ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ; 84 ಲಕ್ಷ ವರ್ಗಾಯಿಸಲು ಬ್ಯಾಂಕಿಗೆ ತೆರಳಿದ್ದ ದಂಪತಿ, ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಉಳೀತು ಹಣ ! 

04-12-25 11:15 pm       Mangalore Correspondent   ಕ್ರೈಂ

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಮಸಕಟ್ಟೆ ನಿವಾಸಿಗಳಾದ ವೃದ್ಧ ದಂಪತಿ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಿದ್ದು ತಮ್ಮ ಖಾತೆಯಲ್ಲಿದ್ದ 84 ಲಕ್ಷವನ್ನು ಸೈಬರ್ ವಂಚಕರಿಗೆ ನೀಡಲು ಹೋಗಿ ಬ್ಯಾಂಕ್  ಮ್ಯಾನೇಜರ್ ಒಬ್ಬರ ಸಮಯ ಪ್ರಜ್ಞೆಯಿಂದ ಹಣ ಉಳಿಸಿಕೊಂಡಿದ್ದಾರೆ. 

ಮಂಗಳೂರು, ಡಿ.4 : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಮಸಕಟ್ಟೆ ನಿವಾಸಿಗಳಾದ ವೃದ್ಧ ದಂಪತಿ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಿದ್ದು ತಮ್ಮ ಖಾತೆಯಲ್ಲಿದ್ದ 84 ಲಕ್ಷವನ್ನು ಸೈಬರ್ ವಂಚಕರಿಗೆ ನೀಡಲು ಹೋಗಿ ಬ್ಯಾಂಕ್  ಮ್ಯಾನೇಜರ್ ಒಬ್ಬರ ಸಮಯ ಪ್ರಜ್ಞೆಯಿಂದ ಹಣ ಉಳಿಸಿಕೊಂಡಿದ್ದಾರೆ. 

ಮುಲ್ಕಿ ಪೊಲೀಸ್ ಠಾಣಾ ಸರಹದ್ದಿನ ದಾಮಸಕಟ್ಟೆ ನಿವಾಸಿಗಳಾದ ಬೆನೆಡಿಕ್ಟ್ ಪೆರ್ನಾಂಡಿಸ್ (84) ಹಾಗೂ ಪತ್ನಿ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71) ಅವರಿಗೆ ಡಿ.1 ರಂದು ಯಾರೋ ಅಪರಿಚಿತರು ಕರೆ ಮಾಡಿ ಉತ್ತರ ಪ್ರದೇಶದ ಸಿ.ಐ.ಡಿ ಪೊಲೀಸ್ ಎಂದು ಪರಿಚಯ ಹೇಳಿದ್ದರು.‌ ಬಳಿಕ ಪೊಲೀಸರ ಸೋಗಿನಲ್ಲಿ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿ, ನೀವು 6 ಕೋಟಿ ಮೋಸ ಮಾಡಿದ್ದಾಗಿ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿದ್ದಲ್ಲದೆ, ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೇಳಿದ್ದಾರೆ. 

ಇದಲ್ಲದೆ, ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ಆರ್ ಬಿಐಗೆ ನೀಡಬೇಕೆಂದು ಸೂಚಿಸಿದ್ದು  ಇದರಂತೆ ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಬಾಬ್ತು ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ತೆರಳಿದ್ದರು. ಈ ವೇಳೆ, ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ಹಣವನ್ನು ಯಾಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಆದರೆ ವೃದ್ಧ ದಂಪತಿ ಸರಿಯಾದ ಉತ್ತರ ನೀಡದ ಕಾರಣ ಸಂಶಯಗೊಂಡ ಮ್ಯಾನೇಜರ್, ಸೈಬರ್ ವಂಚಕರು ಒದಗಿಸಿದ ಖಾತೆಗೆ ಹಣವನ್ನು ವರ್ಗಾವಣೆ ಮಾಡದೇ, ಕಿನ್ನಿಗೋಳಿ ಪರಿಸರದ ಮುಲ್ಕಿ ಠಾಣೆಯ ಬೀಟ್ ಸಿಬ್ಬಂದಿ ಯಶವಂತ ಕುಮಾರ್ ಹಾಗೂ ಠಾಣಾ ಗುಪ್ತವಾರ್ತೆ ಸಿಬ್ಬಂದಿ ಕಿಶೋರ್ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ಧ ದಂಪತಿಯ ಮನೆಗೆ ತೆರಳಿ ಅವರ ಮೊಬೈಲ್ ಪರಿಶೀಲಿಸಿದ್ದು ಈ ಸಮಯ ಅವರು ಡಿಜಿಟಲ್ ಅರೆಸ್ಟ್ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಹಣ ವರ್ಗಾವಣೆ ಮಾಡದಂತೆ ಸೂಚಿಸಿದ್ದರು. ಅಲ್ಲದೆ, ವೃದ್ದ ದಂಪತಿಗೆ ತಿಳುವಳಿಕೆ ನೀಡಿ, ದೊಡ್ಡ ಮೊತ್ತದ ಹಣವನ್ನು ಉಳಿಸಿರುತ್ತಾರೆ. ಇದರ ಬಗ್ಗೆ ಮುಲ್ಕಿ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

An elderly couple from Damasakatte in Mulki narrowly escaped losing ₹84 lakh to cybercriminals after falling victim to a sophisticated ‘digital arrest’ scam. The scammers, posing as CID officers from Uttar Pradesh, contacted 84-year-old Benedict Fernandes and his wife, 71-year-old Lilly Cecily, alleging their involvement in a ₹6 crore fraud case.