ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸದಸ್ಯೆ, ಇತಿಹಾಸಕಾರ್ತಿ ಮೀನಾಕ್ಷಿ ಜೈನ್ ಗೆ ಲಿಟ್ ಫೆಸ್ಟ್ ಪ್ರಶಸ್ತಿ, 'ರಾ' ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಸೇರಿ ಖ್ಯಾತ ಚಿಂತಕರು ಭಾಗಿ, ಎಸ್.ಎಲ್.ಭೈರಪ್ಪ ಗೌರವಾರ್ಥ ವಿಶೇಷ ಗೋಷ್ಠಿ 

08-01-26 08:09 pm       Mangalore Correspondent   ಕರಾವಳಿ

ಈ ಬಾರಿಯ ನುಡಿ ಹಬ್ಬ 'ಮಂಗಳೂರು ಲಿಟ್ ಫೆಸ್ಟ್' ಜ.10 ಮತ್ತು ಜ.11ರಂದು ನಗರದ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ, ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು, ಜ.8 : ಈ ಬಾರಿಯ ನುಡಿ ಹಬ್ಬ 'ಮಂಗಳೂರು ಲಿಟ್ ಫೆಸ್ಟ್' ಜ.10 ಮತ್ತು ಜ.11ರಂದು ನಗರದ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ, ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಜ.10ರಂದು ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕ್ರಮ ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ಇದರ ಟ್ರಸ್ಟಿ ಸುನಿಲ್ ಕುಲಕರ್ಣಿ ತಿಳಿಸಿದ್ದಾರೆ. 

ಸಮಗ್ರ ಭಾರತದ ಪರಿಕಲ್ಪನೆಯನ್ನು ಸಾರುವ ಮಂಗಳೂರು ಲಿಟ್ ಫೆಸ್ಟ್ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿದ್ದು ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜ.10ರಂದು ಬೆಳಗ್ಗೆ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ಗಣ್ಯರಾದ ಶತಾವಧಾನಿ ಡಾ.ಆರ್. ಗಣೇಶ್, ರಾಜ್ಯಸಭೆ ಸದಸ್ಯೆ ಮೀನಾಕ್ಷಿ ಜೈನ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿಥಿಕ್ ಸೊಸೈಟಿಯ ರವಿ ಎಸ್, ಡಾ.ಅಜಕ್ಕಳ ಗಿರೀಶ್ ಭಟ್ ಪಾಲ್ಗೊಳ್ಳಲಿದ್ದಾರೆ. 

ಸಮಾರಂಭದಲ್ಲಿ ಈ ವರ್ಷದ ಲಿಟ್ ಫೆಸ್ಟ್ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಮೀನಾಕ್ಷಿ ಜೈನ್ ಅವರ ಜೊತೆಗೆ ವಿಶೇಷ ಸಂವಾದ ನಡೆಯಲಿದೆ. ಇತ್ತೀಚೆಗೆ ಅಗಲಿದ ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 'ಭೈರಪ್ಪ ಅವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ' ಎಂಬ ಗೋಷ್ಠಿ ಆಯೋಜಿಸಲಾಗಿದ್ದು, ಶತಾವಧಾನಿ ಆರ್ ಗಣೇಶ್ ಮತ್ತು ಜಿ.ಬಿ. ಹರೀಶ ಈ ಗೋಷ್ಠಿ ನಡೆಸಿಕೊಡಲಿದ್ದಾರೆ.

ಭಾರತದ ಗುಪ್ತಚರ ಸಂಸ್ಥೆಯಾದ 'ರಾ'ದ ಮಾಜಿ ಮುಖ್ಯಸ್ಥ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ. 

ಲಿಟ್ ಫೆಸ್ಟ್ ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ.ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ.ಆರ್ ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ಅವರು ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಮಾಧ್ಯಮ ರಂಗದ ಪ್ರಖ್ಯಾತ ಹೆಸರುಗಳಾದ ಎಎನ್ಐ ಸಂಪಾದಕೀಯ ನಿರ್ದೇಶಕರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಅವರು ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬದುಕುಳಿದವರು ಕಂಡಂತೆ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ಖ್ಯಾತ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಅವರು ಭಾಗವಹಿಸಲಿದ್ದಾರೆ. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ಎರಡು ದಿನಗಳ ಮೇಳದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಇದಲ್ಲದೆ ಅನೇಕ ರೀತಿಯ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ ಎಂದು ಸುನಿಲ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತ್ ಫೌಂಡೇಷನ್ ಸದಸ್ಯರಾದ ರಾಮದಾಸ್ ಕಟೀಲ್, ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.

The annual literary festival “Mangaluru Lit Fest” will be held on January 10 and 11 at the Dr. T.M.A. Pai International Convention Centre in the city. For the 2026 edition, the prestigious Lit Fest Award will be conferred on Padma Shri awardee, noted historian and Rajya Sabha Member Meenakshi Jain.