ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನೆ ಯತ್ನ ; ಮೂರು ಸಾವಿರಕ್ಕು ಹೆಚ್ಚು ಜನರ ಬಂಧನ, ಮೆಟ್ರೋ- ರೈಲು ಸಂಚಾರ ಸ್ಥಗಿತ, ಸೋನಮ್ ವಾಂಗ್ಚುಕ್ ಮತ್ತೆ ಉಪವಾಸ ಎಚ್ಚರಿಕೆ

10-10-26 07:33 pm       HK News Staffer   ದೇಶ - ವಿದೇಶ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೂ ಮುನ್ನವೇ ಪೊಲೀಸರು ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅಭಿಜೀತ್ ದೀಪ್ಕೆ, ಯೂಟ್ಯೂಬರ್ ಧ್ರುವ ರಾಠಿ, ಅರವಿಂದ ಕೇಜ್ರಿವಾಲ್, ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನೂ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನವದೆಹಲಿ, ಅ.10: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೂ ಮುನ್ನವೇ ಪೊಲೀಸರು ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅಭಿಜೀತ್ ದೀಪ್ಕೆ, ಯೂಟ್ಯೂಬರ್ ಧ್ರುವ ರಾಠಿ, ಅರವಿಂದ ಕೇಜ್ರಿವಾಲ್, ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನೂ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದೇ ವೇಳೆ, ದೆಹಲಿಯಲ್ಲಿ 45 ಮೆಟ್ರೋ ನಿಲ್ದಾಣಗಳನ್ನು ಇಂದು ರಾತ್ರಿ ವರೆಗೆ ಬಂದ್ ಮಾಡಲಾಗಿದೆ. ಮುಂಬೈನಲ್ಲೂ ಭಾರೀ ಪ್ರತಿಭಟನೆ ನಡೆದಿದ್ದು ಸಿಜೆಪಿ ಪ್ರತಿಭಟನೆಗೆ ಬೆಂಬಲ ಘೋಷಿಸಿದ ನಟ ಇಮ್ರಾನ್ ಖಾನ್, ತುಷಾರ್ ಗಾಂಧಿ ಸೇರಿದಂತೆ 400ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದರೂ ಕೇಂದ್ರ ಸರ್ಕಾರ ಕ್ಯಾರೆನ್ನದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತೆ ಉಪವಾಸದ ಎಚ್ಚರಿಕೆ ನೀಡಿದ್ದಾರೆ. 

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೂ ಮುನ್ನ ಯೂಟ್ಯೂಬರ್ ಧ್ರುವ್ ರಾಠಿಯನ್ನು ಗುರುಗ್ರಾಮದ ಅವರ ನಿವಾಸದಿಂದಲೇ ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ಮೋದಿಯ ಪ್ರಮುಖ ಟೀಕಾಕಾರರಾಗಿ ಗುರುತಿಸಿರುವ ರಾಠಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 1.92 ಕೋಟಿ, ಎಕ್ಸ್‌ನಲ್ಲಿ 33 ಲಕ್ಷ ಹಾಗೂ ಯೂಟ್ಯೂಬ್‌ನಲ್ಲಿ 3.3 ಕೋಟಿ ಚಂದಾದಾರರನ್ನು ಹೊಂದಿದ್ದಾರೆ. ಭದ್ರತಾ ಕಾರಣಕ್ಕೆ ದೆಹಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದರೂ ಸಿಜೆಪಿ ಧರಣಿಗೆ ಮುಂದಾಗಿತ್ತು. 

ಪ್ರತಿಭಟನಾಕಾರರು ಸ್ಥಳವನ್ನು ತಲುಪುವ ಮೊದಲೇ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ ಎಲ್ಲ ಕಡೆಗಳಿಂದಲೂ ಜಂತರ್ ಮಂತರ್ ನತ್ತ ಜನ ನುಗ್ಗಿ ಬಂದಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಪ್ರತಿಭಟನೆಗೂ ಮುನ್ನ, ರಾತ್ರೋರಾತ್ರಿ 400ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನೂರಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಹಲವು ಮೆಟ್ರೋ ನಿಲ್ದಾಣಗಳನ್ನೂ ಮುಚ್ಚಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. 

ಪ್ರಜಾಪ್ರಭುತ್ವಕ್ಕೆ ಸವಾಲೊಡ್ಡಲು ಯತ್ನ ; ನಬಿನ್ 

ಸಂವಿಧಾನದ ಹೆಸರಿನಲ್ಲಿ ಸುಳ್ಳುಗಳನ್ನು ಹರಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಸವಾಲೊಡ್ಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಸತತ ಚುನಾವಣಾ ಸೋಲುಗಳಿಂದಾಗಿ ಪ್ರತಿಪಕ್ಷಗಳು ಹತಾಶಗೊಂಡು ಇಂತಹ ಕೃತ್ಯಕ್ಕೆ ಮುಂದಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಆರೋಪಿಸಿದ್ದಾರೆ. ಇಂತಹ ಪ್ರಯತ್ನಗಳಿಗೆ ಬಿಜೆಪಿ ಮತ್ತು “ದೇಶಭಕ್ತ ನಾಗರಿಕರು” ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ನಬಿನ್ ಎಚ್ಚರಿಸಿದ್ದಾರೆ.