ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾರ್ಯಸಾಧ್ಯತೆ ಅಧ್ಯಯನಕ್ಕೆ ಖಾಸಗಿ ಕಂಪನಿಗೆ ಗುತ್ತಿಗೆ, 2500 ಎಕ್ರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಬೇಡಿಕೆ, ಮೂಡುಬಿದ್ರೆ- ಉಡುಪಿ ಬಗ್ಗೆ ಆಸಕ್ತಿ 

12-05-25 08:22 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಸರ್ಕಾರಕ್ಕೆ ಈ ಪ್ರಸ್ತಾಪ ಸಲ್ಲಿಸಿದ್ದು, ಮಂಗಳೂರು ವಿಮಾನ ನಿಲ್ದಾಣದ ಜೊತೆಗೆ ಮಂಗಳೂರು, ಉಡುಪಿ, ಮೂಡುಬಿದ್ರೆ ಅಥವಾ ಇನ್ನಾವುದೇ ಪ್ರದೇಶದಲ್ಲಿ ಪ್ರತ್ಯೇಕ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯ ಮುಂದಿಟ್ಟಿದೆ.

ಮಂಗಳೂರು, ಮೇ 12 : ಕರಾವಳಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಸರ್ಕಾರಕ್ಕೆ ಈ ಪ್ರಸ್ತಾಪ ಸಲ್ಲಿಸಿದ್ದು, ಮಂಗಳೂರು ವಿಮಾನ ನಿಲ್ದಾಣದ ಜೊತೆಗೆ ಮಂಗಳೂರು, ಉಡುಪಿ, ಮೂಡುಬಿದ್ರೆ ಅಥವಾ ಇನ್ನಾವುದೇ ಪ್ರದೇಶದಲ್ಲಿ ಪ್ರತ್ಯೇಕ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯ ಮುಂದಿಟ್ಟಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ಪಿಪಿಪಿ ಮಾದರಿಯಲ್ಲಿ ನೂತನ ಬಹುಮಾದರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಆಗಬೇಕು. ಇದಕ್ಕಾಗಿ ಕಾರ್ಯಸಾಧ್ಯತೆ ಅಧ್ಯಯನ ವರದಿ ತಯಾರಿಸಿ, ಕೇಂದ್ರ ಸರಕಾರದ ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿದೆ.
ಯೋಜನೆ ಅನುಷ್ಠಾನದ ಮೇಲ್ವಿಚಾರಣೆಗೆ ಗುತ್ತಿಗೆ ಆಧಾರದ ಮೇಲೆ ವಿಮಾನ ನಿಲ್ದಾಣ ವಲಯದ ತಜ್ಞರನ್ನು ನೇಮಿಸಬೇಕು. ಯೋಜನೆ ಕಾರ್ಯಗತಗೊಳಿಸಲು ಪ್ರತ್ಯೇಕ ಎಸ್.ಪಿ.ವಿ ರಚಿಸುವಂತೆ ಹಾಗೂ ಕಾರ್ಯಸಾಧ್ಯತೆ ವರದಿ ಆಧಾರದಲ್ಲಿ ಕೇಂದ್ರ- ರಾಜ್ಯ ಸರಕಾರಗಳ ಮೂಲಕ ಅನುಷ್ಠಾನ ಕಾರ್ಯಗತಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡುವಂತೆ ಕೋರಲಾಗಿದೆ.

ಇದಲ್ಲದೆ, ಈಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಚ್ಚುವರಿ ಭೂಮಿಯನ್ನು ಪಿಪಿಪಿ ಮಾದರಿಯಲ್ಲಿ ಹೈಟೆಕ್ ಸಿಟಿಯಾಗಿ ಪರಿವರ್ತಿಸಬೇಕು. ಹೊಸ ವಿಮಾನ ನಿಲ್ದಾಣ ಯೋಜನೆ ನಿರ್ವಹಣೆಗೆ ಇದರಿಂದ ಆದಾಯವೂ ಲಭ್ಯವಾಗಲಿದೆ ಎಂದು ಸರಕಾರದ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯದರ್ಶಿಗೆ ಕೆಪಿಸಿಸಿ ಸದಸ್ಯ ಮೋಹನದಾಸ ಹೆಗ್ಡೆಯವರ ಪತ್ರ ಉಲ್ಲೇಖಿಸಿ ನಿಗಮದ ವ್ಯವಸ್ಥಾಪಕರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಉಡುಪಿ- ಮಂಗಳೂರು ರಾಜ್ಯದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳಾಗಿದ್ದು, ಈ ಭಾಗದ ಹೆಚ್ಚಿನ ಜನರು ಬೆಂಗಳೂರು, ಮುಂಬೈ, ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ವಿಮಾನ ಅವಲಂಬನೆಯೂ ಹೆಚ್ಚಿದ್ದು, ಮಂಗಳೂರಿನ ಬಜ್ಪೆಯಲ್ಲಿರುವ ಟೇಬಲ್ ಟಾಪ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಬೇಡಿಕೆ ಮತ್ತು ಕಾರ್ಗೋ ವಿಮಾನಗಳ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ರಚಿಸುವುದಕ್ಕಾಗಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಪ್ರಾಥಮಿಕ ಪೂರ್ವಭಾವಿ ಅಧ್ಯಯನಕ್ಕಾಗಿ ಮೆಸರ್ಸ್ ರೈಟ್ಸ್ ಸಂಸ್ಥೆಯನ್ನು ನೇಮಿಸಿದ್ದು, ತಜ್ಞರ ಮೂಲಕ ಅಧ್ಯಯನಕ್ಕೆ ಮುಂದಾಗಿದೆ.

