Suhas Shetty murder, MP Brijesh Chowta, Parameshwar: ಎನ್ಐಎ ತನಿಖೆಗೆ ಕೊಡಲು ಗೃಹ ಸಚಿವರಿಗೆ ಭಯ ಏಕೆ ? ಕಾಂಗ್ರೆಸ್- ಪಿಎಫ್ಐ ಹೊಂದಾಣಿಕೆ ಹೊರಬರುವ ಭಯವೇ? ಕರಾವಳಿಯಲ್ಲಿ ಇಸ್ಲಾಮಿಕ್ ಶಕ್ತಿಗಳ ಪ್ರಾಬಲ್ಯಕ್ಕೆ ಅವಕಾಶ ಮಾಡಿಕೊಡ್ತಿದ್ದೀರಾ..?

05-05-25 10:43 pm       Mangalore Correspondent   ಕರಾವಳಿ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಲು ಗೃಹ ಸಚಿವರಿಗೆ ಯಾಕೆ ಭಯ ಕಾಡುತ್ತಿದೆ, ಕಾಂಗ್ರೆಸ್ – ಪಿಎಫ್ಐ ಹೊಂದಾಣಿಕೆ ಹೊರ ಬಂದೀತು ಎನ್ನುವ ಭಯ ಇದೆಯೇ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಮಂಗಳೂರು, ಮೇ 5 : ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಲು ಗೃಹ ಸಚಿವರಿಗೆ ಯಾಕೆ ಭಯ ಕಾಡುತ್ತಿದೆ, ಕಾಂಗ್ರೆಸ್ – ಪಿಎಫ್ಐ ಹೊಂದಾಣಿಕೆ ಹೊರ ಬಂದೀತು ಎನ್ನುವ ಭಯ ಇದೆಯೇ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಎನ್ಐಎ ತನಿಖೆಯಾದರೆ ರಾಜ್ಯ ಸರ್ಕಾರದ ಆಶ್ರಯದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳು ಪ್ರಬಲ ಆಗುತ್ತಿರುವುದಕ್ಕೆ ತಡೆ ಬೀಳುತ್ತದೆ ಎಂದು ಎನ್ಐಎ ತನಿಖೆಯಾಗದಂತೆ ಅಡ್ಡಿ ಪಡಿಸುತ್ತಿದ್ದೀರಾ.. ತನಿಖೆಗೆ ಮೊದಲೇ ಸುಹಾಸ್ ಶೆಟ್ಟಿ ಕ್ರಿಮಿನಲ್, ರೌಡಿಶೀಟರ್ ಅಂತ ಹೇಳಿಕೆ ಕೊಟ್ಟು ಕರಾವಳಿ ಬಗ್ಗೆ ತಪ್ಪು ಅಭಿಪ್ರಾಯ ಹುಟ್ಟಿಸುತ್ತಿದ್ದೀರಾ.. ಯುಟಿ ಖಾದರ್ ಅಣತಿಯಂತೆ ಮೂಲಭೂತವಾದಿ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ತನಿಖೆಗೆ ಬೆಂಬಲ ನೀಡಬೇಕಾಗಿದ್ದ ಸ್ಪೀಕರ್ ಖಾದರ್ ಅವರು, ಸುಹಾಸ್ ಕೊಲೆಯಲ್ಲಿ ಫಾಜಿಲ್ ಕುಟುಂಬಸ್ಥರ ಕೈವಾಡ ಇಲ್ಲವೆಂದು ಹೇಳಿ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಕೊಡುವ ಯತ್ನ ಮಾಡಿದ್ದಾರೆ. ಇವರೇಕೆ ಈಗ ಎನ್ಐಎ ತನಿಖೆಗೆ ಅಡ್ಡಿ ಪಡಿಸುತ್ತಿದ್ದಾರೆ. ಪಿಎಫ್ಐ ಪಾತ್ರ ಏನಿದೆಯೆಂದು ಹೊರ ಬರಬಾರದು ಎನ್ನುವ ಉದ್ದೇಶ ಇದೆಯೇ ಎಂದು ಕೇಳಿದ್ದಾರೆ. ಅಲ್ಲದೆ, 2023ರಲ್ಲಿ ಇಂಡಿಯಾ ಟುಡೇ ಕುಟುಕು ಕಾರ್ಯಾಚರಣೆಯಲ್ಲಿ ಕರಾವಳಿಯ ಪಿಎಫ್ಐ ಕ್ಯಾಡರ್ ಗಳು ಸಂಘಟನೆ ನಿಷೇಧಗೊಂಡ ಬಳಿಕ ಎಸ್ಡಿಪಿಐ ಜೊತೆ ಸೇರಿದ್ದನ್ನು ಹೇಳಿಕೊಂಡಿದ್ದರು. ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಪಿಎಫ್ಐ ನೆಟ್ವರ್ಕ್ ಪರವಾಗಿ ಫಂಡಿಂಗ್ ಮತ್ತು ಲಾಜಿಸ್ಟಿಕ್ ವ್ಯವಸ್ಥೆ ಆಗುತ್ತಿರುವುದನ್ನು ಹೇಳಿದ್ದರು. ದೇಶ ವಿರೋಧಿ ಕೃತ್ಯಗಳ ಬಗ್ಗೆಯೂ ಆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಎನ್ಐಎ ತನಿಖೆಯ ಮೂಲಕ ಕರಾವಳಿಯಲ್ಲಿ ರಾಷ್ಟ್ರವಿರೋಧಿ ಚಟುವಟಿಕೆ, ಇಸ್ಲಾಮಿಕ್ ಮೂಲಭೂತವಾದ, ಜಿಹಾದಿ ಶಕ್ತಿ ತಡೆಯುವ ಉದ್ದೇಶ ಇರುತ್ತದೆ. ಈ ಹಿಂದೆಯೂ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಎನ್ಐಎ ತನಿಖೆಯ ನಂತರವೇ ಒಂದು ವರ್ಷದ ನಂತರ ಪ್ರಮುಖ ಸೂತ್ರಧಾರಿಯಾಗಿದ್ದ ಮುಸ್ತಫಾ ಪೈಚಾರು ಎಂಬಾತನನ್ನು ಚೆನ್ನೈಯಲ್ಲಿ ಬಂಧಿಸಲಾಗಿತ್ತು. ಆತನಿಗೆ ಆಶ್ರಯ ಕೊಟ್ಟವರನ್ನೂ ಎನ್ಐಎ ಬಂಧನ ಮಾಡಿತ್ತು. ಪ್ರಮುಖ ಆರೋಪಿಗಳನ್ನು ಎನ್ಐಎ ಬಂಧಿಸಿತ್ತೇ ವಿನಾ ಸ್ಥಳೀಯ ಪೊಲೀಸರಲ್ಲ. ಈಗಲೂ ಕರಾವಳಿಯಲ್ಲಿ ಬೆಸೆಯುತ್ತಿರುವ ರಕ್ತಸಿಕ್ತ ಜಾಲವನ್ನು ಕಿತ್ತು ಹಾಕುವ ಕೆಲಸವನ್ನು ಎನ್ಐಎ ಮೂಲಕ ಮಾಡಬೇಕಾಗಿದೆ.

