ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮಿಗಳು, ತಜ್ಞರ ಸಲಹೆ ಸ್ವೀಕಾರ ; ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ನೀತಿ, ಟೂರಿಸಂ ಸಮಾವೇಶದಲ್ಲಿ ಡಿಸಿಎಂ ಡಿಕೆಶಿ 

10-01-26 06:23 pm       Mangalore Correspondent   ಕರಾವಳಿ

ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಮಂಗಳೂರು, ಜ.10 :  ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ಅತ್ತಾವರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಕುರಿತ ಸಮಾವೇಶ ಉದ್ಘಾಟಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. “ನಮ್ಮಲ್ಲಿ 320 ಕಿ.ಮೀ ಕರಾವಳಿ ಪ್ರದೇಶವಿದೆ. ಇಲ್ಲಿ ಪ್ರಕೃತಿ ಸಂಪತ್ತಿನ ಜೊತೆಗೆ, ಈ ಭಾಗದ ಹಿರಿಯರು ದೇಶಕ್ಕೆ ಅನೇಕ ಬ್ಯಾಂಕುಗಳನ್ನು ಕೊಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಶಿಸ್ತು ಕೊಟ್ಟ ಜನ ನೀವು. ಪ್ರಪಂಚದಾದ್ಯಂತ ಈ ಕರಾವಳಿ ಭಾಗದ ಜನ ಕೆಲಸ ಮಾಡುತ್ತಿದ್ದಾರೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿರುವಷ್ಟು ಮೆಡಿಕಲ್, ಇಂಜಿನಿಯರ್, ಪಿಯುಸಿ ಕಾಲೇಜು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ. ನೀವು ಹೆಚ್ಚು ಮಾನವ ಸಂಪನ್ಮೂಲವನ್ನು ತಯಾರು ಮಾಡುತ್ತಿದ್ದೀರಿ. ಆದರೂ ಈ ಭಾಗದ ಪ್ರತಿಭಾವಂತ ಜನರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಪಂಚದ ಮೂಲೆ ಮೂಲೆಗೆ ಹೋಗುತ್ತಿದ್ದಾರೆ”

“ಈ ಭಾಗದಲ್ಲಿ ಸುಂದರ ಸಮುದ್ರ ತೀರವಿದೆ. ಗೋವಾ ಹಾಗೂ ನಮಗೆ ಇರುವ ವ್ಯತ್ಯಾಸವೇನು? ಅಲ್ಲಿರುವ ಸೌಂದರ್ಯ ನಮ್ಮಲ್ಲೂ ಇವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಏಳೆಂಟು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚೆ ಮಾಡಲಾಯಿತು. ಆಗ ಪ್ರವಾಸೋದ್ಯಮ ಅಂತಿಮ ನೀತಿಯನ್ನು ತಡೆ ಹಿಡಿಯುವಂತೆ ಹೇಳಿದೆ. ಕರಾವಳಿ ಭಾಗದಲ್ಲಿ ನಾವು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಇಲ್ಲಿರುವ ಅಡಚಣೆ ಹೇಗೆ ಸರಿಪಡಿಸಬಹುದು. ಕಾನೂನು ಚೌಕಟ್ಟಿನಲ್ಲಿ ನಿವಾರಣೆ ಮಾಡಿ ನೂತನ ನೀತಿ ತರಬೇಕು ಎಂದು ಹೇಳಿದೆ ಎಂದರು. 

"ಬಹಳಷ್ಟು ಮಂದಿ ವಿದೇಶದಲ್ಲಿ ಇರುವವರು, ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಸ್ವಂತ ಊರಲ್ಲಿ ಏನಾದರೂ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದಾರೆ. ಅವರುಗಳು ಸರ್ಕಾರದಿಂದ ಅನುಕೂಲ ಮಾಡಿಕೊಟ್ಟರೆ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ. ಈ ಕಾರಣಕ್ಕೆ ನಾನು ವಿಧಾನಸಭೆ ಸೇರಿದಂತೆ ಹಲವಾರು ಕಡೆ ಇದರ ಬಗ್ಗೆ ಮಾತನಾಡಿದ್ದೇನೆ" ಎಂದರು.

"ಇಲ್ಲಿ ಖಾಸಗಿಯವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಒಂದಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ಜೊತೆಗೆ ಅನುಕೂಲತೆ, ಅನಾನುಕೂಲತೆ, ಸಮಸ್ಯೆಗಳನ್ನ ಚರ್ಚೆ ನಡೆಸಬೇಕಿದೆ. ಈ ಭಾಗದ ಎಲ್ಲಾ ಶಾಸಕರ ಬಳಿ ಈ ಬಗ್ಗೆ ಮಾತನಾಡಿದ್ದೇನೆ.‌ ಎಲ್ಲರೂ ಬಹಳ ಆಸಕ್ತಿ ತೋರಿದ್ದಾರೆ" ಎಂದರು.

“ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದಾಗ ಮಂಗಳೂರಿನಲ್ಲೇ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಹೇಳಿದರು. ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ನಂಬಿದ್ದೇನೆ. ಹೀಗಾಗಿ ಇಂದು ನಿಮ್ಮ ಜೊತೆ ಚರ್ಚೆ ಮಾಡಲು ಬಂದಿದ್ದೇನೆ. ನಮ್ಮ ಈ ಪ್ರಯತ್ನಕ್ಕೆ ನಾವು ಕೈಜೊಡಿಸುತ್ತೇವೆ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಭಾಗದ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯಲಿದೆ ಎಂದರು.

