ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ, ರಷ್ಯಾ-ಭಾರತ- ಚೀನಾ ಸೇರಿದ್ರೆ ಬಲಾಢ್ಯ ಶಕ್ತಿಯಾಗಲಿದೆ, ಈಗಿನ ಸನ್ನಿವೇಶ ಬಳಸಿಕೊಳ್ಳದಿದ್ದರೆ ಮುಂದೆಂದೂ ಮೇಲೇರಲಾರೆವು ; ಲಿಟ್ ಫೆಸ್ಟ್ ನಲ್ಲಿ ಮಾಜಿ 'ರಾ' ಮುಖ್ಯಸ್ಥ ವಿಕ್ರಮ್ ಸೂದ್ 

11-01-26 12:56 pm       Mangaluru Staffer   ಕರಾವಳಿ

ಪಾಕಿಸ್ತಾನ, ಚೀನಾ, ಅಮೆರಿಕದ ಬಾಂಧವ್ಯ ವಿಚಾರದಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಮಾತನಾಡಿದ್ದು, ಸದ್ಯದ ಸನ್ನಿವೇಶದಲ್ಲಿ ವೈರಿ ರಾಷ್ಟ್ರ ಎಂದುಕೊಂಡಿರುವ ಚೀನಾ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಒಳ್ಳೆಯದು, ಆ ರೀತಿಯ ಸಂಬಂಧ ಸಾಧಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು, ಜ.11: ಪಾಕಿಸ್ತಾನ, ಚೀನಾ, ಅಮೆರಿಕದ ಬಾಂಧವ್ಯ ವಿಚಾರದಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಮಾತನಾಡಿದ್ದು, ಸದ್ಯದ ಸನ್ನಿವೇಶದಲ್ಲಿ ವೈರಿ ರಾಷ್ಟ್ರ ಎಂದುಕೊಂಡಿರುವ ಚೀನಾ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಒಳ್ಳೆಯದು, ಆ ರೀತಿಯ ಸಂಬಂಧ ಸಾಧಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಲಿಟ್ ಫೆಸ್ಟ್ ಎಂಟನೇ ಆವೃತ್ತಿಯಲ್ಲಿ ಗ್ರೇಟ್ ಪವರ್ ಗೇಮ್ಸ್- ವೆಸ್ಟರ್ನ್ ಡಿಕ್ಲೈನ್ ಟು ಈಸ್ಟರ್ನ್ ಎಸೆಂಟ್ ಎಂಬ ವಿಚಾರದಲ್ಲಿ ನಡೆದ ಗೋಷ್ಟಿಯಲ್ಲಿ ಮಾತನಾಡಿದರು. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಂದಾಗಿರುವ ಜಾಗತಿಕ ವೈಪರೀತ್ಯಗಳ ನಡುವೆ ಭಾರತ ಸಮತೋಲಿತ ಹೆಜ್ಜೆ ಇಡಬೇಕಾಗಿದೆ. ಅದರಲ್ಲೂ ಚೀನಾ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ ಎಂದರು.

ಹಾಲಿ ಸನ್ನಿವೇಶದ ಬಗ್ಗೆ ಮಾತನಾಡಿದ ಅವರು, ಅಮೆರಿಕ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಾರತವನ್ನು ಆರ್ಥಿಕವಾಗಿ ಕಂಗೆಡಿಸುವುದೇ ಅವರ ಉದ್ದೇಶ. ಯಾವುದೇ ರಾಷ್ಟ್ರ ಕೂಡ ಇತರರಿಗೆ ಪುಕ್ಕಟೆಯಾಗಿ ಏನನ್ನೂ ಕೊಡುವುದಿಲ್ಲ. ಅಂತಾರಾಷ್ಟ್ರೀಯ ಆಡಳಿತದಲ್ಲಿ ನಾವು ಗಮನಿಸಬೇಕಾದ್ದು ಏನಂದ್ರೆ, ಯಾವುದೇ ದೇಶವಾದ್ರೂ ಆರ್ಥಿಕ ಸಾಮರ್ಥ್ಯ, ಸೇನಾಬಲ ಮತ್ತು ಅದಕ್ಕೆ ತಕ್ಕಂತೆ ಶಕ್ತಿಯನ್ನು ಹೊಂದಿರುವುದು. ನನ್ನ ಗ್ರೇಟ್ ಪವರ್ ಗೇಮ್ಸ್ ಪುಸ್ತಕದ ಒಂದನೇ ಚಾಪ್ಟರ್ ಆರ್ಥಿಕ ಶಕ್ತಿಯಿಂದ ಜಗತ್ತನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಹೇಳುತ್ತದೆ.

