ಬ್ರೇಕಿಂಗ್ ನ್ಯೂಸ್
25-04-25 10:49 pm Giridhar Shetty, Mangalore Correspondent ಕರಾವಳಿ
ಮಂಗಳೂರು, ಎ.25 : ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ (ಕೆಎಎಂಫ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಎಪ್ರಿಲ್ 26ರಂದು ಚುನಾವಣೆ ನಡೆಯಲಿದೆ. ಹಲವಾರು ವರ್ಷಗಳಿಂದಲೂ ಬಿಜೆಪಿ ಮತ್ತು ಸಹಕಾರ ಭಾರತಿಯ ತೆಕ್ಕೆಯಲ್ಲೇ ಇದ್ದ ಕೆಎಂಎಫ್ ಆಡಳಿತವನ್ನು ಈ ಬಾರಿ ಶತಾಯಗತಾಯ ವಶಕ್ಕೆ ಪಡೆಯಬೇಕೆಂದು ಕರಾವಳಿಯ ‘ಸಹಕಾರಿ ದೊರೆ’ಯ ಮೂಲಕ ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ಇದಕ್ಕಾಗಿ ಒಳಗಿಂದೊಳಗೆ ಭಾರೀ ಡೀಲಿಂಗ್ ನಡೆದಿದೆ ಎನ್ನಲಾಗುತ್ತಿದ್ದು, ಬಿಜೆಪಿ ನಾಯಕರನ್ನೇ ಛೂಬಿಟ್ಟು ಮತ ಸೆಳೆಯಲು ತಂತ್ರಗಾರಿಕೆ ನಡೆದಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಕೆಎಂಎಫ್ ನಲ್ಲಿ ಅಧಿಕಾರ ಸ್ಥಾಪನೆಗಾಗಿ ಯಾರೂ ಊಹಿಸದ ರೀತಿಯ ತಂತ್ರಗಾರಿಕೆಯಾಗಿದ್ದು, ಬಿಜೆಪಿಯಲ್ಲಿದ್ದವರೇ ಬಹುತೇಕ ಕಡೆ ಬಂಡಾಯ ಏಳುವಂತೆ ಮಾಡಿದೆ. ಕೆಎಂಎಫ್ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಬಿಜೆಪಿಯ ಪ್ರಭಾವಿ ಮುಖಂಡರಾದ ರವಿರಾಜ್ ಹೆಗ್ಡೆ ಮತ್ತು ಸುಚರಿತ ಶೆಟ್ಟಿ ಅವರಿಗೆ ಈ ಬಾರಿ ಸಹಕಾರ ಭಾರತಿಯಿಂದ ಟಿಕೆಟ್ ಮಿಸ್ಸಾಗಿದೆ. ಇದಕ್ಕೆ ಆರೆಸ್ಸೆಸ್ ಪ್ರಮುಖರ ಸೂಚನೆ ಕಾರಣವೆಂದು ಹೇಳಲಾಗುತ್ತಿದ್ದು, ಇವರು ಇದೇ ಕೋಪದಲ್ಲಿ ಕಾಂಗ್ರೆಸ್ ಗುಂಪಿನಿಂದ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರು ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ನಾಲ್ಕು ಬಾರಿ ಗೆದ್ದು ಅಧ್ಯಕ್ಷರೂ ಆಗಿದ್ದರಿಂದ ಸಂಘದ ನಾಯಕರು ಹೊಸಬರಿಗೆ ಚಾನ್ಸ್ ಕೊಡಲು ಸೂಚಿಸಿದ್ದಾರಂತೆ. ಆದರೆ ಇವರು ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಬಂಡಾಯ ಸಾರಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಳೆದ ಬಾರಿ ನಿರ್ದೇಶಕರಾಗಿದ್ದ ನಾಲ್ಕು ಮಂದಿಗೆ ಟಿಕೆಟ್ ನೀಡಲಾಗಿದ್ದರೆ, ಉಳಿದವರು ಹೊಸಬರು. ಪುತ್ತೂರು ಉಪ ವಿಭಾಗದಿಂದ ಬಿಜೆಪಿಯಿಂದ ಕೆ.ಚಂದ್ರಶೇಖರ ರಾವ್, ಎಸ್.ಬಿ ಜಯರಾಮ ರೈ, ಎಚ್.ಪ್ರಭಾಕರ, ಭರತ್ ಎನ್ ಅವರನ್ನು ಕಣಕ್ಕಿಳಿಸಿದ್ದರೆ, ಮಂಗಳೂರು ಉಪ ವಿಭಾಗದಿಂದ ಬಿ.ಸುಧಾಕರ ರೈ, ಸುದೀಪ್ ಆರ್. ಅಮೀನ್, ಸುಭದ್ರಾ ಎನ್. ರಾವ್, ಮಹಿಳಾ (ಜಿಲ್ಲೆಗೊಂದು) ಕೋಟಾದಿಂದ ಸವಿತಾ ಎನ್. ಶೆಟ್ಟಿ ಕಣದಲ್ಲಿದ್ದಾರೆ. ಈ ಪೈಕಿ ಜಯರಾಮ ರೈ ಮೂರು ಅವಧಿಯಲ್ಲಿ ನಿರ್ದೇಶಕನಾಗಿದ್ದರೆ, ಸುಧಾಕರ ಶೆಟ್ಟಿ, ಸವಿತಾ ಶೆಟ್ಟಿ, ಸುಭದ್ರಾ ರಾವ್ ಹಿಂದಿನ ಬಾರಿಯೂ ನಿರ್ದೇಶಕ ಸ್ಥಾನದಲ್ಲಿದ್ದರು. ವಿಚಿತ್ರ ಎಂದರೆ, ಸುದೀಪ್ ಅಮೀನ್ ಎಂಬವರನ್ನು ಸಹಕಾರ ಭಾರತಿ ಮತ್ತು ಕಾಂಗ್ರೆಸಿನ ಬಳಗದಲ್ಲೂ ತೋರಿಸಲಾಗಿದ್ದು, ಎರಡು ಕಡೆಯವರೂ ಮತ ಹಾಕಲು ಕ್ಯಾಂಪೇನ್ ಮಾಡಿದ್ದಾರೆ.
