ಪಿಲಿಕುಳ ನಿಸರ್ಗಧಾಮದ 356 ಎಕರೆ ಭೂ ಗುತ್ತಿಗೆ ರದ್ದು ; ನೇರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರ, ಅಭಿವೃದ್ಧಿ ಚಟುವಟಿಕೆಗೆ ಸಿಗಲಿದೆ ವೇಗ !

05-11-26 09:42 pm       HK News Desk   ಕರಾವಳಿ

ಪಿಲಿಕುಳ ನಿಸರ್ಗಧಾಮಕ್ಕೆ ಗೇಣಿ ಆಧಾರದಲ್ಲಿ ಮಂಜೂರು ಮಾಡಿದ್ದ 356 ಎಕರೆ ಭೂಮಿಯ ಗುತ್ತಿಗೆ ಅವಧಿಯನ್ನು ರದ್ದುಪಡಿಸಲಾಗಿದ್ದು, ಈ ಪೈಕಿ 339 ಎಕರೆ ಭೂಮಿಯನ್ನು ವಿದ್ಯುನ್ಮಾನ ಮತ್ತು ಜೈವಿಕ ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು, ನ.5: ಪಿಲಿಕುಳ ನಿಸರ್ಗಧಾಮಕ್ಕೆ ಗೇಣಿ ಆಧಾರದಲ್ಲಿ ಮಂಜೂರು ಮಾಡಿದ್ದ 356 ಎಕರೆ ಭೂಮಿಯ ಗುತ್ತಿಗೆ ಅವಧಿಯನ್ನು ರದ್ದುಪಡಿಸಲಾಗಿದ್ದು, ಈ ಪೈಕಿ 339 ಎಕರೆ ಭೂಮಿಯನ್ನು ವಿದ್ಯುನ್ಮಾನ ಮತ್ತು ಜೈವಿಕ ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಲಿಕುಳ ನಿಸರ್ಗಧಾಮವನ್ನು ಇನ್ನಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿತ್ತು. ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿರುವ 356.20 ಎಕರೆ ಜಮೀನಿನ ಗುತ್ತಿಗೆ ಅವಧಿ ರದ್ದುಪಡಿಸಿ, ಅದರಲ್ಲಿ 339.901/2 ಎಕರೆ ಭೂಮಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮಂಜೂರು ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. 

2002ರಲ್ಲಿ ಮೂಡುಶೆಡ್ಡೆ ಗ್ರಾಮದ 15 ಎಕರೆ ಮತ್ತು 2006ರಲ್ಲಿ ಮೂಡುಶೆಡ್ಡೆ ಮತ್ತು ತಿರುವೈಲು ಗ್ರಾಮದ 341.46 ಸೇರಿ ಒಟ್ಟು 356.46 ಎಕರೆ ಜಮೀನನ್ನು ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳಿಗಾಗಿ ಪ್ರತಿ ಎಕರೆಗೆ 100 ರೂ.ನಂತೆ ಶುಲ್ಕ ವಿಧಿಸಿ 30 ವರ್ಷಗಳ ಅವಧಿಗೆ ಪಿಲಿಕುಳ ನಿಸರ್ಗಧಾಮಕ್ಕೆ ಮಂಜೂರು ಮಾಡಲಾಗಿತ್ತು. ಈ ಗುತ್ತಿಗೆ ಅವಧಿ 2036ರ ತನಕ ಊರ್ಜಿತದಲ್ಲಿದ್ದರೂ ಇದನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಸರ್ಕಾರಕ್ಕೆ ಕೋಟ್ಯಂತರ ರೂ. ದರ ಪಾವತಿಸಬೇಕಿತ್ತು. ಇಷ್ಟು ಮೊತ್ತ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಹಳಷ್ಟು ಚರ್ಚೆ ಬಳಿಕ ಸಚಿವ ಸಂಪುಟದ ನಿರ್ಧಾರದಂತೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಕೆಲವು ಷರತ್ತುಗಳೊಂದಿಗೆ ಉಚಿತವಾಗಿ ಮಂಜೂರು ಮಾಡಲಾಗಿದೆ. 

ಕಂದಾಯ ಇಲಾಖೆಗೆ ಸೇರಿದ 356.20 ಒಟ್ಟು ಎಕರೆ ಜಮೀನಿನಲ್ಲಿ ಸಾರ್ವಜನಿಕ ರಸ್ತೆ, ಗೇಣಿಗೆ ನೀಡುವ ಮೊದಲೇ ಹಕ್ಕುಪತ್ರ ನೀಡಿದ್ದ ಭೂಮಿ ಮತ್ತು ನವಮಂಗಳೂರು ಬಂದರು ಪ್ರಾಧಿಕಾರ ಮಂಜೂರು ಮಾಡಿದ್ದ ಭೂಮಿ ಸೇರಿದಂತೆ ಒಟ್ಟು 24.43 ಎಕರೆ ಜಮೀನನ್ನು ಬಿಟ್ಟು ಬಿಡಲಾಗಿದೆ. ಪಿಲಿಕುಳ ನಿಸರ್ಗ ಧಾಮಕ್ಕೆ ನೇರ ಸ್ವಾಧೀನ ಇಲ್ಲದ ಕಾರಣ ಸ್ವತಂತ್ರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಸಾರ್ವಜನಿಕ ಸಹಭಾಗಿತ್ವ ಪಡೆಯಲು ಕೂಡ ಅವಕಾಶ ಇರಲಿಲ್ಲ. ಪಿಲಿಕುಳ ನಿಸರ್ಗಧಾಮವು ವಿಜ್ಞಾನ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಇರುವುದರಿಂದ ಇನ್ನು ಉಪಗುತ್ತಿಗೆ ನೀಡಲು ಮತ್ತು ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಲಿದೆ.

ಪಿಲಿಕುಳ ನಿಸರ್ಗಧಾಮದಿಂದ ಎಕರೆಗೆ 100 ರೂ.ನಂತೆ ಪ್ರತಿ ವರ್ಷ 35,600 ರೂ. ಗೇಣಿಯನ್ನು ಕಂದಾಯ ಇಲಾಖೆಗೆ ಪಾವತಿಸಲಾಗುತ್ತಿತ್ತು. ಇದಲ್ಲದೆ, ಪಿಲಿಕುಳಕ್ಕೆ ಸೇರಿದ ಕಟ್ಟಡಗಳ ಸುಮಾರು 30 ಲಕ್ಷ ರೂ. ತೆರಿಗೆಯೂ ಬಾಕಿ ಇತ್ತು, ಕಳೆದ ವರ್ಷ ಅದನ್ನು ಗ್ರಾಮ ಪಂಚಾಯಿತಿಗೆ ಪಾವತಿ ಮಾಡಲಾಗಿದೆ. ಈಗ ಜಮೀನು ಸರ್ಕಾರದ ನೇರ ಅಧೀನಕ್ಕೆ ಬಂದಿರುವುದರಿಂದ ತೆರಿಗೆ ಪಾವತಿಯಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ.