2008ರ ಮಾಲೆಗಾಂವ್​ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ ಎಲ್ಲ ಏಳು ಆರೋಪಿಗಳ ಖುಲಾಸೆ, ನನ್ನ ಜೀವನವೇ ಹಾಳಾಯ್ತು ಎಂದ ಸಾಧ್ವಿ 

31-07-25 10:08 pm       HK News Desk   ದೇಶ - ವಿದೇಶ

ದೇಶದಲ್ಲಿ ತೀವ್ರ ಸಂಚಲನ ಎಬ್ಬಿಸಿದ್ದ 2008ರ ಮಾಲೆಗಾಂವ್​ ಸ್ಫೋಟ ಪ್ರಕರಣದಲ್ಲಿ 17 ವರ್ಷಗಳ ಬಳಿಕ ಎನ್ಐಎ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಪ್ರಕರಣದಲ್ಲಿ ಮಾಜಿ ಸಂಸದೆ ಪ್ರಜ್ಞಾಸಿಂಗ್​ ಠಾಕೂರ್​ ಹಾಗೂ ಲೆಫ್ಟಿನೆಂಟ್​ ಕರ್ನಲ್​ ಪ್ರಸಾದ್ ಪುರೋಹಿತ್​ ಸೇರಿದಂತೆ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದಾರೆ.

ಮುಂಬೈ, ಜುಲೈ 31 : ದೇಶದಲ್ಲಿ ತೀವ್ರ ಸಂಚಲನ ಎಬ್ಬಿಸಿದ್ದ 2008ರ ಮಾಲೆಗಾಂವ್​ ಸ್ಫೋಟ ಪ್ರಕರಣದಲ್ಲಿ 17 ವರ್ಷಗಳ ಬಳಿಕ ಎನ್ಐಎ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಪ್ರಕರಣದಲ್ಲಿ ಮಾಜಿ ಸಂಸದೆ ಪ್ರಜ್ಞಾಸಿಂಗ್​ ಠಾಕೂರ್​ ಹಾಗೂ ಲೆಫ್ಟಿನೆಂಟ್​ ಕರ್ನಲ್​ ಪ್ರಸಾದ್ ಪುರೋಹಿತ್​ ಸೇರಿದಂತೆ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದಾರೆ.

2008ರ ಸೆಪ್ಟೆಂಬರ್​ 29ರಂದು ಮಹಾರಾಷ್ಟ್ರದ ಕೋಮು ಸೂಕ್ಷ್ಮ ಪ್ರದೇಶ ಮಾಲೆಗಾಂವ್​ ನಗರದಲ್ಲಿ ರಂಜಾನ್​ ಮಾಸದಲ್ಲೇ ಈ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೊದಲು ಎಟಿಎಸ್ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು. ಮುಂಬೈ ಸ್ಫೋಟದಲ್ಲಿ ಮೃತಪಟ್ಟಿದ್ದ ಹೇಮಂತ್ ಕರ್ಕರೆ ಆಗ ಎಟಿಎಸ್ ಮುಖ್ಯಸ್ಥರಾಗಿದ್ದರು. 

ತನಿಖೆಯ ವೇಳೆ ಸ್ಫೋಟಕ್ಕೆ ಬಳಸಲಾಗಿದ್ದ ಮೋಟಾರ್ ಸೈಕಲ್ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಸೇರಿದ್ದು ಎನ್ನಲಾಗಿತ್ತು. ‌ಅದರಂತೆ, ಅವರೇ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು.‌ ಅಲ್ಲದೆ, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿತ್ತು. ಮೂರು ವರ್ಷಗಳ ಬಳಿಕ 2011ರಲ್ಲಿ ಪ್ರಕರಣವನ್ನು ಎನ್​ಐಎಗೆ ಹಸ್ತಾಂತರಿಸಲಾಗಿತ್ತು. 2016ರಲ್ಲಿ ತನಿಖೆ ಪೂರ್ತಿಗೊಳಿಸಿ ಎನ್​ಐಎ ಆರೋಪ ಪಟ್ಟಿ ಸಲ್ಲಿಸಿದ್ದಲ್ಲದೆ, ಪ್ರಕರಣದಲ್ಲಿ ಸಾಕಷ್ಟು ಪುರಾವೆಗಳಿಲ್ಲ ಎಂದು ಉಲ್ಲೇಖಿಸಿತ್ತು.  

ಏಪ್ರಿಲ್ 19 ರಂದು ವಿಚಾರಣೆ ಪೂರ್ತಿಗೊಳಿಸಿದ ನಂತರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದ್ದು ಸ್ಪೋಟದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವಂತೆ ಸೂಚಿಸಿದೆ.

ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಯಾವುದೇ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಹಾಗಂತ, ನ್ಯಾಯಾಲಯವು ಕೇವಲ ಗ್ರಹಿಕೆ ಮತ್ತು ನೈತಿಕ ಪುರಾವೆಗಳ ಮೇಲೆ ಯಾರನ್ನೂ ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಬಲವಾದ ಪುರಾವೆ ಬೇಕಾಗುತ್ತದೆ ಎಂದು ಕೋರ್ಟ್​ ಹೇಳಿದ್ದು ತನಿಖೆಯಲ್ಲಿ ಹಲವಾರು ತಾಂತ್ರಿಕ ದೋಷಗಳು ಕಂಡುಬಂದಿದೆ ಎಂದಿದೆ. ಅಲ್ಲದೆ, ಆರೋಪಗಳನ್ನು ಸಾಬೀತು ಪಡಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿವೆ ಎಂದಿದೆ.

ನನ್ನ ಜೀವನವೇ ಹಾಳು ಮಾಡಿದ್ರು..

ಮಾಲೆಗಾಂವ್ ಸ್ಫೋಟ ಪ್ರಕರಣ ನನ್ನ ಜೀವನವನ್ನೇ ಹಾಳು ಮಾಡಿತು ಎಂದು ಕೋರ್ಟ್ ತೀರ್ಪಿನ ಬಳಿಕ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ. ತನಿಖೆಗಾಗಿ ನನ್ನನ್ನು ಬಂಧಿಸಿ, ಚಿತ್ರಹಿಂಸೆ ನೀಡಿದರು. ಇದರಿಂದ ನನ್ನ ಇಡೀ ಜೀವನವೇ ಹಾಳಾಯ್ತು. ನಾನು ಸಾಧ್ವಿ ಜೀವನವನ್ನು ನಡೆಸುತ್ತಿದ್ದೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು. ಪಿತೂರಿಯಿಂದ ಕೇಸರಿಯನ್ನೂ ದೂಷಿಸಿದರು. ಇಂದು ಕೇಸರಿ, ಹಿಂದುತ್ವ ಗೆದ್ದಿದೆ. ತಪ್ಪಿತಸ್ಥರನ್ನು ದೇವರು ಶಿಕ್ಷಿಸುತ್ತಾನೆ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದಿದ್ದಾರೆ.

After a 17-year-long wait, the Special National Investigation Agency (NIA) court in Mumbai announced its verdict today in the 2008 Malegaon blast case.  The Special NIA court acquitted all seven accused, including Sadhvi Pragya, a former Member of Parliament from Bhopal and Lt Col Prasad Purohit.