“ಈ ಭಾಗಕ್ಕೆ ಮತ್ತೆ ಮರುಜೀವ ನೀಡಲು ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಈ ಭಾಗ ರಾತ್ರಿ 7ರ ನಂತರ ಸ್ತಬ್ಧವಾಗುತ್ತದೆ ಎಂದು ನಾನು ಈ ಹಿಂದೆ ಹೇಳಿದ್ದೇನೆ. ಕೆಲವರು ಸ್ವಾಗತಿಸಿದರು, ಕೆಲವರು ಟೀಕಿಸಿದರು. ನನ್ನ ಮಾತನ್ನು ಸುಳ್ಳು ಮಾಡುವ ಛಲ ಬರಲಿ ಎಂದು ನಾನು ಟೀಕೆ ಮಾಡಿದ್ದೆ. ಇಂದು ನಾನು ಎಲ್ಲಾ ಉದ್ಯಮದವರನ್ನು ಈ ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ನಿಮ್ಮ ಅಭಿಪ್ರಾಯ ಸ್ವೀಕರಿಸಲು ನಾವು ಬದ್ಧವಾಗಿದ್ದೇವೆ. ನೀವು ಮುಕ್ತವಾಗಿ ನಿಮ್ಮ ಸಲಹೆಗಳನ್ನು ನೀಡಿ, ನಿಮ್ಮ ಸಲಹೆ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಹಣಕಾಸು ಸ್ಥಿತಿಗೆ ಅನುಗುಣವಾಗಿ ನಾವು, ಸಿಎಂ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ಮಾಡಿ ಸಚಿವ ಸಂಪುಟದ ಮುಂದೆ ಪ್ರಸ್ತಾಪ ಮಾಡುತ್ತೇವೆ” ಎಂದರು. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ವೇದವ್ಯಾಸ ಕಾಮತ್, ಐವಾನ್ ಡಿಸೋಜ ಮತ್ತಿತರರು ಇದ್ದರು.  

ನಮ್ಮ ಯುವಕರ ಶ್ರಮ, ಪ್ರತಿಭೆ ಅಭಿವೃದ್ಧಿಗೆ ಬಳಕೆಯಾಗಬೇಕು‌ 

ಇದಕ್ಕು ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಕರಾವಳಿ, ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇಲ್ಲಿನ ಸಂಪತ್ತು ಯುವಕರ ಕ್ರಿಯಾಶೀಲತೆ ಬಳಸಿಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ನಮ್ಮ ಯುವಕರ ಪ್ರತಿಭೆ, ಶ್ರಮ ಕರಾವಳಿ ಭಾಗದ ಅಭಿವೃದ್ಧಿಗೆ ಬಳಕೆಯಾಗಬೇಕು" ಎಂದು ತಿಳಿಸಿದರು.

“ಕರಾವಳಿ, ಮಲೆನಾಡು ಭಾಗದ ಯುವಕರು ಹೊರದೇಶ ಹಾಗೂ ಊರುಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತಿದ್ದಾರೆ. ಇವರಿಗೆ ಅಗತ್ಯ ಸೌಲಭ್ಯ, ಪ್ರೋತ್ಸಾಹ  ಕೊಟ್ಟರೆ ಕರಾವಳಿ ಭಾಗದಲ್ಲೇ ಹೆಜ್ಜೆಗುರುತು ಮೂಡಿಸಬಹುದು. ಹೀಗಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ನಾನೊಬ್ಬ ಅಥವಾ ನಾಲ್ಕೈದು ಜನ ಅಧಿಕಾರಿಗಳು ಇದನ್ನು ಮಾಡಲು ಆಗುವುದಿಲ್ಲ. ಈ ಹಿಂದೆ ಸೇವೆ ಸಲ್ಲಿಸಿದ ಅಧಿಕಾರಿಗಳು ಇದರ ಬಗ್ಗೆ ಉತ್ತಮ ಅಂಶಗಳನ್ನು ಗುರುತಿಸಿದ್ದಾರೆ" ಎಂದರು.

“ಸಿಆರ್ ಜಡ್, ರಕ್ಷಣಾ ಇಲಾಖೆ, ಕರಾವಳಿ ಅಭಿವೃದ್ಧಿ ಇಲಾಖೆ ಹೀಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಹೇಳಿದ್ದೇನೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸಹತ ಪಡೆಯಲಾಗುವುದು. ಯಾವುದನ್ನೂ ಸಹ ಗುಟ್ಟಾಗಿ ಮಾಡುವುದಿಲ್ಲ. ಸಭೆಯಲ್ಲಿ ಬಂದ ಅಭಿಪ್ರಾಯಗಳನ್ನು ಸಾರ್ವಜನಿಕರ ಗಮನಕ್ಕೆ ತರಲಾಗುತ್ತದೆ. ಯಾವುದೇ ಬದಲಾವಣೆ ಮಾಡಬೇಕು ಎಂದರೂ ಮಾಡಲಾಗುವುದು.‌ ಒಟ್ಟಾರೆ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇಲ್ಲಿ ಉತ್ತಮವಾದ ಪಂಚತಾರಾ ಹೋಟೆಲ್ ಗಳಿಲ್ಲ. ಕೇರಳ, ಗೋವಾ ಹೇಗಿವೆ ಎಂದು ಚರ್ಚೆ ನಡೆಸಲು ಹೋಗುವುದಿಲ್ಲ" ಎಂದು ತಿಳಿಸಿದರು.

Deputy Chief Minister D.K. Shivakumar has said the Karnataka government is committed to developing coastal tourism by framing a dedicated policy with inputs from public representatives, entrepreneurs, experts, and officials. Addressing a tourism meet in Mangaluru, he said the coastal belt—rich in natural beauty, culture, education, and human resources—has immense untapped potential compared to regions like Goa.