ಕಾನೂನು ಬಾಹಿರವಾಗಿ ಬಂಡೀಪುರದಲ್ಲಿ ನೈಟ್ ಸಫಾರಿ; ನಟ ಧನ್ವೀರ್ ವಿರುದ್ಧ ಪರಿಸರ ಪ್ರಿಯರಿಂದ ಆಕ್ರೋಶ!!

24-10-20 09:45 am       Headline Karnataka News Network   ಸಿನಿಮಾ

ನಟ ಧನ್ವೀರ್ ರಾತ್ರಿ ವೇಳೆ ಕಾನೂನು ಬಾಹಿರವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದರೆಂಬ ಆರೋಪ ಕೇಳಿ ಬಂದಿದ್ದು ನಟನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು,ಅಕ್ಟೋಬರ್.24 : ಬಂಡೀಪುರದಲ್ಲಿ ತಡ ರಾತ್ರಿ ಸಫಾರಿ ಮಾಡಿದ್ದಕ್ಕಾಗಿ ಸ್ಯಾಂಡಲ್ ವುಡ್ ನಟ  ಧನ್ವೀರ್‌ ಮೊದಲ ಬಾರಿ ವಿವಾದಲ್ಲಿ ಸಿಲುಕಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟ ಧನ್ವೀರ್ ಬಂಡೀಪುರಕ್ಕೆ ರಾತ್ರಿ ಭೇಟಿ ನೀಡಿ ಸಫಾರಿ ಮಾಡಿ, ಹುಲಿ ನೋಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು.

ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸುವುದು ಕಾನೂನು ಬಾಹಿರವಾಗಿದ್ದು ಸದ್ಯ ಈ ಪೋಸ್ಟ್‌ಗೆ ವಿರೋಧ ವ್ಯಕ್ತವಾಗಿದೆ.ಸಾಮಾನ್ಯರಿಗೆ ಸಫಾರಿಗೆ ರಾತ್ರಿ ಅವಕಾಶವಿಲ್ಲದಿದ್ದರೂ ನಟ ಧನ್ವೀರ್ ರಾತ್ರಿ ಸಫಾರಿ ನಡೆಸಿರುವುದು ಕಾನೂನು ಬಾಹಿರವೆಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಕುರಿತಾಗಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಧನ್ವೀರ್ ಅವರ ಸಫಾರಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ತಮ್ಮ ವಿವಾದದ ಕುರಿತು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದು, ಅರಣ್ಯ ಇಲಾಖೆಯ ಸಂಜೆ 4.30 ರಿಂದ 6.30ರಂದು ನಡೆಸುವ ಕೊನೆಯ ಸಫಾರಿಯಾಗಿದೆ. ಕಾಡಾಗಿರುವುದರಿಂದ ಕತ್ತಲು ದಟ್ಟವಾಗಿ ಕಾಣುತ್ತಿದೆ.ರಾತ್ರಿ ಸಫಾರಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇಡೀ ಕಾಡು ಸುತ್ತಾಡಿದ್ರೂ ನೋಡೊದಿಕ್ಕೆ ಏನೂ ಸಿಗಲಿಲ್ಲ. ಕೊನೆಯಲ್ಲಿ 6.31ಕ್ಕೆ ಒಂದು ಹುಲಿ ನಮ್ಮ ವಾಹನದ ಮುಂದೆ ನಡೆದುಕೊಂಡು ಹೋಯ್ತು. ಅದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದೆ, ಆದರೆ ಯಾಕೆ ಇಷ್ಟು ತೊಂದರೆ ಆಯ್ತು ಅಂತ ಅರ್ಥ ಆಗುತ್ತಿಲ್ಲ ಎಂದಿದ್ದಾರೆ.

 ಈ ಬಗ್ಗೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಅಧಿಕಾರಿ ಬಾಲಚಂದ್ರ ಪ್ರತಿಕ್ರೀಯೆ ನೀಡಿದ್ದು ಬಂಡೀಪುರದಲ್ಲಿ ನಟನಿಗೆ ನೈಟ್ ಸಫಾರಿಗೆ ಅವಕಾಶ ಕೊಟ್ಟಿಲ್ಲ. ಒಂದು ವೇಳೆ ಸಫಾರಿ ಮಾಡಿರೋದು ಕಂಡುಬಂದ್ರೆ ತಪ್ಪಿತಸ್ಥರ ವಿರುದ್ಧ ಎಫ್​ಐಆರ್​​ ದಾಖಲಿಸಿ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.