ಕರಾವಳಿ ಜನರ ವಿಶ್ವಾಸವನ್ನು ಗಳಿಸುವುದಕ್ಕಾಗಿ ಮತ್ತು ಕಮ್ಯುನಲ್ ಎಂದು ಹಣೆಪಟ್ಟಿ ಕಟ್ಟಿ ಜಿಲ್ಲೆಯ ಅಭಿವೃದ್ಧಿ ತಡೆಯುವ ಹಿಡನ್ ಅಜೆಂಡಾವನ್ನು ತಪ್ಪಿಸುವುದಕ್ಕಾಗಿ ಎನ್ಐಎ ತನಿಖೆ ಆಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರ ಹಿತ ಬಯಸುವವರಾಗಿದ್ದು, ಕಮ್ಯುನಲ್ ಅಂತ ಹೇಳಿ ಕಪ್ಪು ಚುಕ್ಕೆ ಇಡುವ ಕೆಲಸ ಮಾಡಬೇಡಿ. ಫಾಜಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಟ್ಟು ಕರಾವಳಿಗೆ ಕೆಟ್ಟ ಹೆಸರು ತರುವ ಹುನ್ನಾರಕ್ಕೆ ಓಗೊಡದೆ ಜಿಲ್ಲೆಯ ಬಹು ಜನರ ಅಪೇಕ್ಷೆಯಂತೆ ಎನ್ಐಎ ತನಿಖೆಗೆ ಶಿಫಾರಸು ಮಾಡುವಂತೆ ಗೃಹ ಸಚಿವರನ್ನು ಕ್ಯಾಪ್ಟನ್ ಚೌಟ ಆಗ್ರಹ ಮಾಡಿದ್ದಾರೆ.

ಡಿಕೆಶಿಯನ್ನು ರೌಡಿ ಎನ್ನುತ್ತಾರೆಯೇ ?

ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್ ಅಲ್ವಾ ಎಂದು ಕೇಳಿದ ಪ್ರಶ್ನೆಗೆ, ಹಾಗೆ ನೋಡಿದರೆ ಕಾಂಗ್ರೆಸಿನಲ್ಲಿ ಎಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯವರಿಲ್ಲ. ಚುನಾವಣೆ ಸಂದರ್ಭದಲ್ಲಿ ಘೋಷಿತ ಪಟ್ಟಿ ಪ್ರಕಾರ 58 ಶೇಕಡಾ ಚುನಾವಣೆಗೆ ನಿಂತವರು ಕ್ರಿಮಿನಲ್ ಹಿನ್ನಲೆಯವರು. ಡಿಕೆ ಶಿವಕುಮಾರ್ ಮೇಲೆ 19 ಪ್ರಕರಣಗಳಿದ್ದು, ಇವರನ್ನು ಗೃಹ ಸಚಿವರು ರೌಡಿಶೀಟರ್ ಅನ್ನುತ್ತಾರೆಯೇ ಅಥವಾ ಕಾಂಗ್ರೆಸ್ ಪಕ್ಷವನ್ನು ರೌಡಿಗಳ ಪಕ್ಷ ಎನ್ನುತ್ತಾರೆಯೇ. ಸುಹಾಸ್ ರೌಡಿಯಾ ಎನ್ನುವುದು ಪ್ರಶ್ನೆಯಲ್ಲ. ಕೊಲೆ ಮಾಡಿದ ರೀತಿ ಮತ್ತು ಅದಕ್ಕೆ ಹಣಕಾಸು ನೆರವು ನೀಡಿದವರು, ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ಆಗಬೇಕಾಗಿದೆ. ಹಿಂದುಗಳನ್ನು ಭಯಪಡಿಸುವ ಜಿಹಾದಿ ಉದ್ದೇಶದ ಕೃತ್ಯ ಎನ್ನುವ ಆತಂಕಕ್ಕೆ ಉತ್ತರ ಸಿಗಬೇಕಾಗಿದೆ ಎಂದು ಹೇಳಿದರು.

Why Home minister is afraid to give Suhas Shetty murder case to NIA says MP Brijesh Chowta.