕೀಬ್ , ಶಾಹೀನ್ ಅಬ್ದುಲ್ಲಾ , ಜೆರೊನ್ ಶೆರಿಲ್, ಬಾಸಿಲ್ ಸಿ.ಪಿ, ಅಶ್ವಿನ್ ಬಾಬು, ಜೌಹಾರ್ ಮೊಯ್ದಿನ್ , ಜಾಬಿನ್ ಮೆಹರೂಫ್, ಅಹಮ್ಮದ್ ಫಯಾಝ್ , ಅಬ್ದುಲ್ ಬಾಸಿತ್ ಎಂದು ಗುರುತಿಸಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು ಪ್ರಕರಣ ಹೊರಬರದಂತೆ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

18 students booked for ragging 5 First-year students of bachelor of physiotherapy at kanachur college in Ullal, Mangalore.