ಮಿಸ್ ಹೊಡೆದ ಹೊಸಬರಿಗೆ ಟಿಕೆಟ್
ಇತ್ತ ಉಡುಪಿ ಜಿಲ್ಲೆಯಲ್ಲಿ ಹೊಸಬರಿಗೆ ಮಾತ್ರ ಟಿಕೆಟ್ ಎನ್ನುವ ಸಂಘದ ನಾಯಕರ ಸೂಚನೆ ಮಿಸ್ ಹೊಡೆದಿದೆ. ಹೆಚ್ಚಿನ ಕಡೆ ಬಿಜೆಪಿ ಮುಖಂಡರು ಸಿಟ್ಟುಗೊಂಡಿದ್ದಾರೆ. ಬಿಜೆಪಿ ಮುಖಂಡ ಸುಬ್ಬಯ್ಯ ಕೋಟ್ಯಾನ್ ಸೋದರ, ಈ ಹಿಂದೆ ಎರಡು ಅವಧಿಗೆ ಕೆಎಂಎಫ್ ನಿರ್ದೇಶಕರಾಗಿದ್ದ ಉದಯ ಕೋಟ್ಯಾನ್ ಬಂಡಾಯ ಸಾರಿದ್ದು ಕಾಂಗ್ರೆಸ್ ಬಳಗದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆಯವರೂ ಬಂಡಾಯ ಕಣದಲ್ಲಿದ್ದಾರೆ. ಈ ಹಿಂದೆ ಬಿಜೆಪಿ ಜಿಪಂ ಸದಸ್ಯ, ಈವರೆಗೂ ಕೆಎಂಎಫ್ ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಕಾರ್ಕಳದಲ್ಲಿ ಬಿಜೆಪಿಯಿಂದ ಹಿಂದೆ ನಿರ್ದೇಶಕರಾಗಿ ನಿಧನರಾಗಿದ್ದ ಅತ್ತೂರು ರಾಜೀವ ಶೆಟ್ಟಿಯವರ ಪತ್ನಿ ಮಮತಾ ಆರ್. ಶೆಟ್ಟಿ ಕಾಂಗ್ರೆಸಿನಲ್ಲಿ ಸ್ಪರ್ಧೆಯಲ್ಲಿದ್ದಾರೆ. ಈ ಪೈಕಿ ಉದಯ ಕೋಟ್ಯಾನ್ ಉಡುಪಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಬಂಡಾಯ ಸಾರಿದ್ದಕ್ಕೆ ಮೊನ್ನೆಯಷ್ಟೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಕೇಸರಿ ಬಂಡಾಯಗಾರರಿಗೆ ಕಾಂಗ್ರೆಸ್ ಆಸರೆ
ಕಾಂಗ್ರೆಸ್ ಕಡೆಯಿಂದ ಹೈನುಗಾರರ ಬಳಗ ಹೆಸರಲ್ಲಿ ಈ ಬಾರಿ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಲು ಒಕ್ಕೂಟದ ಚುನಾವಣೆಗೆ ಎಂಟ್ರಿಯಾಗಿದ್ದಾರೆ. ಸಹಕಾರ ವಲಯದಲ್ಲಿ ಪ್ರಭಾವಿಯಾಗಿರುವ ದೇವಿಪ್ರಸಾದ್ ಶೆಟ್ಟಿ ಕಣಕ್ಕಿಳಿದಿರುವುದರಿಂದ ಕೆಎಂಎಫ್ ಚುನಾವಣೆ ಕಣಕ್ಕೆ ಮತ್ತಷ್ಟು ರಂಗುಬಂದಿದೆ. ಉಡುಪಿ ಜಿಲ್ಲೆಯಿಂದ ಘಟಾನುಘಟಿಗಳು ಬೆಳಪು ನೇತೃತ್ವದ ತಂಡದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಮೂಲದ ರವಿರಾಜ್ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ಮಂಜಯ್ಯ ಶೆಟ್ಟಿ(ಹಿಂದೆ ಬಿಜೆಪಿಯಲ್ಲಿದ್ದವರು), ಉದಯ ಕೋಟ್ಯಾನ್ ಕಣದಲ್ಲಿದ್ದಾರೆ. ಉಳಿದಂತೆ, ಮೂಲ ಬಿಜೆಪಿಗರೇ ಆದ ಕೋಟತಟ್ಟು ಶಿವಮೂರ್ತಿ, ಕಾರ್ಕಳದ ಕಾಂಗ್ರೆಸ್ ಮುಖಂಡ ಸುಧಾಕರ ಶೆಟ್ಟಿ, ಬಿಜೆಪಿ ಹಿನ್ನೆಲೆಯ ಮಮತಾ ಶೆಟ್ಟಿ ಈ ಗುಂಪಿನಲ್ಲಿದ್ದಾರೆ.
ಕ್ಷೀರ ಕೂಟದವರೇ ಅಡ್ಡಗಾಲಂತೆ !
ದಕ್ಷಿಣ ಕನ್ನಡ ಹೈನುಗಾರರ ಬಳಗ ಹೆಸರಿನ ಕಾಂಗ್ರೆಸ್ ತಂಡದಲ್ಲಿ ಬಿಜೆಪಿ ಮೂಲದ ಸುಚರಿತ ಶೆಟ್ಟಿ, ನಂದರಾಮ ರೈ, ಸುದೀಪ್ ಆರ್. ಅಮೀನ್, ಶರ್ಮಿಳಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಿನ್ನೆಲೆಯ ಜಗನ್ನಾಥ ಶೆಟ್ಟಿ, ಸುದರ್ಶನ್ ಜೈನ್, ಪಿ.ರಮೇಶ ಪೂಜಾರಿ ಪುತ್ತೂರು ವಿಭಾಗದಲ್ಲಿ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾಯಕಿ ಉಷಾ ಅಂಚನ್ ನಾಮಪತ್ರ ಸಲ್ಲಿಸಿದ್ದು ಕೊನೆಕ್ಷಣದಲ್ಲಿ ಕಣದಿಂದ ನಿವೃತ್ತಿ ಘೋಷಿಸಿದ್ದಾರೆಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕಾಪು ಭಾಗದಲ್ಲಿ ಪ್ರಭಾವಿಯಾಗಿರುವ ಕಾಪು ದಿವಾಕರ ಶೆಟ್ಟಿ ಅವರ ನೇತೃತ್ವದ ಬಣ ಕ್ಷೀರ ಕೂಟ ಎನ್ನುವ ಹೆಸರಲ್ಲಿ ಉಡುಪಿ, ಕುಂದಾಪುರ ಭಾಗದಲ್ಲಿ ಅಭ್ಯರ್ಥಿಗಳನ್ನು ಇಳಿಸಿದ್ದು ಗೆಲ್ಲೋರನ್ನು ಸೋಲಿಸಲು ಕೊಡುಗೆ ನೀಡಲಿದ್ದಾರೆ. ಇವರದ್ದು ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ಸೋಲಿಸುವುದೇ ಅಜೆಂಡಾ ಎನ್ನಲಾಗುತ್ತಿದೆ. ಹೀಗಾಗಿ ಕಾಪು ಭಾಗದಲ್ಲಿ ಪ್ರಬಲ ಪೈಪೋಟಿ ಎದುರಾಗಿದೆ.
