ಚಾಮರಾಜನಗರ ; 24 ಗಂಟೆಯಲ್ಲಿ ಮತ್ತೆ 11 ಸೋಂಕಿತರು ಸಾವು ! ಗ್ರಾಮೀಣದಲ್ಲಿ ಹೆಚ್ಚುತ್ತಿರುವ ಸೋಂಕಿತರು ; ಜಿಲ್ಲಾಡಳಿತ ವೈಫಲ್ಯ !

13-05-21 03:29 pm       Headline Karnataka News Network   ಕರ್ನಾಟಕ

24 ಜನರ ಸಾಮೂಹಿಕ ಸಾವಿಗೆ ಕಾರಣವಾಗಿದ್ದ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ ಹನ್ನೊಂದು ಮಂದಿ ಸಾವು ಕಂಡಿದ್ದಾರೆ.‌

ಚಾಮರಾಜನಗರ, ಮೇ 13: ಆಕ್ಸಿಜನ್ ಕೊರತೆಯಿಂದ 24 ಜನರ ಸಾಮೂಹಿಕ ಸಾವಿಗೆ ಕಾರಣವಾಗಿದ್ದ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ ಹನ್ನೊಂದು ಮಂದಿ ಸಾವು ಕಂಡಿದ್ದಾರೆ.‌

ಈ ಬಗ್ಗೆ ಜಿಲ್ಲಾಸ್ಪತ್ರೆಯಿಂದ ಬುಲೆಟಿನ್ ನೀಡಲಾಗಿದ್ದು ಬುಧವಾರ ಬೆಳಗ್ಗೆ 9 ರಿಂದ ಗುರುವಾರ ಬೆಳಗ್ಗೆ 9  ಗಂಟೆ ವರೆಗೆ 11 ಮಂದಿ ಕೊರೊನಾ ಸೋಂಕಿತರು ಸಾವು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

24 ಗಂಟೆ ಅವಧಿಯಲ್ಲಿ ಚಾಮರಾಜನಗರ ತಾಲ್ಲೂಕಿನ  9 ಮಂದಿ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಇಬ್ಬರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರ ತನಕ 4 ಮಂದಿ ಸಾವನ್ನಪ್ಪಿದ್ದು, ಸಂಜೆಯಿಂದ ಗುರುವಾರ ಬೆಳಗ್ಗೆ 9 ಗಂಟೆಯ ನಡುವೆ ಮತ್ತೆ 7 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟ 11 ಮಂದಿಯಲ್ಲಿ 7 ಮಂದಿ ಕೋವಿಡ್ ಸೋಂಕಿತರಾಗಿದ್ದರೆ, 4 ಮಂದಿ ಕೋವಿಡ್ ಸೋಂಕಿನ ಲಕ್ಷಣಗಳನ್ನು ಹೊಂದಿದ್ದವರು ಸಾವನ್ನಪ್ಪಿದ್ದಾರೆ. 

ತಮಿಳುನಾಡಿಗೆ ಗಡಿಯನ್ನು ಹೊಂದಿಕೊಂಡಿರುವ ಬಹುತೇಕ ಅರಣ್ಯ ಭಾಗವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ದಿನವೂ ಸರಾಸರಿ ಹತ್ತು ಮಂದಿ ಸಾಯುತ್ತಿದ್ದಾರೆ.‌ ಸೋ‌ಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಸಾವಿನ ಪ್ರಮಾಣವೂ ಈ ಭಾಗದಲ್ಲಿ ಹೆಚ್ಚಿರುವುದು ಗ್ರಾಮೀಣ ಭಾಗದ ಜಿಲ್ಲೆಯ ಶೋಚನೀಯ ಸ್ಥಿತಿಯನ್ನು ತೋರಿಸುತ್ತಿದೆ. ತಮಿಳು ಮತ್ತು ಮಲಯಾಳಿ ಭಾಷಿಗರು ಹೆಚ್ಚಿರುವ ಚಾಮರಾಜನಗರ ತಾಲೂಕಿನಲ್ಲೇ ಸೋಂಕು ಹೆಚ್ಚಿರುವುದು ಕಂಡುಬಂದಿದೆ. ವೈದ್ಯಕೀಯ ಚಿಕಿತ್ಸೆಯ ವೈಫಲ್ಯವೋ, ಅಧಿಕಾರಿಗಳ ಅಸಡ್ಡೆಯೋ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಮರಣ ಮೃದಂಗ ಬಾರಿಸುತ್ತಿರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.


Chamrajnagara reports 11 death of Covid-19 Patients in the last 24 hours resulting in major failure of administration. Recently 24 patients had died of oxygen shortage at the government hospital.