Mangalore Talapady, Speaker Khader Orders Probe: ತಲಪಾಡಿಯಲ್ಲಿ ಭೀಕರ ಅಪಘಾತ ; ಘಟನೆಗೆ ಚಾಲಕನ ನಿರ್ಲಕ್ಷ್ಯ, ಅತಿವೇಗ ಕಾರಣ! ಸಮಗ್ರ ತನಿಖೆಗೆ ಸೂಚಿಸಿದ ಸ್ಪೀಕರ್ ಖಾದರ್, ಸರ್ಕಾರದಿಂದ ಗರಿಷ್ಠ ಪರಿಹಾರಕ್ಕೆ ಕ್ರಮ, ತುರ್ತು ಒಂದೊಂದು ಲಕ್ಷ ನೀಡಿದ ಕೆಎಸ್ಸಾರ್ಟಿಸಿ 

30-08-25 11:55 am       Mangalore Correspondent   ಕರಾವಳಿ

ಕರ್ನಾಟಕ- ಕೇರಳ ಗಡಿ ಪ್ರದೇಶ ಮೇಲಿನ ತಲಪಾಡಿಯ ಫ್ಲೈ ಓವರ್ ಬಳಿ ಕೆಎಸ್ಸಾರ್ಟಿಸಿ ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಗುರುವಾರ ಮಧ್ಯಾಹ್ನ ನಡೆದಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಆರು ಮಂದಿಯ ಮೃತದೇಹಗಳನ್ನ ಗುರುವಾರ ರಾತ್ರಿಯೇ ಮೂರು ಪ್ರತ್ಯೇಕ ಮಸೀದಿಗಳ ಧಪನ ಭೂಮಿಯಲ್ಲಿ ಧಪನಗೈಯಲಾಗಿದೆ.

ಉಳ್ಳಾಲ. ಆ.30 : ಕರ್ನಾಟಕ- ಕೇರಳ ಗಡಿ ಪ್ರದೇಶ ಮೇಲಿನ ತಲಪಾಡಿಯ ಫ್ಲೈ ಓವರ್ ಬಳಿ ಕೆಎಸ್ಸಾರ್ಟಿಸಿ ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಗುರುವಾರ ಮಧ್ಯಾಹ್ನ ನಡೆದಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಆರು ಮಂದಿಯ ಮೃತದೇಹಗಳನ್ನ ಗುರುವಾರ ರಾತ್ರಿಯೇ ಮೂರು ಪ್ರತ್ಯೇಕ ಮಸೀದಿಗಳ ಧಪನ ಭೂಮಿಯಲ್ಲಿ ಧಪನಗೈಯಲಾಗಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಅಪರಿಮಿತ ವೇಗದಲ್ಲಿ ಧಾವಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಮಂಜೇಶ್ವರಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾಕ್ಕೆ ಮುಖಾಮುಖಿ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಿಕ್ಷಾ ಅಪ್ಪಚ್ಚಿಯಾಗಿದ್ದು ಚಾಲಕ ಸೇರಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದರು. ಕೆ.ಸಿ ರೋಡ್ ಬಳಿಯ ಅಜ್ಜಿನಡ್ಕ ನಿವಾಸಿ ಖದೀಜ(60), ಅವರ ತಂಗಿ ನಫೀಸ(52), ಖದೀಜ ಅವರ ಅಣ್ಣನ ಮಗಳು ಹಸ್ನ(12), ತಂಗಿಯ ಮಗಳು ಆಯಿಷ ಫಿದಾ(19), ನಫೀಸ ಅವರ ಅತ್ತೆ ಪರಂಗಿಪೇಟೆ ನಿವಾಸಿ ಅವ್ವಮ್ಮ (72) ಮತ್ತು ಅಜ್ಜಿನಡ್ಕ ಮುಳ್ಳುಗುಡ್ಡೆ ನಿವಾಸಿ ರಿಕ್ಷಾ ಚಾಲಕ ಹೈದರ್ ಆಲಿ (47) ಅವರು ಘಟನೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದರು.