ಹೇಗೆ ನಡೆಯುತ್ತೆ ಚುನಾವಣೆ ಪ್ರಕ್ರಿಯೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಎಂಟು ನಿರ್ದೇಶಕ ಸ್ಥಾನದಂತೆ ಒಟ್ಟು 16 ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಎರಡು ಕಡೆಯೂ ಒಬ್ಬ ಮಹಿಳೆಗೆ ಮೀಸಲಾತಿ ಇದೆ. ಪಕ್ಷೇತರರು, ಸಹಕಾರ ಭಾರತಿ, ಕಾಂಗ್ರೆಸ್ ಪರ ಅಭ್ಯರ್ಥಿಗಳೆಂದು ಒಟ್ಟು 83 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದೀಗ 41 ಮಂದಿ ಮಾತ್ರ ಕಣದಲ್ಲಿದ್ದಾರೆ. ಹೆಚ್ಚಿನವರನ್ನು ಬೇರೆ ಬೇರೆ ಆಮಿಷದ ಮೂಲಕ ಕಣದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಹಾಲು ಸೊಸೈಟಿ ಅಧ್ಯಕ್ಷರು ಅಥವಾ ಆಯಾ ಆಡಳಿತ ಮಂಡಳಿ ನೇಮಿಸಿದ ಒಬ್ಬ ವ್ಯಕ್ತಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಆಯಾ ಜಿಲ್ಲೆಯಲ್ಲಿ ಕಣದಲ್ಲಿರುವ ಯಾರಾದರೂ ಎಂಟು ಮಂದಿಯನ್ನು ಆಯ್ಕೆ ಮಾಡುವ ಅವಕಾಶ ಮತದಾರನಿಗಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಚಿಹ್ನೆ ಇರುವುದಿಲ್ಲ. ಬ್ಯಾಟ್, ಬಾಲ್ ಹೀಗೆ ಅವರದ್ದೇ ಪ್ರತ್ಯೇಕ ಚಿಹ್ನ ಇರುತ್ತದೆ. ಉಡುಪಿ ಜಿಲ್ಲೆಯಲ್ಲಿ 124 ಮತದಾರರಿದ್ದರೆ, ದಕ್ಷಿಣ ಕನ್ನಡದಲ್ಲಿ 180 ಜನ ಮತದಾನದ ಹಕ್ಕು ಹೊಂದಿದ್ದಾರೆ.
ಯಾರು ಗೆದ್ದರೂ ಅಧ್ಯಕ್ಷ ಕುತೂಹಲ !
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಬಿಜೆಪಿ ಪ್ರಭಾವಿಗಳೇ ತೆರೆಮರೆಯಲ್ಲಿ ಕಾಂಗ್ರೆಸ್ ಗುಂಪಿನಿಂದ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಗ್ಗೂಡಿದ್ದಾರೆ. ಮಾಜಿ ಸಂಸದರೊಬ್ಬರು ಮತ್ತು ಕಾಂಗ್ರೆಸ್ ಹಿನ್ನೆಲೆಯ ಸಹಕಾರಿ ಧುರೀಣ ಸೇರಿ ತಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕೆಂದು ಶತಪ್ರಯತ್ನ ಮಾಡಿದ್ದಾರೆ. ಉಡುಪಿ ಭಾಗದಲ್ಲಿಯೂ ಬಂಡಾಯಗಾರರು ಪ್ರಭಾವಿಗಳಾಗಿದ್ದು ಸಹಕಾರ ಭಾರತಿಗೆ ಮುಳುವಾಗುವ ಸಾಧ್ಯತೆ ಇದೆ. ಎರಡು ಜಿಲ್ಲೆಯಲ್ಲೂ ಮತದಾರರು ಬಿಜೆಪಿಯವರೇ ಹೆಚ್ಚಿದ್ದಾರೆ. ಹೀಗಾಗಿ ಅವರನ್ನು ಬಂಡಾಯ ಪರ ತಿರುಗಿಸುವುದು ಕಠಿಣವಾದರೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ವರ್ಕೌಟ್ ಆಗಲಿದೆ. ಇವರೆಲ್ಲ ಸಹಕಾರ ಹಿನ್ನೆಲೆಯವರೇ ಆಗಿರುವುದರಿಂದ ಹಣ ಬಲದ ವರ್ಚಸ್ಸು ಯಾವ ಕಡೆಗೆ ತಿರುಗುತ್ತೆ ಎಂದು ಹೇಳಲಾಗದು. ಒಟ್ಟಿನಲ್ಲಿ ಯಾರು ಗೆದ್ದರೂ ಆ ಧುರೀಣ ಹೇಳಿದ ವ್ಯಕ್ತಿಯನ್ನೇ ಅಧ್ಯಕ್ಷ ಹುದ್ದೆಗೆ ಪ್ರತಿಷ್ಠೆ ಮಾಡಿಸುವುದಕ್ಕೂ ತಂತ್ರಗಾರಿಕೆ ನಡೆದಿದ್ಯಂತೆ.
Elections for the esteemed Dakshina Kannada District Co-operative Milk Federation (DKDCMF), also known as KAMF, are scheduled to be held on April 26. This election is poised to be pivotal as it comes at a time when the Federation's administration is undergoing significant political shifts and internal challenges.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 02:16 pm
HK News Desk
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
04-08-25 01:58 pm
Mangalore Correspondent
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
MCC Bank Inaugurates 20th Branch in Byndoor,...
04-08-25 12:40 pm
New Witness, Dharmasthala Case, Jayan: ನನ್ನ ಕ...
02-08-25 10:51 pm
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm