ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ವಿವಾದ ; ಅಧ್ಯಕ್ಷರ ಸರ್ವಾಧಿಕಾರ ವಿರುದ್ಧ ಸಮಿತಿ ಸದಸ್ಯನಿಂದಲೇ ಡಿಆರ್ ಗೆ ದೂರು, ಕೈ ಮುಖಂಡನಿಂದ ಜೀವ ಬೆದರಿಕೆ, ಆಡಿಯೋ ವೈರಲ್

01-08-26 08:44 pm       HK News Staffer   ಕ್ರೈಂ

ತೀಯಾ ಸಮಾಜದ ಆರಾಧ್ಯ ಕ್ಷೇತ್ರ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗುರಿಕಾರ ಎಂಬವರು ತನ್ನ ಎರಡು ವರ್ಷದ ಅಧಿಕಾರ ಅವಧಿ ಮುಗಿದರೂ ಸಹ ಮಹಾಸಭೆಯನ್ನು ಕರೆಯದೆ ಸರ್ವಾಧಿಕಾರ ಪ್ರದರ್ಶಿಸುತ್ತಿರುವ ಬಗ್ಗೆ ಆರೋಪಿಸಿ ಆಡಳಿತ ಸಮಿತಿಯ ಸದಸ್ಯರಾದ ಪವನ್ ರಾಜ್ ಕೊಲ್ಯ ಅವರು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದು, ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಮುಖಂಡ, ಬೆಂಗಳೂರಿನ ಉದ್ಯಮಿಯಾಗಿರುವ ಪ್ರಕಾಶ್ ಕುಂಪಲ ಎಂಬವರು ಪವನ್ ರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ‌ ನಿಂದಿಸಿ ಜೀವ ಬೆದರಿಕೆ ನೀಡಿರುವ ಆಡಿಯೋ ವೈರಲ್ ಆಗಿದೆ.

ಮಂಗಳೂರು, ಆ.1: ತೀಯಾ ಸಮಾಜದ ಆರಾಧ್ಯ ಕ್ಷೇತ್ರ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗುರಿಕಾರ ಎಂಬವರು ತನ್ನ ಎರಡು ವರ್ಷದ ಅಧಿಕಾರ ಅವಧಿ ಮುಗಿದರೂ ಸಹ ಮಹಾಸಭೆಯನ್ನು ಕರೆಯದೆ ಸರ್ವಾಧಿಕಾರ ಪ್ರದರ್ಶಿಸುತ್ತಿರುವ ಬಗ್ಗೆ ಆರೋಪಿಸಿ ಆಡಳಿತ ಸಮಿತಿಯ ಸದಸ್ಯರಾದ ಪವನ್ ರಾಜ್ ಕೊಲ್ಯ ಅವರು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದು, ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಮುಖಂಡ, ಬೆಂಗಳೂರಿನ ಉದ್ಯಮಿಯಾಗಿರುವ ಪ್ರಕಾಶ್ ಕುಂಪಲ ಎಂಬವರು ಪವನ್ ರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ‌ ನಿಂದಿಸಿ ಜೀವ ಬೆದರಿಕೆ ನೀಡಿರುವ ಆಡಿಯೋ ವೈರಲ್ ಆಗಿದೆ. 

ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ನಿರ್ವಹಿಸುತ್ತಿರುವ ಶ್ರೀ ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘದ ಪ್ರಸ್ತುತ ಅಧ್ಯಕ್ಷರಾಗಿರುವ ಚಿದಾನಂದ ಗುರಿಕಾರ ಎಂಬವರು ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಚುನಾಯಿತಾರಾದವರಲ್ಲ. ಉಮೇಶ್ ಬೆಂಜನಪದವು ಎಂಬವರನ್ನು ಮಹಾಸಭೆಯಲ್ಲಿ  ಸರ್ವಾನುಮತದಿಂದ ತೀಯಾ ಸಮಾಜ ಭಾಂದವರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಉಮೇಶ್ ಅವರು ಅಧ್ಯಕ್ಷರಾಗಿ ಹತ್ತು ದಿವಸ ಕೂಡ ಆ ಸ್ಥಾನದಲ್ಲಿ ಮುಂದುವರಿಯದೆ ತನ್ನ ವೈಯಕ್ತಿಕ ಸಮಸ್ಯೆಗಳನ್ನ ಮುಂದಿಟ್ಟು ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಮಹಾಸಭೆಯನ್ನೂ ಕರೆಯದೆ ಚಿದಾನಂದ ಗುರಿಕಾರ ಎಂಬವರನ್ನು ಅಧ್ಯಕ್ಷ ಸ್ಥಾನಕ್ಕೆ ಕಾನೂನುಬಾಹಿರವಾಗಿ ನೇಮಿಸಲಾಗಿತ್ತು.

