ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ, ತಲೆಬುರುಡೆ ನೋಡಿದ್ದೇನೆ ; ವಿಠಲ ಗೌಡ ಸ್ಫೋಟಕ ಹೇಳಿಕೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತಷ್ಟು ತಿರುವು

11-09-25 10:42 pm       Mangaluru Correspondent   ಕರಾವಳಿ

ಧರ್ಮಸ್ಥಳ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ಹೆಣಗಳ ಅವಶೇಷ ನೋಡಿದ್ದೇನೆ, ಎಸ್ಐಟಿ ಅಧಿಕಾರಿಗಳು ಕರೆದುಕೊಂಡು ಹೋದ ವೇಳೆ ಬಹಳಷ್ಟು ಹೆಣಗಳ ಅವಶೇಷ ನೋಡಲು ಸಿಕ್ಕಿದೆ…

ಬೆಳ್ತಂಗಡಿ, ಸೆ.11: ಧರ್ಮಸ್ಥಳ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ಹೆಣಗಳ ಅವಶೇಷ ನೋಡಿದ್ದೇನೆ, ಎಸ್ಐಟಿ ಅಧಿಕಾರಿಗಳು ಕರೆದುಕೊಂಡು ಹೋದ ವೇಳೆ ಬಹಳಷ್ಟು ಹೆಣಗಳ ಅವಶೇಷ ನೋಡಲು ಸಿಕ್ಕಿದೆ, ಅವನ್ನು ಅಧಿಕಾರಿಗಳು ಇನ್ನೂ ಸಂಗ್ರಹ ಮಾಡಿಲ್ಲ ಎಂದು ಸೌಜನ್ಯಾ ಮಾವ ವಿಠಲ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದೂರುದಾರ ನೀಡಿರುವ ತಲೆಬುರುಡೆಯ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಸೆ.6ರಂದು ಮತ್ತು 9ರಂದು ವಿಠಲ ಗೌಡ ಅವರನ್ನು ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಈ ವೇಳೆ, ಅಲ್ಲಿ ಮತ್ತಷ್ಟು ಹೆಣದ ಅವಶೇಷಗಳು ಪತ್ತೆಯಾಗಿದ್ದವು ಎನ್ನುವ ಸುದ್ದಿ ಹರಡಿತ್ತು. ಆದರೆ ಅಲ್ಲಿ ಮತ್ತಷ್ಟು ಶೋಧ ಕಾರ್ಯಾಚರಣೆಗೆ ನಡೆದಿರಲಿಲ್ಲ. ಆದರೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿದೆ.

ಇದೀಗ ಹೋರಾಟಗಾರರ ಕಡೆಯಿಂದ ವಿಠಲ ಗೌಡರ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬಂಗ್ಲೆಗುಡ್ಡೆ ಕಾಡಿಗೆ ಎರಡು ಬಾರಿ ಹೋದಾಗಲೂ ಹೆಣಗಳ ರಾಶಿಯನ್ನು ಕಂಡಿದ್ದೇನೆ. ಹತ್ತು ಅಡಿ ಅಂತರದಲ್ಲಿಯೇ ಅವಶೇಷಗಳು ಪತ್ತೆಯಾಗಿವೆ. ಎರಡನೇ ಬಾರಿ ಮಹಜರು ಹೋಗಿದ್ದ ವೇಳೆ ಬಹಳಷ್ಟು ಹೆಣಗಳ ಎಲುಬುಗಳು ಪತ್ತೆಯಾಗಿವೆ. ಸಣ್ಣ ಮಗುವಿನ ರೀತಿಯ ಅವಶೇಷವೂ ಕಾಣಸಿಕ್ಕಿದೆ ಎಂದು ಹೇಳಿದ್ದಾರೆ.

ಮೇಲ್ನೋಟಕ್ಕೆ ಅಲ್ಲಿ ವಾಮಾಚಾರಕ್ಕೆ ಬಳಸಿರುವ ವಸ್ತುಗಳು ಕೂಡ ಕಂಡುಬಂದಿವೆ. ಅವಶೇಷಗಳು ಕಾಣದಂತೆ ಮಾಡಲು ಮಣ್ಣು ಹಾಕಿರುವಂತೆ ಇದೆ. ಎಲುಬಿನ ಅವಶೇಷಗಳು ಅಲ್ಲಲ್ಲಿ ಬಿದ್ದುಕೊಂಡಿವೆ. ಕೆಲವು ಕಡೆ ತಲುಬುರುಡೆಗಳು ಕಾಣಸಿಕ್ಕಿವೆ. ಒಂದೇ ಕಡೆ ಮೂರು ತಲೆಬುರುಡೆಯೂ ಇರುವುದನ್ನು ಕಂಡಿದ್ದೇನೆ ಎಂದು ವಿಠಲ ಗೌಡ ಹೇಳಿಕೆ ನೀಡಿದ್ದಾರೆ.

ಸದ್ಯಕ್ಕೆ ಎಸ್ಐಟಿ ಅಧಿಕಾರಿಗಳು ಯೂಟ್ಯೂಬರ್ ಗಳನ್ನು ಮತ್ತು ಅಲ್ಲಿನ ಹೋರಾಟಗಾರರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ತಲೆಬುರುಡೆಯನ್ನು ಇದೇ ಬಂಗ್ಲೆಗುಡ್ಡೆ ಕಾಡಿನಿಂದ ವಿಠಲ ಗೌಡ ದೂರುದಾರ ಚಿನ್ನಯ್ಯನಿಗೆ ತಂದುಕೊಟ್ಟಿದ್ದಾಗಿ ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ವಿಠಲ ಗೌಡರನ್ನು ಎಸ್ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಲ್ಲದೆ, ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದರು. ಆದರೆ ಈ ವೇಳೆ ಮತ್ತಷ್ಟು ಶವದ ಸಾಕ್ಷ್ಯಗಳು ಪತ್ತೆಯಾಗಿದ್ದರಿಂದ ಅಧಿಕಾರಿಗಳು ಕೂಡ ದಂಗಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಇದೇ ವೇಳೆ, ಬುಧವಾರ ಅಧಿಕಾರಿಗಳ ತಂಡವು ಧರ್ಮಸ್ಥಳ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಅಲ್ಲಿಂದ ಅಸಹಜ ಸಾವುಗಳ ಕುರಿತ ದಾಖಲೆಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ಗ್ರಾಪಂನಿಂದ ಆರ್ಟಿಐನಡಿ ಪಡೆದ ದಾಖಲೆಯಲ್ಲಿ 279 ಅಸಹಜ ಸಾವುಗಳ ಬಗ್ಗೆ ಮಾಹಿತಿ ನೀಡಿತ್ತು. ಇದಕ್ಕೆ ಪೂರಕವಾಗಿ ಗ್ರಾಪಂ ಮಾಜಿ ಅಧ್ಯಕ್ಷರು ಕೂಡ ನಾವು ಅನೇಕ ಅಸಹಜ ಸಾವುಗಳ ಹೆಣಗಳನ್ನು ಹೂತು ಹಾಕಿದ್ದೆವು ಎಂದು ಹೇಳಿಕೆ ನೀಡಿದ್ದರು.

In a shocking revelation, Vittal Gowda, uncle of deceased Soujanya, has claimed that he personally saw piles of human remains, including skulls and bones, in the Banglegudde forest near Dharmasthala Snanaghatta, while being taken there by SIT officials for investigation.