ಈ ಕುರಿತ ಬೇಡಿಕೆ ಹತ್ತು ವರ್ಷಗಳ ಹಿಂದೆಯೇ ಇತ್ತು. ಇದಕ್ಕಾಗಿ ಒಂದು ಸಾವಿರ ಹೆಕ್ಟೇರ್ ಭೂಮಿ ಗುರುತಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ 2017ರಲ್ಲಿ ಬೇಡಿಕೆ ಇರಿಸಲಾಗಿತ್ತು. ಸದ್ಯಕ್ಕೆ ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ 132ರಿಂದ 256 ಎಕರೆ ಜಮೀನು ಅಗತ್ಯ ಇದೆ ಎನ್ನಲಾಗುತ್ತಿದ್ದು ಇದರ ಬದಲು ಪ್ರತ್ಯೇಕ ವಿಮಾನ ನಿಲ್ದಾಣ ಮಾಡಬೇಕು ಎನ್ನುವ ಒತ್ತಾಸೆಯೂ ಇದೆ. ಹೊಸ ವಿಮಾನ ನಿಲ್ದಾಣಕ್ಕೆ ಸಮತಟ್ಟಾದ ಕನಿಷ್ಠ 2500 ಎಕರೆ ಜಮೀನು ಅಗತ್ಯವಿದ್ದು, ಮಂಗಳೂರು- ಉಡುಪಿ ಮಧ್ಯೆ ಎಲ್ಲಿ ಲಭ್ಯವಿದೆ ಎನ್ನುವ ಬಗ್ಗೆ ತಲಾಶ್ ನಡೆಯುತ್ತಿದೆ. ಹಾಲಿ ಇರುವ ಮಂಗಳೂರು ವಿಮಾನ ನಿಲ್ದಾಣ ಬಜ್ಪೆಯ ಗುಡ್ಡದಲ್ಲಿ ಇರುವುದರಿಂದ ದೊಡ್ಡ ಗಾತ್ರದ ವಿದೇಶಿ ವಿಮಾನಗಳು ಇಳಿಯುವುದಕ್ಕೆ ಆಗಲ್ಲ. ಹೀಗಾಗಿ ಸರಕು ಸಾಗಣೆಯ ಬೃಹತ್ ಕಾರ್ಗೋ ವಿಮಾನಗಳು, ಬೋಯಿಂಗ್ ವಿಮಾನಗಳು ಬೆಂಗಳೂರಿಗೇ ಬಂದು ಅಲ್ಲಿಂದಲೇ ಇತರೆಡೆಗೆ ಸರಕು ಸಾಗಿಸುವ ವ್ಯವಸ್ಥೆ ಇದೆ.

ಈ ಹಿಂದೆ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ವಿಶಾಲ ಜಾಗ ಇರುವುದರಿಂದ ವಿಮಾನ ನಿಲ್ದಾಣ ಮಾಡಬಹುದು ಎನ್ನುವ ಪ್ರಸ್ತಾಪ ಇತ್ತು. ಆನಂತರ, ಅಂತಾರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣ ಮಾಡಬಹುದೆನ್ನುವ ಪ್ರಸ್ತಾಪವೂ ಕೇಳಿಬಂದಿತ್ತು. ಇದೀಗ ಪರ್ಯಾಯ ವಿಮಾನ ನಿಲ್ದಾಣದ ಅವಶ್ಯಕತೆ ಮನಗಂಡು ಉಡುಪಿ- ಮಂಗಳೂರು ಮಧ್ಯೆ ಮೂಡುಬಿದಿರೆಯ ಪ್ರಸ್ತಾಪವೂ ಕೇಳಿಬಂದಿದೆ. ಮೂಡುಬಿದ್ರೆ ಎರಡು ಜಿಲ್ಲೆಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲೆಗೂ ಹತ್ತಿರ ಇರುವುದರಿಂದ ಈ ಕುರಿತು ಒಲವಿರುವ ಸಾಧ್ಯತೆ ಇದೆ.

A formal proposal has been submitted to the state government seeking the development of a new airport in the Karavali (Coastal Karnataka) region. The Karnataka State Industrial and Infrastructure Development Corporation (KSIIDC) has put forth the suggestion, emphasizing the need for a separate, fully equipped airport in addition to the existing Mangaluru International Airport.