ಚೀನಾ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿದ್ದ ಆ ಶಕ್ತಿಯನ್ನು ತನ್ನತ್ತ ಸೆಳೆದುಬಿಟ್ಟಿದೆ. ಉತ್ಪಾದನೆಯಲ್ಲಿ ಚೀನಾ ಈಗ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಇದರ ನಡುವೆ, ಗಾಳಿಗೆ ಸಿಲುಕಿದ್ದು ಯುಕ್ರೇನ್, ಆನಂತರ ಇಸ್ರೇಲ್, ಈಗ ವೆನಿಜುವೆಲಾ. ಸದ್ಯಕ್ಕೆ ಇಡೀ ಜಗತ್ತನ್ನು ಆಕರ್ಷಿಸುವ ರೀತಿಯ ಪಾಲಿಸಿ ನಮ್ಮಲ್ಲಿದೆ. ಆರ್ಥಿಕವಾಗಿ, ಭೌಗೋಳಿಕವಾಗಿ, ಸೈದ್ಧಾಂತಿಕವಾಗಿ ಮತ್ತು ಧಾರ್ಮಿಕವಾಗಿ ನಮ್ಮದೇ ಆಗಿರುವ ಒಂದು ಸಿದ್ಧ ಮಾದರಿ ಇದೆ. ನಮ್ಮಲ್ಲಿಯೂ ಎಲ್ಲ ಸಮಸ್ಯೆಯನ್ನೂ ಪರಿಹರಿಸಬಲ್ಲ ನಾಯಕರಿದ್ದಾರೆ.

ಅಮೆರಿಕದ ಅಧ್ಯಕ್ಷರನ್ನು ಉಲ್ಲೇಖಿಸುತ್ತ ಅವರೀಗ ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುತ್ತಿಲ್ಲ. ವೆನಿಜುವೆಲಾ ಬಳಿಕ ಗ್ರೀನ್ ಲ್ಯಾಂಡ್, ಯುರೋಪನ್ನು ಫಿನಿಶ್ ಮಾಡುವ ರೀತಿ ಮಾತನಾಡುತ್ತಿದ್ದಾರೆ. ತಾನು ಆಡಿದ್ದೇ ಕಾನೂನು ಅನ್ನುವ ರೀತಿ ಮಾಡುತ್ತಿದ್ದಾರೆ. ಅಂಥ ಮನುಷ್ಯನ ಜೊತೆಗೆ ಮಾತನಾಡುವುದೇನಿದೆ ಎಂದು ಪ್ರಶ್ನಿಸಿದ ವಿಕ್ರಮ್ ಸೂದ್, ಅದರ ಬದಲು ನಮ್ಮ ಜೊತೆಗೆ ನಿಲ್ಲುವ ನೂರಾರು ರಾಷ್ಟ್ರಗಳಿವೆ, ನ್ಯೂಕ್ಲಿಯರ್ ಪವರ್, ದೊಡ್ಡ ಆರ್ಮಿ ಇದ್ದಷ್ಟಕ್ಕೆ ಯುದ್ಧ ಗೆಲ್ಲುವುದಕ್ಕಾಗುವುದಿಲ್ಲ. ಹೀಗಾಗಿ ಸದ್ಯದ ಸನ್ನಿವೇಶದಲ್ಲಿ ಭಾರತ ಚೀನಾದ ಜೊತೆಗೆ ಒಳ್ಳೆಯ ಸಂಬಂಧ ಕಾಯ್ದುಕೊಳ್ಳಬೇಕಿದೆ ಎಂದರು.

