ದಲಿತ ಬಾಲಕ ಅಚಾನಕ್ ದೇಗುಲ ಪ್ರವೇಶ ಮಾಡಿದ್ದಕ್ಕೆ 25 ಸಾವಿರ ದಂಡ ! ಕೊಪ್ಪಳ ಜಿಲ್ಲೆಯ ಅಮಾನವೀಯ ನಡೆಗೆ ಕಾಂಗ್ರೆಸ್ ಆಕ್ರೋಶ

21-09-21 05:11 pm       Headline Karnataka News Network   ಕರ್ನಾಟಕ

ದಲಿತ ಸಮುದಾಯದ ಬಾಲಕ ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ಕೊಪ್ಪಳ, ಸೆ. 21: ದಲಿತ ಸಮುದಾಯದ ಎರಡು ವರ್ಷದ ಮಗು ಅಚಾನಕ್ಕಾಗಿ ದೇಗುಲ ಪ್ರವೇಶ ಮಾಡಿದ್ದಕ್ಕೆ ಪ್ರತಿಯಾಗಿ ಹೆತ್ತವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಕೇಳಿಬಂದಿದೆ. 

ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ದಲಿತ ಸಮುದಾಯದ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದಲ್ಲದೆ, ದೇವಸ್ಥಾನವನ್ನು ಶುದ್ದೀಕರಿಸಿದ್ದಾರೆ. ಸೆ.4 ರಂದು ಘಟನೆ ನಡೆದಿದ್ದು ಚನ್ನದಾಸರ ಎಂಬ ಹಿಂದುಳಿದ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ‌. ಅಂದು ಮಗುವಿನ ಜನ್ಮದಿನದ ಹಿನ್ನೆಲೆ ಮಗುವನ್ನು ಹೆತ್ತವರು ದೇವಸ್ಥಾನಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.  ಆನಂತರ ದೇವಸ್ಥಾನದ ಅರ್ಚಕರು ಮತ್ತು ಗ್ರಾಮದ ಪ್ರಮುಖರು ಸೇರಿ ಮಗುವಿನ ಹೆತ್ತವರಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ.  

ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ತೆರಳಿದ್ದರು. ಆದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ದಂಡ ವಿಧಿಸಿದವರಿಗೆ ಶಿಕ್ಷೆ ವಿಧಿಸುವ ಬದಲು ಕೇವಲ ತರಾಟೆಗೆ ತೆಗೆದುಕೊಂಡು ಕೈತೊಳೆದುಕೊಂಡು ಬಿಟ್ಟಿದ್ದ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದವು.‌

ಈ ಬಗ್ಗೆ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರೂ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಸ್ಪೃಶೃತಾ ನಿವಾರಣೆಯ ಜಾಗೃತಿ ಸಭೆ ನಡೆಸಿ, ಎಚ್ಚರಿಕೆ ನೀಡಿ ತೆರಳಿದ್ದರು.

ಈ ಘಟನೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕರು, ಟ್ವಿಟರ್ ನಲ್ಲಿ ಹರಿಹಾಯ್ದಿದ್ದಾರೆ. ‌#ದಲಿತ ವಿರೋಧಿ ಬಿಜೆಪಿ ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು 'ಮನುಸ್ಮೃತಿಯನ್ನು ನಂಬಿರುವ ಬಿಜೆಪಿ ತನ್ನ ಗುಪ್ತ ಅಜೆಂಡಾವಾದ ದಲಿತ ವಿರೋಧಿ ವಾತಾವರಣವನ್ನು ವ್ಯವಸ್ಥಿತವಾಗಿ ಸ್ಥಾಪಿಸುತ್ತಿರುವ ಪರಿಣಾಮದಿಂದಲೇ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ' ಎಂದು ಆರೋಪಿಸಿದೆ.

The parents of a Dalit boy were fined Rs 23,000 after their 2-year-old son entered a Hanuman temple to seek blessings of the god at Miyapura village near Hanumasagar in Koppal district of Karnataka.