Mangalore MP Brijesh Chowta: ಮಂಗಳೂರಿನಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆಗಾಗಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಗೆ ಮನವಿ ; ಸಚಿವಾಲಯ ಕಾರ್ಯದರ್ಶಿ ಭೇಟಿ ಬೆನ್ನಲ್ಲೇ ಸಂಸದ ಕ್ಯಾ.ಚೌಟ ಗಂಭೀರ ಪ್ರಯತ್ನ 

24-07-25 09:06 pm       HK News Desk   ದೇಶ - ವಿದೇಶ

ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ಯುನಿವರ್ಸಿಟಿ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ನವದೆಹಲಿ, ಜುಲೈ 24 : ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ಯುನಿವರ್ಸಿಟಿ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಮಂಗಳೂರಿನಲ್ಲಿ ಸುಸಜ್ಜಿತ ಮೆರಿಟೈಮ್‌ ವಿಶ್ವವಿದ್ಯಾಲಯ ಸ್ಥಾಪಿಸುವ ವಿಚಾರವಾಗಿ ನವದೆಹಲಿಯಲ್ಲಿ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರನ್ನು ಎರಡು ದಿನಗಳ ಹಿಂದೆ ಭೇಟಿ ಮಾಡಿದ್ದ ಸಂಸದರು ಇದೀಗ, ಬಂದರು ಸಚಿವರನ್ನು ಭೇಟಿಯಾಗಿ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ವಿವಿ ಸ್ಥಾಪಿಸುವ ಅಗತ್ಯ ಹಾಗೂ ಅವಕಾಶಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. 

ಕರ್ನಾಟಕದ 2ನೇ ಪ್ರಮುಖ ನಗರವಾಗಿರುವ ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿದ್ದು, ಇಲ್ಲಿ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಕಡಲ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಉತ್ತೇಜನ ದೊರಕಲಿದೆ. ಶ್ರೀಮಂತ ಕಡಲ ಪರಂಪರೆ ಹೊಂದಿರುವ ಮಂಗಳೂರಿನ ಭೌಗೋಳಿಕ ಅನುಕೂಲಗಳು, ಐತಿಹಾಸಿಕ ಮಹತ್ವ, ಪ್ರಮುಖ ಬಂದರುಗಳು ಮತ್ತು ವಿಶ್ವದರ್ಜೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕಾರಣಕ್ಕೆ ಈ ಕಡಲನಗರಿಯಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆ ಮಾಡುವುದಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಸಚಿವರಿಗೆ ಕ್ಯಾ.ಚೌಟ ಅವರು ಮನದಟ್ಟು ಮಾಡಿದ್ದಾರೆ. 

ಪ್ರಧಾನ ಮಂತ್ರಿಯವರ 'ಮೆರಿಟೈಮ್ ಅಮೃತ್ ಕಾಲ್ ವಿಷನ್ 2047 ' ಕನಸನ್ನು ನನಸಾಗಿಸುವಲ್ಲಿ ಬಂದರು ಮತ್ತು ಕಡಲ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸುವುದರಿಂದ ಈ ವಿವಿ ಸ್ಥಾಪನೆ ಪ್ರಸ್ತಾವನೆಯು ಹೆಚ್ಚಿನ ಪ್ರಾಶಸ್ತ್ಯ ಪಡೆಯಲಿದೆ. ಅಲ್ಲದೆ ಮೆರೀನ್ ಎಂಜಿನಿಯರಿಂಗ್, ಕಡಲ ಕಾನೂನು, ಬಂದರು ಮತ್ತು ಟರ್ಮಿನಲ್ ನಿರ್ವಹಣೆ ಮತ್ತು ಕಡಲ ಮಾಹಿತಿ ತಂತ್ರಜ್ಞಾನದಂತಹ ವಿಷಯಗಳಲ್ಲಿ ಭವಿಷ್ಯಕ್ಕೆ ಸಿದ್ಧವಾದ ವೃತ್ತಿಪರರನ್ನು ಸೃಷ್ಟಿಸಲು ಈ ವಿಶ್ವವಿದ್ಯಾಲಯವು ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಮಂಗಳೂರಿನಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿರುವ ವಿವಿಗೆ  ’ವೀರ ವನಿತೆ ಅಬ್ಬಕ್ಕ ರಾಣಿ ’ ಹೆಸರು ಅತ್ಯಂತ ಸೂಕ್ತವಾಗಿದ್ದು, ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿ ಕರಾವಳಿ ಪ್ರದೇಶದ ಸ್ವಾಭಿಮಾನವನ್ನು ಎತ್ತಿ ಹಿಡಿದ ಐತಿಹಾಸಿಕ ಧೀರ ಮಹಿಳೆ. 2025ರಲ್ಲಿ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆ ನಡೆಯುತ್ತಿದ್ದು, ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವ ಆಗುತ್ತದೆ ಎಂದು ಸಂಸದರು ಮನವಿ ಮಾಡಿದ್ದಾರೆ.

ಈ ಮನವಿಗೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಪ್ರಸ್ತಾವನೆಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಚೌಟ ತಿಳಿಸಿದ್ದಾರೆ.

In a significant move aimed at enhancing maritime education in Karnataka, Dakshina Kannada MP Capt. Brijesh Chowta has submitted a formal request to Union Minister for Ports, Shipping, and Waterways, Sarbananda Sonowal, to establish a Central Maritime University in Mangaluru.