ರಾಜ್ಯದಲ್ಲಿ ಮಳೆಯ ಅಬ್ಬರ...ಜನರು ತತ್ತರ ; 8 ಸೇತುವೆ ಮುಳುಗಡೆ, 16 ಗ್ರಾಮಗಳ ಸಂಪರ್ಕ ಕಟ್, ಪ್ರವಾಹ ಭೀತಿ !

23-07-21 11:53 am       Headline Karnataka News Network   ಕರ್ನಾಟಕ

ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. 

ಬೆಂಗಳೂರು, ಜು.23: ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. 

ಮಲೆನಾಡು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿನ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಸಹ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಟಿ-ಜಿಟಿ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆ-ಮೊನ್ನೆ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. 

ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ನಿರಂತರ ಮಳೆಯಾಗಿದೆ. ಇಂದು ಸಹ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನಾಟಕದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.  ಮಹಾ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ನದಿ ನೀರು  ನುಗ್ಗಿದೆ. ಹಿರಣ್ಯಕೇಶಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.  ಸಂಕೇಶ್ವರ ಪಟ್ಟಣದ ತಗ್ಗು ಪ್ರದೇಶಗಳಿಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದೆ.  ಪಟ್ಟಣದ ಲಕ್ಷ್ಮೀ ದೇವಸ್ಥಾನ ಹಾಗೂ ಶಂಕರಲಿಂಗ ದೇವಸ್ಥಾನಗಳಿಗೂ ನದಿ ನೀರು ನುಗ್ಗಿದೆ.

ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ನಿನ್ನೆ ಯಲ್ಲಾಪುರದ ಅರೆಬೈಲ್ ಬಳಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಅಂಕೋಲಾ-ಹುಬ್ಬಳ್ಳಿ  ರಾ. ಹೆದ್ದಾರಿ 63 ಬಂದ್ ಆಗಿತ್ತು. ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಕುಸಿತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.

ಶಿರಸಿ, ಸಿದ್ದಾಪುರದಲ್ಲೂ ಭಾರೀ ಮಳೆಯಾಗುತ್ತಿದ್ದು, ಸಣ್ಣ-ಪುಟ್ಟ ನದಿಗಳು ಉಕ್ಕಿ ಹರಿಯುತ್ತಿವೆ.  ತಗ್ಗು ಪ್ರದೇಶ ಜಲಾವೃತವಾಗಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನು, ಕದ್ರಾ ಜಲಾಶಯ ತುಂಬಿದ್ದು,  ನಿರಂತರವಾಗಿ ಕಾಳಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗೊ ಕಾಳಿ ನದಿ ಪಾತ್ರದ ಗ್ರಾಮಗಳು ಜಲಾವೃತವಾಗುವ ಭಯ ಕಾಡುತ್ತಿದೆ.  ಈಗಾಗಲೆ ಸಣ್ಣ ಪುಟ್ಟ ಬಡಾವಣೆಗಳಿಗೆ ನೀರು ನುಗ್ಗಿದೆ.

ಮುಂಬೈ-ಬೆಂಗಳೂರು ರಾ.ಹೆ. ಬಂದ್; 

ಇನ್ನು, ಚಿಕ್ಕೋಡಿಯಲ್ಲಿ ಮಹಾ ಮಳೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮುಂಬೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ವೇದ ಗಂಗಾ ನದಿಗೆ ಅಪಾರ ಪ್ರಮಾಣದ ನೀರು ಹಿನ್ನಲೆ ಸಂಚಾರ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ  ವೇದಗಂಗಾ ನದಿ ನೀರು ಹರಿದು ಬರುತ್ತಿದೆ.

ರಾ. ಹೆದ್ದಾರಿ 63 ಜಲಾವೃತ; 

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದೆ.  ರಾಷ್ಟ್ರೀಯ ಹೆದ್ದಾರಿ 63ಕ್ಕೆ ನುಗ್ಗಿದ ಗಂಗಾವಳಿ ನದಿ ನೀರು ನುಗ್ಗಿದ್ದು,  ಸುಂಕಸಾಳ ಗ್ರಾಮದ ಬಳಿ ಹೆದ್ದಾರಿ ಜಲಾವೃತಗೊಂಡಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ನಾಪತ್ತೆ..!

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆಗೆ ಹುಬ್ಬಳ್ಳಿಯಿಂದ 6 ಮಂದಿ ಯುವಕರು ಮೂರು ಡಿಯೋ ಬೈಕ್ಗಳಲ್ಲಿ ಆಗಮಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಫಾಲ್ಸ್‌ ಬಳಿ ಬಿಡೋದಿಲ್ಲ ಅಂದ್ರೂ ಯುವಕರು ಗಲಾಟೆ ಮಾಡಿ ಫಾಲ್ಸ್ ಬಳಿ ಹೋಗಿದ್ರು. ಆದ್ರೀಗ, ಬೈಕ್ಗಳು ಮಾತ್ರ ಫಾಲ್ಸ್ ದಾರಿಯಲ್ಲಿ ಸಿಕ್ಕಿದ್ರೆ, ಪ್ರವಾಸಿಗರು ನಾಪತ್ತೆ ಆಗಿದ್ದಾರೆ. ಯುವಕರು ಫಾಲ್ಸ್ ಬಳಿ ಸಿಲುಕಿರುವ ಸಾಧ್ಯತೆ ಇದೆ.

ಮತ್ತೊಂದ್ಕಡೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗುತ್ತಲೇ ಇದೆ. ಇದ್ರಿಂದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಕದ್ರಾ ಮತ್ತು ಕೊಡಸಳ್ಳಿ ಜಲಾಶಗಳು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹೀಗಾಗಿ ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಮತ್ತೊಂದ್ಕಡೆ, ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ. ಪರಿಣಾಮ ಕಾಳಿ ನದಿ ತೀರದ ಮಲ್ಲಾಪುರ ಚರ್ಚ್ ವಾಡ, ಕದ್ರಾ, ಮಹಮ್ಮಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

karnataka rain updates heavy rainfall across the state and rivers flow is high flood fear.