Mangalore Acid Attack, EXAM: ಆ್ಯಸಿಡ್ ದಾಳಿಗೀಡಾದ ವಿದ್ಯಾರ್ಥಿನಿ ಆಂಬುಲೆನ್ಸಲ್ಲಿ ತೆರಳಿ ಸಿಇಟಿ ಪರೀಕ್ಷೆ ; ಚಿಕಿತ್ಸೆ ನಡುವೆಯೂ ಕುಗ್ಗದ ಉತ್ಸಾಹ 

19-04-24 09:25 pm       Mangalore Correspondent   ಕ್ರೈಂ

ಆ್ಯಸಿಡ್ ದಾಳಿಗೀಡಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಂತ್ರಸ್ತ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದು ಆಮೂಲಕ ತನ್ನ ಆತ್ಮವಿಶ್ವಾಸವನ್ನು ಎತ್ತಿ ತೋರಿಸಿದ್ದಾಳೆ. 

ಮಂಗಳೂರು, ಎ.19: ಆ್ಯಸಿಡ್ ದಾಳಿಗೀಡಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಂತ್ರಸ್ತ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದು ಆಮೂಲಕ ತನ್ನ ಆತ್ಮವಿಶ್ವಾಸವನ್ನು ಎತ್ತಿ ತೋರಿಸಿದ್ದಾಳೆ. 

ಮಾರ್ಚ್ 4ರಂದು ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ಅಬಿನ್ ಎಂಬಾತ  ಆ್ಯಸಿಡ್ ದಾಳಿ ನಡೆಸಿದ್ದ. ತನ್ನ ಪ್ರೀತಿ ನಿರಾಕರಿಸಿದ್ದಕ್ಕಾಗಿ ಏಸಿಡ್ ಎರಚಿದ್ದ ಅನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇತರ ಇಬ್ಬರು ಸಹಪಾಠಿಗಳು ಸೇರಿ ಮೂವರು ವಿದ್ಯಾರ್ಥಿನಿಯರು ಘಟನೆಯಲ್ಲಿ ಗಾಯಗೊಂಡಿದ್ದರು. ಸಂತ್ರಸ್ತ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದರಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ  ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಐಸೊಲೇಶನ್ ವಾರ್ಡ್ ನಲ್ಲಿ ಇದ್ದುಕೊಂಡೇ ಸಿಇಟಿಗೆ ತಯಾರಿ ನಡೆಸುತ್ತಿದ್ದಳು. ಸಿಇಟಿ ಪರೀಕ್ಷೆಗಾಗಿ ಈಕೆ ಮತ್ತು ದಾಳಿಗೀಡಾದ ಇಬ್ಬರು ಸಹಪಾಠಿಗಳಿಗೆ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. ಚಿಕಿತ್ಸೆ ವೇಳೆ ದೂರದ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದ ಕಾರಣ ದ.ಕ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ಎಸ್. ರಮ್ಯಾ ಅವರ ಗಮನಕ್ಕೆ ತಂದು, ಆಸ್ಪತ್ರೆಯಿಂದ ಒಂದು ಕಿ.ಮೀ ದೂರದಲ್ಲಿರುವ ನಂತೂರು ಪದವು ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಬರೆಯಲು ಬಾಲಕಿಗೆ ಅನುಮತಿಸಲಾಗಿತ್ತು.‌

ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್‌ ನಲ್ಲಿ ಕಾಲೇಜಿಗೆ ಬಂದು ಪ್ರತ್ಯೇಕ ಕೊಠಡಿಯಲ್ಲಿ ಗುರುವಾರ ಜೀವಶಾಸ್ತ್ರ ಪತ್ರಿಕೆಯ ಪರೀಕ್ಷೆ ಬರೆದಿದ್ದಳು. ಅದೇ ದಿನ ಮಧ್ಯಾಹ್ನ 12.15ಕ್ಕೆ ಆಸ್ಪತ್ರೆಗೆ ಮರಳಿ 2.30 ಕ್ಕೆ ಮತ್ತೆ ಬಂದು ಗಣಿತ  ಪರೀಕ್ಷೆಗೆ ಬರೆದಿದ್ದಾಳೆ. ಶುಕ್ರವಾರ ಭೌತ ಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳನ್ನೂ ಬರೆದಿದ್ದಾರೆ.

Mangalore Acid attack, victim writes CET exams amid treatment.