ಸಂಘದ ನೋಂದಣಿ ಕಾಯ್ದೆ 1960ರ ನಿಯಮ ನಿಬಂಧನೆಗಳ ಪ್ರಕಾರ ಎರಡು ವರ್ಷ ಸೀಮಿತವಾಗಿರುವ ಅಧಿಕಾರ ಅವಧಿಯನ್ನು ಉಲ್ಲಂಘಿಸಿರುವ ಚಿದಾನಂದ ಗುರಿಕಾರ ಅವರು ಐದು ವರ್ಷ ನಾವೇ ಆಡಳಿತ ಮಾಡುವುದೆಂದು ನಿಬಂಧನೆಗಳನ್ನ ಮೀರಿದ್ದಾರೆಂದು ಆರೋಪಿಸಿ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಪವನ್ ರಾಜ್ ಕೊಲ್ಯ ಅವರು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಯವರಿಗೆ ಲಿಖಿತ ದೂರು ನೀಡಿದ್ದರು. ಚಿದಾನಂದ ಗುರಿಕಾರ ಅವರು ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಖರ್ಚು, ವೆಚ್ಚಗಳ ಲೆಕ್ಕವನ್ನು ತೋರಿಸದೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಿತಿಯೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡು ತನ್ನ ಲಾಭಕ್ಕೋಸ್ಕರ ತನ್ನ ಪರ ಇರುವ ಸಮಿತಿ ಪದಾಧಿಕಾರಿಗಳಿಗೆ ಕಾಮಗಾರಿಯ ಗುತ್ತಿಗೆ ನೀಡುತ್ತಿರುವುದಲ್ಲದೆ, ಲೆಕ್ಕ ಪರಿಶೋಧಕರಿಂದ ಖರ್ಚು, ವೆಚ್ಚಗಳ ವರದಿಯನ್ನು ಇದುವರೆಗೂ ತಯಾರಿಸಿಲ್ಲವೆಂದು ಪವನ್ ರಾಜ್ ದೂರಿನಲ್ಲಿ ಆರೋಪಿಸಿದ್ದರು.

ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ವಿವಾದದಲ್ಲಿ ಪ್ರಕಾಶ್ ಕುಂಪಲ ಎಂಬವರು ಮಧ್ಯೆ ಪ್ರವೇಶಿಸಿದ್ದು, ತೀಯಾ ಸಮಾಜದ ಮುಖಂಡರಲ್ಲಿ ಫೋನ್ ಮುಖಾಂತರ ಸಂಭಾಷಣೆ ನಡೆಸಿರುವ ಆಡಿಯೋ ವೈರಲ್ ಆಗಿದೆ. ಪ್ರಕಾಶ್ ಕುಂಪಲ ತೀಯಾ ಸಮಾಜದ ಮುಖಂಡರಲ್ಲಿ ಪವನ್ ರಾಜ್ ಗೆ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಲ್ಲದೆ, ದೂರು ಹಿಂಪಡೆಯುವಂತೆ ಹೇಳಿಕೊಂಡಿದ್ದಾರೆ. ಜಿಲ್ಲಾ ನೋಂದಣಾಧಿಕಾರಿ (ಡಿಆರ್) ರಮೇಶ್ ಗೆ ನಾನು ಕರೆ ಮಾಡಿದ್ದು ದೂರಿನ ಲೆಟರ್ ಕೊಟ್ಟಿದ್ದಾರಲ್ಲ. ನೀನು ಬಾಯಿ ಮುಚ್ಚಿ ಕೂತ್ಕೊ, ನಿನಗೆ ಬೆಂಗಳೂರಿನಿಂದ ಮೇಲಾಧಿಕಾರಿಗಳ ಕರೆ ಬರುತ್ತೆ. ಭಗವತೀ ಕ್ಷೇತ್ರದ ಮರ್ಯಾದಿ ಹೋದರೆ ಒಬ್ಬನ ಹೆಣ ಬೀಳುತ್ತೆ ಅಂತ ಹೇಳಿದ್ದೇನೆ. ಪವನ್ ರಾಜ್ ಖಾಲಿ ಉಳ್ಳಾಲ ಕ್ಷೇತ್ರದಲ್ಲಿರೋದು. ನಾನು ಇಡೀ ಕರ್ನಾಟಕವನ್ನ ಹ್ಯಾಂಡಲ್ ಮಾಡುತ್ತೇನೆ. ಭಗವತಿ ಕ್ಷೇತ್ರದ ವಿವಾದಕ್ಕೆ ಕೈ ಹಾಕಬೇಡ ಎಂದು ಮುಜರಾಯಿ ಇಲಾಖೆಯ ಕಮೀಷನರಿಂದ ಡಿಆರ್ ಗೆ ಕರೆ ಮಾಡಿಸುತ್ತೇನೆ. ಜಿಲ್ಲಾಧಿಕಾರಿ ದರ್ಶನ್ ಅವರಲ್ಲೂ ಕರೆ ಮಾಡಿಸುತ್ತೇನೆ. ಅವರೆಲ್ಲ ನನ್ನ ಫ್ರೆಂಡ್ಸ್ ಗಳು, ಡಿಪಾರ್ಟ್ ಮೆಂಟನ್ನೂ ಹ್ಯಾಂಡಲ್ ಮಾಡುತ್ತೇನೆ. ಅದು ಬರೀ ಐದು ನಿಮಿಷದ ಕೆಲಸ ನನಗೆ. ಪವನ್ ಕೊಟ್ಟಿರುವ ದೂರಿನ ಲೆಟರನ್ನ ನಾನೇ ಹರಿದು ಬಿಸಾಡುತ್ತೇನೆ ಅಂತ ಹೇಳಿರುವ ಸಂಭಾಷಣೆ ಆಡಿಯೋ ವೈರಲ್ ಆಗಿದೆ.

ಈ ಆಡಿಯೋ ಗಮನಕ್ಕೆ ಬಂದ ಬಳಿಕ ಪವನ್ ರಾಜ್ ಅವರು ಭಗವತಿ ಕ್ಷೇತ್ರದ ಆಡಳಿತದ ವಿವಾದದಲ್ಲಿ ತೀಯಾ ಸಮಾಜಕ್ಕೆ ಸಂಬಂಧ ಪಡದ ಪ್ರಕಾಶ್ ಕುಂಪಲನಿಂದ ತನಗೆ ಜೀವ ಬೆದರಿಕೆ ಇರುವ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಉಳ್ಳಾಲ ಪೊಲೀಸರು ಎನ್ ಸಿ ಮಾಡಿದ್ದಾರೆಂದು ತಿಳಿದುಬಂದಿದೆ.