ಜಾಗತಿಕ ಯುದ್ಧದ ಬಳಿಕ ಅಮೆರಿಕವು ವಿಯೆಟ್ನಾಮ್ ಪರವಾಗಿ ನಿಂತು ಅದನ್ನು ಮೂಲೆಗುಂಪು ಮಾಡಿತ್ತು. ಆನಂತರ ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುತ್ತೇನೆಂದು ಹೇಳಿ ಅಲ್ಲಿಯೂ ನೆಲಸಮ ಮಾಡಿತ್ತು. ಈಗ ಉಕ್ರೇನ್ ಜೊತೆಗೆ ನಿಂತು ಅದನ್ನೂ ಅವರದೇ ನೆಲದಲ್ಲೇ ಸಾಯುವಂತೆ ಮಾಡುತ್ತಿದೆ. ಇಂಥವರನ್ನು ಯಾರೀಗ ನಂಬುತ್ತಾರೆ, ನಾವು ಅಮೆರಿಕವನ್ನು ನಂಬಬೇಕೋ ಅಥವಾ ಚೀನಾವನ್ನು ನಂಬುವುದು ಒಳ್ಳೆಯದೋ ಎಂದು ಪುನರ್ ಚಿಂತಿಸುವುದಕ್ಕಿದು ಸಕಾಲ. ಚೀನಾ ಯಾವತ್ತಿದ್ದರೂ ನಮ್ಮ ನೆರೆಯ ರಾಷ್ಟ್ರ ಎನ್ನುವುದನ್ನು ಅಲ್ಲಗಳೆಯಲು ಆಗದು. ಚೀನಾ, ರಷ್ಯಾ, ಭಾರತ ಜೊತೆಗೂಡಿದರೆ ಅತಿ ದೊಡ್ಡ ಶಕ್ತಿಯಾಗಲು ಸಾಧ್ಯ. ಇದ್ಯಾವುದೂ ಒಂದು ರಾತ್ರಿಗೆ ಆಗಿ ಹೋಗುವುದಲ್ಲ. ಆದರೆ ಪಾಕಿಸ್ತಾನದ ಜೊತೆಗೆ ಯಾವುದೇ ಮಾತುಕತೆ, ಸಂಬಂಧ ಸರಿಪಡಿಸುವುದು ಅಗತ್ಯವಿಲ್ಲ. ಮುಸ್ಲಿಮೇತರರನ್ನು ಗುರಿಯಾಗಿಸಿ ಯುದ್ಧ ನಡೆಸಿದರೂ ಅವೆಲ್ಲವೂ ನಮ್ಮ ಪ್ರಾಬಲ್ಯದ ಮುಂದೆ ನಗಣ್ಯ ಎಂದು ಹೇಳಿದರು.

ನಮ್ಮದು ಸಮರ್ಥ ರಾಷ್ಟ್ರವಾಗಬೇಕಿದ್ದರೆ ಸಮರ್ಥ ಸರಕಾರ ಇರಬೇಕು, ಸಮರ್ಥ ವಿಪಕ್ಷವೂ ಇರಬೇಕು. ನಾವೀಗ ಎಲ್ಲದರಲ್ಲೂ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೇವೆ, ನಾವು ಬಾಲಾಕೋಟ್, ಉರಿ ದಾಳಿ ಮತ್ತು ಆಪರೇಶನ್ ಸಿಂಧೂರ್ ಮೂಲಕ ಅದನ್ನು ತೋರಿಸಿದ್ದೇವೆ. 2001, 2006 ಅಥವಾ 2008ರ ರೀತಿಯ ದಾಳಿಗಳು ಇನ್ನೆಂದೂ ಮರುಕಳಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದೇವೆ. ನಮ್ಗೆ ಗಂಭೀರ ಪೆಟ್ಟು ಬಿದ್ದ ಸಂದರ್ಭದಲ್ಲಿ ಅದಕ್ಕಿಂತ ಸಮರ್ಥ ಮರುದಾಳಿಯೂ ಅಗತ್ಯ ಎಂದು ಹೇಳಿದ ವಿಕ್ರಮ್ ಸೂದ್, ಈಗಿನ ಸನ್ನಿವೇಶ ಎಲ್ಲ ವಿಚಾರದಲ್ಲೂ ಸಕಾರಾತ್ಮಕವಾಗಿದ್ದು ಅದನ್ನು ಬಳಸಿಕೊಂಡು ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆಗೆ ಸಂಬಂಧ ಬೆಳೆಸಬೇಕಿದೆ. ಈಗಿನ ಸನ್ನಿವೇಶವನ್ನು ನಾವು ಬಳಸಿಕೊಳ್ಳದಿದ್ದರೆ ಮುಂದೆ ಯಾವತ್ತೂ ಮೇಲೇಳಲು ಸಾಧ್ಯವಿಲ್ಲ. ಡೆಮೋಗ್ರಫಿ ಈಗ ನಮ್ಮ ಕಡೆಗಿದೆ ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗಬೇಕಿದೆ ಎಂದು ವಿಕ್ರಮ್ ಸೂದ್ ಹೇಳಿದರು. ಡಾ.ಶ್ರೀಪರ್ಣಾ ಪಾಠಕ್ ಸೆಷನ್ ನಡೆಸಿಕೊಟ್ಟರು.

Former Research and Analysis Wing (RAW) chief Vikram Sood on Friday said India should reassess its global alliances and work towards building stronger ties with China instead of depending heavily on the United States, asserting that a Russia–India–China (RIC) partnership could emerge as a formidable global power. Speaking at the eighth edition of the Mangaluru Lit Fest during a session titled “Great Power Games – Western Decline to Eastern Ascent,” Sood said that in the current geopolitical scenario, maintaining constructive relations with China—despite existing tensions—is both necessary and pragmatic.