ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ; ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ, ಗ್ಲೋಬಲ್ ಪೀಸ್ ಸಂಸ್ಥೆಯ ಡಾ.ಕೆ.ಎ. ಪೌಲ್ ಘೋಷಣೆ, ಮೋದಿ ಸರ್ಕಾರಕ್ಕೆ ಅಭಿನಂದಿಸಿ ಪೌಲ್ ಹೇಳಿಕೆ 

22-07-25 12:58 pm       HK News Desk   ದೇಶ - ವಿದೇಶ

ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಯೆಮೆನ್ ಸರ್ಕಾರ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ತಿರುವನಂತಪುರಂ, ಜುಲೈ 22 : ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಯೆಮೆನ್ ಸರ್ಕಾರ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಭಾರತ ಸರ್ಕಾರದ ಪ್ರತಿನಿಧಿಗಳು, ಹಲವು ಗಣ್ಯರ ಪ್ರಯತ್ನದಿಂದಾಗಿ ಯೆಮೆನ್ ಸರ್ಕಾರ ನಿಮಿಷಾ ಪ್ರಿಯಾಳ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿದೆ ಎಂದು ಗ್ಲೋಬಲ್ ಪೀಸ್ ಸಂಸ್ಥೆಯ ಸ್ಥಾಪಕ ಮತ್ತು ಕ್ರಿಶ್ಚಿಯನ್ ಧರ್ಮೋಪದೇಶಕ ಡಾ.ಕೆ.ಎ. ಪೌಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ಯೆಮೆನ್‌ನಲ್ಲಿ ತನ್ನ ಪಾಲುದಾರನ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆ ರದ್ದುಗೊಂಡಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ ಎಂದು ಆಂಧ್ರಪ್ರದೇಶ ಮೂಲದ ಕ್ರಿಶ್ಚಿಯನ್ ಧರ್ಮೋಪದೇಶಕ ಕೆಎ ಪೌಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.  

ಕಳೆದ ವಾರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಿಮಿಷಾ ಪ್ರಿಯಾ ಪರವಾಗಿ ಯೆಮೆನ್ ಸರ್ಕಾರ ಮತ್ತು ಅಲ್ಲಿನ ನ್ಯಾಯಾಲಯದಲ್ಲಿ ವಾದಿಸಲು ವಕೀಲರನ್ನು ಕಳಿಸಿಕೊಟ್ಟಿದ್ದಾಗಿ ಹೇಳಿದ್ದರು. ಅಲ್ಲದೆ, ಷರಿಯತ್ ಕಾನೂನು ಪ್ರಕಾರ ಕ್ಷಮಾದಾನ ಪಡೆಯುವ ವಿಚಾರದಲ್ಲಿ ನಿಮಿಷಾ ಕುಟುಂಬಕ್ಕೆ ಕಾನೂನು ಪ್ರತಿನಿಧಿಗಳು ಸಹಕಾರ ನೀಡಲಿದ್ದಾರೆ ಎಂದಿದ್ದರು. ಇದಲ್ಲದೆ, ಕೇರಳದ ಎಪಿ ಅಬುಬಕ್ಕರ್ ಮುಸ್ಲಿಯಾರ್ ಅವರು ಯೆಮೆನ್ ದೇಶದ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಕ್ಷಮಾದಾನಕ್ಕೆ ಕೋರಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಒತ್ತಡದಿಂದಾಗಿ ಯೆಮೆನ್ ಸರ್ಕಾರ ನಿಮಿಷಾರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದೆ ಎನ್ನಲಾಗುತ್ತಿದೆ.‌ ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಭಾರತ ಸರ್ಕಾರದಿಂದಾಗಲೀ, ಯೆಮೆನ್ ಕಡೆಯಿಂದಾಗಲೀ ಬಂದಿಲ್ಲ. 

ಇತ್ತೀಚೆಗೆ ಜುಲೈ 16ಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ಸುನ್ನಿ ಧರ್ಮಗುರು ಎಪಿ ಮುಸ್ಲಿಯಾರ್ ಕೋರಿಕೆಯಂತೆ ಮುಂದೂಡಿಕೆ ಮಾಡಲಾಗಿತ್ತು. ಅದಕ್ಕು ಮುನ್ನ ಭಾರತ ಸರ್ಕಾರ ತನ್ನ ಕೈಲಾದ ಪ್ರಯತ್ನ ಮಾಡಿದ್ದೇವೆ ಎಂದು ಸುಪ್ರೀಂ ಕೋರ್ಟಿನಲ್ಲಿ ಹೇಳಿಕೆ ನೀಡಿತ್ತು‌. ಕೇರಳ ಮೂಲದ ಉದ್ಯಮಿಗಳು ಸೇರಿದಂತೆ ದಾನಿಗಳ ಮೂಲಕ ಸಂಗ್ರಹವಾಗಿದ್ದ 12 ಕೋಟಿಯಷ್ಟು ಬ್ಲಡ್ ಮನಿ ಕೊಡಲು ಒಪ್ಪಿದರೂ, ಮೃತನ ಕುಟುಂಬ ಒಪ್ಪದೆ ಇದ್ದುದರಿಂದ ಪ್ರಸ್ತಾಪ ಮುರಿದು ಬಿದ್ದಿತ್ತು.

Evangelist and Founder of Global Peace Initiative Dr KA Paul on Tuesday night (local time) claimed in a video message from Sanaa in Yemen that the death sentence to Indian Nurse Nimisha Priya has been cancelled after days and nights of extensive efforts by Yemeni and Indian leaders.