ರಿಕ್ಷಾಕ್ಕೆ ಢಿಕ್ಕಿ ಹೊಡೆಯುತ್ತಲೇ ಬಸ್ ಚಾಲಕ ಸೀಟಿನಿಂದಿಳಿದು ಓಡಿದ್ದು ಈ ವೇಳೆ ಚಾಲಕನಿಲ್ಲದ ಬಸ್ಸು ಹಿಮ್ಮುಖವಾಗಿ ಚಲಿಸಿದ್ದು ರಸ್ತೆ ಬದಿ ನಿಲ್ಲಿಸಿದ್ದ ಮತ್ತೊಂದು ರಿಕ್ಷಾ ಮತ್ತು ಬಸ್ಸಿಗೆ ಕಾಯುತ್ತಿದ್ದ ತಾಯಿ ಮತ್ತು ಮಗನಿಗೆ ಢಿಕ್ಕಿ ಹೊಡೆದಿತ್ತು. ಬಸ್ಸಿಗಾಗಿ ಕಾಯುತ್ತಿದ್ದ ಕಾಸರಗೋಡಿನ ಪೆರುಂಬಲ ನಿವಾಸಿ ಲಕ್ಷ್ಮಿ(61) ಮತ್ತು ಅವರ ಮಗ ಸುರೇಂದ್ರ(39) ಗಂಭೀರ ಗಾಯಗೊಂಡಿದ್ದು ಅವರನ್ನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪರಿಮಿತ ವೇಗದಲ್ಲಿದ್ದ ಕೆಎಸ್ಸಾರ್ಟಿಸಿ ಬಸ್ಸು ಚಾಲಕನು ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಘಟನೆ ನಡೆದಿರೋದಾಗಿ ಹೇಳಲಾಗಿದೆ. ಅಪಘಾತಕ್ಕೀಡಾದ ಬಸ್ಸು ಮತ್ತು ಆಟೋ ರಿಕ್ಷಾವನ್ನ ಮಂಜೇಶ್ವರ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಮೃತ ಪಟ್ಟಿದ್ದ ಖದೀಜ, ನಫೀಸ, ಆಯಿಷ ಫಿದಾ ಮತ್ತು ಹಸ್ನ ಅವರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಯ ಬಳಿಕ ಕಲ್ಲಾಪು ಪಟ್ಲ ಮಸೀದಿ, ಅವ್ವಮ್ಮ ಅವರ ಮೃತದೇಹವನ್ನ ಪರಂಗಿಪೇಟೆ ಮಸೀದಿ ಮತ್ತು ಹೈದರ್ ಆಲಿಯವರ ಮೃತದೇಹವನ್ನ ಕಿನ್ಯ ಮಸೀದಿಯ ಧಪನ ಭೂಮಿಯಲ್ಲಿ ಧಪನಗೈಯಲಾಗಿದೆ.

ಮೃತ ರಿಕ್ಷಾ ಚಾಲಕ ಹೈದರ್ ಆಲಿ ಅವರಿಗೆ ಮೂರು ಗಂಡು ಮತ್ತು ಒಂದು ಹೆಣ್ಮಗಳಿದ್ದು ಅದರಲ್ಲಿ ಓರ್ವ ಪುತ್ರನು ವಿಕಲಾಂಗನಿದ್ದಾನೆ. ಹೈದರ್ ಅವರು ರಿಕ್ಷಾ ಚಲಾಯಿಸಿಯೇ ನಾಲ್ಕು ಮಕ್ಕಳನ್ನ ಸಾಕುತ್ತಿದ್ದರು. ಹೈದರ್ ಅವರ ವಿಕಲಾಂಗ ಪುತ್ರ ನಿತ್ಯವೂ ರಾತ್ರಿ ತಂದೆಯ ಬರುವಿಕೆಗಾಗಿಯೇ ಎದುರು ನೋಡುತ್ತಿದ್ದನಂತೆ. ಆದರೆ ಗುರುವಾರ ನಡೆದ ಅಪಘಾತದಲ್ಲಿ ಹೈದರ್ ಅವರು ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿರುವುದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. 

