ಉಳ್ಳಾಲದಲ್ಲಿ ಪಿಎಫ್ ಐ, ಎಸ್ಡಿಪಿಐ ಜೊತೆ ಸಂಬಂಧ ಇಟ್ಟವರನ್ನ ಮನೆಗೆ ಕಳಿಸಿ ; ಯುವ ಸಮಾವೇಶದಲ್ಲಿ ನಳಿನ್ ಕರೆ, ಅಣ್ಣಾಮಲೈ ಬಾರದೆ ಕಾರ್ಯಕರ್ತರಿಗೆ ನಿರಾಸೆ 

20-03-23 11:06 pm       Mangalore Correspondent   ಕರಾವಳಿ

ಉಳ್ಳಾಲದಲ್ಲಿ ಸಾಮರಸ್ಯದ ಹೆಸರಲ್ಲಿ ಭಯೋತ್ಪಾದಕರು, ಪಿಎಫ್ ಐ, ಎಸ್ಡಿಪಿಐ ಜೊತೆ‌ ಒಳ‌‌ ಸಂಬಂಧ ಇಟ್ಟವರನ್ನ ಈ ಬಾರಿ ಮನೆಗೆ ಕಳುಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು. 

ಉಳ್ಳಾಲ, ಮಾ.20 : ಉಳ್ಳಾಲದಲ್ಲಿ ಸಾಮರಸ್ಯದ ಹೆಸರಲ್ಲಿ ಭಯೋತ್ಪಾದಕರು, ಪಿಎಫ್ ಐ, ಎಸ್ಡಿಪಿಐ ಜೊತೆ‌ ಒಳ‌‌ ಸಂಬಂಧ ಇಟ್ಟವರನ್ನ ಈ ಬಾರಿ ಮನೆಗೆ ಕಳುಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು. 

ಜಿಲ್ಲಾ ಬಿಜೆಪಿ ಯುವಮೋರ್ಚಾದಿಂದ ಮಂಗಳೂರು ವಿಧಾನಸಭೆ ಕ್ಷೇತ್ರದ ಕೊಲ್ಯದಲ್ಲಿ ಸೋಮವಾರ ನಡೆದ "ಯುವ ಸಮಾವೇಶ" ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಆಡಳಿತದಲ್ಲಿ ಮೂರು ಕೊಡುಗೆ ನೀಡಿದ್ದಾರೆ. ಅದು ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರ ರಾಜಕಾರಣ. ಕಾಶ್ಮೀರದಲ್ಲಿ ಭಾರತ್ ಮಾತಾ ಕಿ ಜೈ ಅಂತ ಹೇಳುವ ಹಾಗಿರಲಿಲ್ಲ. ಅದಕ್ಕಾಗಿ ಮುರಳಿ ಮನೋಹರ್ ಜೋಶಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಯಾತ್ರೆಯಲ್ಲಿ ಜೋಶಿಯವರ ಜೊತೆಯಾಗಿ ನಿಂತವರು ಈಗಿನ ಪ್ರಧಾನಿ ನರೇಂದ್ರ ಮೋದಿ. ಭಾರತ್ ಜೋಡೋ ಮಾಡಿದ್ದು ರಾಹುಲ್ ಗಾಂಧಿಯಲ್ಲ ನರೇಂದ್ರ ಮೋದಿಯವರು. ಸಿದ್ದರಾಮಯ್ಯನವರು 40% ಕಮೀಷನ್ ಸರಕಾರ ಎಂದು ಹೇಳುತ್ತಾರೆ. ಆದರೆ ನಿಮ್ಮ ಪಕ್ಷದ ಸೋನಿಯಾ ಗಾಂಧಿ ಜಾಮೀನಿನ ಮೇಲೆ ಇದ್ದಾರೆ. ನಿಮ್ಮ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿ ಬಂದದ್ದು ಯಾಕೆ ಎಂದು ಪ್ರಶ್ನಿಸಿದರು. 

ನರೇಂದ್ರ ಮೋದಿಯವರ ಆಡಳಿತದಲ್ಲಿ ಯಾವುದೇ ಹಳ್ಳಿಯಲ್ಲಿಯೂ ಬಾಂಬ್ ಸ್ಫೋಟವಾಗಲಿಲ್ಲ. ಆದರೆ ಮಂಗಳೂರಿಗೆ ಕುಕ್ಕರ್ ಹಿಡಿದುಕೊಂಡು ಬಂದ ವ್ಯಕ್ತಿಯನ್ನು ಬಂಧಿಸಿದಾಗ ಡಿಕೆಶಿಯವರಿಗೆ ಕಣ್ಣೀರು ಬಂತು. ಆದರೆ ಹಿಂದೂಗಳ ಹತ್ಯೆಯಾದಾಗ, ಗೋವುಗಳ ಹತ್ಯೆಯಾದಾಗ ಅವರಿಗೆ ಕಣ್ಣೀರು ಬರಲಿಲ್ಲ. ಡಿಕೆಶಿ ಯವರಿಗೆ 2 ಕುಕ್ಕರ್ ಮೇಲೆ ಪ್ರೀತಿ. ಮೊದಲನೆಯದು ಬೆಳಗಾವಿಯ ಕುಕ್ಕರ್ ಮತ್ತೊಂದು ಮಂಗಳೂರಿನ ಕುಕ್ಕರ್ ಎಂದು ಲೇವಡಿ ಮಾಡಿದರು. 

ಅಣ್ಣಾಮಲೈ ಗೈರು, ಕಾರ್ಯಕರ್ತರಿಗೆ ನಿರಾಸೆ 

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಯುವ ಸಮಾವೇಶಕ್ಕೆ ದಿಕ್ಸೂಚಿ ಭಾಷಣಕಾರರಾಗಿ ಬರುವುದೆಂದು ಬಹುತೇಖ ಖಚಿತವಾಗಿತ್ತು. ಅದಕ್ಕಾಗಿ ಅದ್ದೂರಿ ವೇದಿಕೆಯನ್ನೂ ರೆಡಿ ಮಾಡಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಅಣ್ಣಾಮಲೈ ಮತ್ತು ಬಿ.ವೈ ವಿಜಯೇಂದ್ರ ಸಮಾವೇಶಕ್ಕೆ ಗೈರಾದ ಕಾರಣ ಸಮಾವೇಶದ ಜೋಷ್ ಕಡಿಮೆಯಾಗಿತ್ತು. ನೆರೆದಿದ್ದ ಕಾರ್ಯಕರ್ತರು ಅಣ್ಣಾಮಲೈ ಬಾರದೆ ಇದ್ದುದರಿಂದ ಸಭೆಯನ್ನು ಅರ್ಧದಲ್ಲೇ ಬಿಟ್ಟು ಹೊರ ನಡೆದರು. ರಾಜ್ಯಾಧ್ಯಕ್ಷ ನಳಿನ್ ಭಾಷಣ ಮಾಡುವ ವೇಳೆ ಮುಂದಿನ ಸಾಲು ಬಿಟ್ಟರೆ ಹಿಂದಿನ ಕುರ್ಚಿಗಳೆಲ್ಲ ಖಾಲಿಯಾಗಿದ್ದವು. 

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಬೋಳಿಯಾರ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.

Mangalore Ullal Yuva Samavesha, Nalin Kateel slams Congress over close link with SDPI.