Inspector Balakrishna Arrest, Police: ಮೇಲಧಿಕಾರಿಗಳ ‘ಕೃಪೆ’ಯಿಂದ ಮುಖ್ಯಮಂತ್ರಿ ಪದಕ ಗಿಟ್ಟಿಸಿಕೊಂಡಿದ್ದ ಇನ್ಸ್ ಪೆಕ್ಟರ್ ಬಾಲಕೃಷ್ಣ ಜೈಲಿಗೆ, ಇಲಾಖೆ ಮರ್ಯಾದೆ ಹರಾಜಿಗಿಟ್ಟು ಎರಡನೇ ಬಾರಿ ಸಸ್ಪೆಂಡ್ !

22-09-26 09:00 pm       HK News Staffer   ಕ್ರೈಂ

ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿರುವ ಬಜ್ಪೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಮಂಗಳೂರು ಸೆಷನ್ಸ್ ಕೋರ್ಟಿಗೆ ಹಾಜರುಪಡಿಸಿದ್ದು...

ಮಂಗಳೂರು, ಸೆ.22: ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿರುವ ಬಜ್ಪೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಮಂಗಳೂರು ಸೆಷನ್ಸ್ ಕೋರ್ಟಿಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ಪ್ರಕರಣದ ಗಂಭೀರತೆ ಪರಿಗಣಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದರೊಂದಿಗೆ, ಕಳ್ಳ ಕಾಕರನ್ನು ಹಿಡಿದು ಜೈಲಿಗಟ್ಟುವ ಇನ್ಸ್ ಪೆಕ್ಟರ್ ತಾನೇ ಜೈಲು ಪಾಲಾಗುವ ಸ್ಥಿತಿಯಾಗಿದೆ. ಅಲ್ಲದೆ, 24 ಗಂಟೆ ಬಂಧನದಿಂದಾಗಿ ಸರ್ಕಾರಿ ಕರ್ತವ್ಯದಿಂದ ಸಸ್ಪೆಂಡ್ ಕೂಡ ಆಗುವಂತಾಗಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆ ದಾಖಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ನ್ಯಾಯಾಧೀಶರು ಆರೋಪಿ ಬಾಲಕೃಷ್ಣನನ್ನ ಜೈಲಿಗೆ ಕಳುಹಿಸಿದ್ದು ಇಡೀ ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ಸಾಮಾನ್ಯವಾಗಿ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳು ಏನಾದ್ರೂ ಕರಾಮತ್ತು ಮಾಡಿ ಜೈಲಿಗೆ ಹೋಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಬಾಲಕೃಷ್ಣ ಅತಿ ಭ್ರಷ್ಟತೆಯಿಂದಾಗಿ ಮೇಲಧಿಕಾರಿಗಳು ಕೂಡ ಕೈಬಿಟ್ಟಿದ್ದು, ನೇರವಾಗಿ ಜೈಲು ಸೇರುವಂತಾಗಿದೆ.

ಡೀಲ್ಗೆ ಬಳಸಿದ್ದ ಕಾರು ಬಿಟ್ಟೋಡಿದ್ದ ಸಹಚರ 

ಲೋಕಾಯುಕ್ತ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದಾಗ ಇನ್ಸ್ ಪೆಕ್ಟರ್ ಬಾಲಕೃಷ್ಣ ಖಾಸಗಿ ಕಾರು ಒಂದರಲ್ಲಿ ಕುಳಿತು ಡೀಲ್ ಕುದುರಿಸುತ್ತಿದ್ದ. ಬಜ್ಪೆ ಠಾಣೆಯೆದುರಲ್ಲೇ ನಿಂತಿದ್ದ ಕಾರಿನಲ್ಲಿ 5 ಸಾವಿರ ರೂ. ಹಣವನ್ನು ಪಡೆಯುತ್ತಿದ್ದಾಗಲೇ ಟ್ರಾಪ್ ಮಾಡಲಾಗಿತ್ತು. ಇನ್ಸ್ ಪೆಕ್ಟರ್ ಕುಳಿತಿದ್ದ ಕಾರು ಬಾಲಕೃಷ್ಣನ ಭಾನಗಡಿ ಕೆಲಸಗಳಿಗೆ ಆಪ್ತನಾಗಿ ಕೆಲಸ ಮಾಡುತ್ತಿದ್ದ ಕುಂಪಲ ನಿವಾಸಿ ರಕ್ಷಿತ್ ಪೂಜಾರಿ ಎನ್ನುವಾತನದ್ದು ಎಂಬುದನ್ನು ಲೋಕಾಯುಕ್ತ ತಂಡ ಪತ್ತೆ ಮಾಡಿದ್ದು, ಆ ಕಾರನ್ನು ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಲೋಕಾಯುಕ್ತ ಟ್ರಾಪ್ ಮಾಡುತ್ತಲೇ ರಕ್ಷಿತ್ ಪೂಜಾರಿ ತನ್ನ ಕಾರಿನಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಆದರೆ ಹಣವನ್ನು ಜೀಬಿಗಿಳಿಸಿದ ಸಾಕ್ಷ್ಯಕ್ಕಾಗಿ ರಕ್ಷಿತ್ ಪೂಜಾರಿ ಲೋಕಾಯುಕ್ತಕ್ಕೆ ಬೇಕಾಗುತ್ತದೆ. ಈ ಕಾರಣಕ್ಕೆ ಆತನನ್ನು ಬೆನ್ನುಹತ್ತಿದ್ದಾರೆ. ಇದೇ ವೇಳೆ, ರಕ್ಷಿತ್ ತನ್ನ ಕಾರನ್ನು ಕೇರಳದ ತಲಪಾಡಿ ಗಡಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಹಿಂದೆಯೂ ಸಸ್ಪೆಂಡ್ ಆಗಿದ್ದ ನುಂಗಣ್ಣ! 

ಈಗಿನ ಜಮಾನಾದಲ್ಲಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ, ಲಂಚ ಸಾಮಾನ್ಯ ಅನ್ನುವ ಸ್ಥಿತಿಯಾಗಿದೆ. ಆದರೆ ಈ ಬಾಲಕೃಷ್ಣ ಮಾತ್ರ ಮಹಾನ್ ಅನ್ನುವಷ್ಟು ಭ್ರಷ್ಟನಾಗಿದ್ದ. ಠಾಣೆಯಲ್ಲಿ ದಾಖಲಾಗುವ ಪ್ರತಿ ಕೇಸುಗಳಲ್ಲಿಯೂ ಕಾಸು ಎಣಿಸುವುದನ್ನೇ ಲೆಕ್ಕ ಹಾಕುತ್ತಿದ್ದ ಅನ್ನುವ ಮಾಹಿತಿ ಇಲಾಖೆಯ ಒಳಗಿನಿಂದಲೇ ಬರುತ್ತಿದೆ. ಈ ಹಿಂದೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಭ್ರಷ್ಟಾಚಾರ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದು ಕರ್ತವ್ಯದಿಂದ ಅಮಾನತುಗೊಂಡಿದ್ದ. ಆಬಳಿಕ ಅದ್ಯಾರೋ ಪುಣ್ಯಾತ್ಮನ ಕರುಣೆ ಗಿಟ್ಟಿಸಿಕೊಂಡು ಉಳ್ಳಾಲದಂತಹ ಆಯಕಟ್ಟಿನ ಠಾಣೆಗೆ ವಕ್ಕರಿಸಿದ್ದ.

ಚಿನ್ನ ಕಳ್ಳತನದಲ್ಲೂ ಎಫ್ ಐಆರ್ ನಲ್ಲಿ ಕಡಿಮೆ ಲೆಕ್ಕ ತೋರಿಸಿ ರಿಕವರಿಯಲ್ಲಿ ಚಿನ್ನ ಹೊಡೆಯುವಷ್ಟು ನರಿ ಬುದ್ಧಿ ತೋರಿಸುತ್ತಿದ್ದ ಇತಿಹಾಸ ಹೊಂದಿದ್ದರೂ, ಉಳ್ಳಾಲ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಾಗಲೇ ಇದೇ ಬಾಲಕೃಷ್ಣ ವರ್ಷದ ಹಿಂದೆ ಮೇಲಧಿಕಾರಿಗಳ ಕೃಪೆಯನ್ನು ಸಾಧಿಸಿ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡಿದ್ದು ಕಡಿಮೆ ಸಾಧನೆಯಲ್ಲ ಬಿಡಿ. ಇದೇನಿದ್ದರೂ, ಖಾಕಿ ಸಮವಸ್ತ್ರದಿಂದಲೇ ಸಮಾಜದಲ್ಲಿ ಗೌರವ, ಮರ್ಯಾದೆ ಗಿಟ್ಟಿಸಿಕೊಳ್ಳುವ ಪೊಲೀಸ್ ಅಧಿಕಾರಿಯೀಗ ಸಮಾಜಘಾತುಕರನ್ನು ತುಂಬಿಡುವ ಅದೇ ಕಾರಸ್ಥಾನಕ್ಕೆ ಸೇರುವಂತಾಗಿದ್ದು ಇಲಾಖೆಯ ಮರ್ಯಾದೆಯನ್ನೇ ಹರಾಜು ಹಾಕಿಸಿದೆ.