ಮದುವೆಗೆ ತೆರಳುತ್ತಿದ್ದವರು ಕೂದಲೆಲೆ ಅಂತರದಲ್ಲಿ ಪಾರು 

ತೊಕ್ಕೊಟ್ಟು ನೆಮ್ಮದಿ ಕೇಂದ್ರದ ಸಿಬ್ಬಂದಿ ಮಾಲತಿ ಸುವರ್ಣ ಅವರು ತಲಪಾಡಿಯ ಚರ್ಚ್ ಸಭಾಂಗಣದಲ್ಲಿ ನಡೆಯುತ್ತಿದ್ದ ತನ್ನ ಹಳೆಯ ಸಹೋದ್ಯೋಗಿಯ ಮದುವೆಗೆಂದು ಉಳ್ಳಾಲ ತಾಲೂಕಿನ ವಿಲೇಜ್ ಅಸಿಸ್ಟೆಂಟ್ ಮನೋಜ್ ಪೂಜಾರಿ ಉಳ್ಳಾಲ ಬೈಲ್ ಮತ್ತು ಅಬೂಬಕ್ಕರ್ ಎಂಬವರ ಜೊತೆ ಕಾರಲ್ಲಿ ತೆರಳುತ್ತಿದ್ದರು. ತಲಪಾಡಿ ತಲುಪಿದಾಗಲೇ ಬಸ್- ಆಟೋ ಅಪಘಾತ ಸಂಭವಿಸಿದೆ. ಕೆಎಸ್ಸಾರ್ಟಿಸಿ ಬಸ್ಸು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಳಿಕ ಹಿಮ್ಮುಖವಾಗಿ ಚಲಿಸುತ್ತಿರುವುದನ್ನ ಕಂಡ ಕಾರು ಚಾಲಕ ಮನೋಜ್ ಕಾರನ್ನ ಮುಂದಕ್ಕೆ ಚಲಾಯಿಸದೆ ನಿಲ್ಲಿಸಿದ್ದರಿಂದ ಬಚಾವ್ ಆಗಿದ್ದರು. ಬಸ್ಸು ಕಾರಿನ ಮುಂದಿದ್ದ ರಿಕ್ಷಾ ಮತ್ತು ಬಸ್ಸಿಗೆ ಕಾಯುತ್ತಿದ್ದ ತಾಯಿ, ಮಗನಿಗೆ ಢಿಕ್ಕಿ ಹೊಡೆದಿದೆ. ಘಟನೆಯನ್ನ ಕಣ್ಣಾರೆ ಕಂಡ ಕಾರಿನ ಪ್ರಯಾಣಿಕರು ಕೂದಲೆಲೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ.

ಮೃತದೇಹಗಳನ್ನ ಇರಿಸಲಾಗಿದ್ದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಗುರುವಾರ ಸಂಜೆ ಭೇಟಿ ನೀಡಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ ಖಾದರ್, ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕೆಎಸ್ಸಾರ್ಟಿಸಿ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಮೃತರ ಕುಟುಂಬಗಳಿಗೆ ತುರ್ತು ಪರಿಹಾರ 

ಮೃತರ ಕುಟುಂಬಗಳಿಗೆ ಕೆಎಸ್ಸಾರ್ಟಿಸಿ ಡಿಪೋ ವತಿಯಿಂದ ಸ್ಪೀಕರ್ ಯುಟಿ ಖಾದರ್ ಸೂಚನೆ ಮೇರೆಗೆ ತಲಾ ಒಂದು ಲಕ್ಷದಂತೆ ಒಟ್ಟು ಆರು ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ಶುಕ್ರವಾರ ವಿತರಣೆ  ಮಾಡಲಾಯಿತು. ಕೆಎಸ್ಸಾರ್ಟಿಸಿ ಮಂಗಳೂರು ಡಿಪೋದ ಡಿಟಿಒ ಕಮಲ್ ಕುಮಾರ್, ಮ್ಯಾನೇಜರ್ ಪ್ರಶಾಂತ್, ಸಹಾಯಕ ಸಂಚಾರ ನಿರೀಕ್ಷಕ ಅಫ್ಝಲ್ ಅತೀಕ್, ಕೋಟೆಕಾರ್ ಪ.ಪಂ. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಅವರ ಸಮಕ್ಷಮದಲ್ಲಿ ಪರಿಹಾರ ವಿತರಿಸಲಾಯಿತು. ಮೃತರ ಕುಟುಂಬಕ್ಕೆ ತ್ವರಿತವಾಗಿ ತಲಾ ಒಂದು ಲಕ್ಷ  ರೂಪಾಯಿ ಪರಿಹಾರ ನೀಡಲು ಕೆಎಸ್ಸಾರ್ಟಿಸಿ ಡಿಪೋಗೆ ಸೂಚನೆ ನೀಡಿದ್ದೇನೆ. ಕೋರ್ಟ್ ಅದಾಲತ್ ನಡೆದ ಬಳಿಕ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರವನ್ನ ಸಂತ್ರಸ್ತರಿಗೆ ನೀಡಲಾಗುವುದು. ಬಸ್ಸು ಚಾಲಕನ ನಿರ್ಲಕ್ಷ್ಯ ಧೋರಣೆಯಿಂದ ಘಟನೆ ನಡೆದಿದೆ ಎಂಬ ಆರೋಪ ಇದೆ. ಆದರೆ ಘಟನೆಯನ್ನು ನೋಡಿದವರು ಇಲ್ಲ. ಎಲ್ಲದಕ್ಕೂ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದೆಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

A tragic accident near the Talapady flyover on the Karnataka–Kerala border claimed six lives on Thursday afternoon when a speeding KSRTC bus collided head-on with an autorickshaw. The impact crushed the autorickshaw, instantly killing the driver and five members of the same family. The deceased have been identified as Khadeeja (60), her sister Nafeesa (52), Khadeeja’s niece Hasna (12), Nafeesa’s daughter Aysha Fida (19), Nafeesa’s aunt Avvamma (72) from Parangipete, and autorickshaw driver Haider Ali (47) from Mullugudde, Ajjinadka.