'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖಾಡಕ್ಕೆ ; ಸಿಎಂ ಸಿದ್ದರಾಮಯ್ಯ ಮತ್ತು ದಲಿತ ಸಚಿವರಿಗೆ ತುಮಕೂರಿನಲ್ಲಿ ಔತಣಕೂಟ, ದಲಿತ ಸಿಎಂ ದಾಳಕ್ಕೆ ಸಿದ್ಧತೆ 

31-10-25 06:02 pm       Bangalore Correspondent   ಕರ್ನಾಟಕ

ಆರು ತಿಂಗಳ ಹಿಂದೆಯೇ 'ನವೆಂಬರ್‌ ಕ್ರಾಂತಿ' ಮುನ್ಸೂಚನೆ ನೀಡಿದ್ದ ಮಾಜಿ ಸಚಿವ ಕೆ.ರಾಜಣ್ಣ ತುಮಕೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಸಮುದಾಯದ ಪ್ರಮುಖ ಸಚಿವರಿಗೆ ಡಿನ್ನರ್ ಕರೆದಿದ್ದಾರೆ. ‌

ಬೆಂಗಳೂರು, ಅ.31 : ಆರು ತಿಂಗಳ ಹಿಂದೆಯೇ 'ನವೆಂಬರ್‌ ಕ್ರಾಂತಿ' ಮುನ್ಸೂಚನೆ ನೀಡಿದ್ದ ಮಾಜಿ ಸಚಿವ ಕೆ.ರಾಜಣ್ಣ ತುಮಕೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಸಮುದಾಯದ ಪ್ರಮುಖ ಸಚಿವರಿಗೆ ಡಿನ್ನರ್ ಕರೆದಿದ್ದಾರೆ. ‌ಸಿಎಂ ಬದಲಾವಣೆಯೋ, ಸಚಿವ ಸಂಪುಟ ಪುನಾರಚನೆಯೋ? ಎಂಬ ಬಗ್ಗೆ ಗೊಂದಲ ಎದ್ದಿರುವಾಗಲೇ ಔತಣಕೂಟ ಏರ್ಪಡಿಸಿರುವುದು ಮತ್ತು ದಲಿತ ನಾಯಕರು ಅಹಿಂದ ದಾಳ ಎಸೆದಿರುವುದು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಠಕ್ಕರ್ ಎಂದೇ ಹೇಳಲಾಗುತ್ತಿದೆ. ‌ 

ಪರಮೇಶ್ವರ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ಅವರು ಎರಡು ದಿನಗಳ ಹಿಂದೆ ರಹಸ್ಯ ಸಭೆ ನಡೆಸಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಸಭೆಯ ನಂತರ ಮಾತನಾಡಿದ್ದ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಐದು ವರ್ಷಕ್ಕೆ ಸಿಎಂ ಮಾಡಲಾಗಿತ್ತು. ಅರ್ಧಕ್ಕೆ ಬದಲಾಯಿಸುವ ಯಾವುದೇ ವಿಚಾರ ಗೊತ್ತಿಲ್ಲ. ಅಂತಹದ್ದೇನಾದರೂ ಇದ್ದರೆ ಹೈಕಮಾಂಡ್ ನಾಯಕರೇ ಹೇಳಬೇಕು ಎನ್ನುವ ಮೂಲಕ ಸಿದ್ದು ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಇದರ ನಡುವೆ, ಸಿದ್ದರಾಮಯ್ಯ ಪಟ್ಟ ಉಳಿಸಿಕೊಳ್ಳಲು ಅಹಿಂದ ಅಸ್ತ್ರ ಮುನ್ನೆಲೆಗೆ ಬಂದಿರುವಾಗಲೇ ಸಿಎಂ ಬದಲಾವಣೆಯಾದರೆ ದಲಿತರಿಗೆ ಸ್ಥಾನ ಸಿಗಬೇಕು ಎಂದು ಒತ್ತಡ ಹೇರಲು ತಯಾರಿ ನಡೆದಿದೆ.‌

ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ನಿವಾಸಕ್ಕೆ ಊಟಕ್ಕೆ ಹೋಗುತ್ತಿರುವುದು ಮಾಮೂಲಿ ಎನಿಸಿದರೂ ರಾಜಕೀಯ ಲೆಕ್ಕಾಚಾರ ಬೇರೆಯದ್ದೇ ಇದೆ. ಹಾಲಿ ಬೆಳವಣಿಗೆಯ ಬಗ್ಗೆ ಸಿದ್ದರಾಮಯ್ಯ ಬಣದ ಸಚಿವರು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಇದೇ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ರಾಜಣ್ಣ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋಗುವುದರಲ್ಲಿ ವಿಶೇಷ ಏನಿದೆ? ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪದೇ ಪದೇ ಕೇಳಿದರೆ ನಾವು ಏನು ಉತ್ತರ ಕೊಡುವುದು? ಯಾವುದನ್ನೂ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ಸಂಪುಟ ಪುನನಾರಚನೆ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.

'ಔತಣಕೂಟ ಯಾವುದೂ ಇಲ್ಲ ಕಣ್ರೀ.. ಅವರ ಮನೆ ಹೈವೇ ಪಕ್ಕದಲ್ಲಿಯೇ ಇದೆ. ಪ್ರತಿಸಲ ಊಟಕ್ಕೆ ಕರೆಯುತ್ತಾರೆ. ಅದೇ ರೀತಿ ಈ ಸಲವೂ ಕರೆದಿದ್ದಾರೆ. ಅದಕ್ಕೆ ನಾವು ಬರುತ್ತೇವೆ ಎಂದಿದ್ದೇವೆ. ಸಹಜವಾಗಿ ಊಟಕ್ಕೆ ಕರೆದಿದ್ದಾರೆ, ಅದಕ್ಕೆ ಎಲ್ಲರೂ ಹೋಗುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಆಮೂಲಕ ರಾಜಣ್ಣ ಮನೆಯಲ್ಲಿ ಔತಣ ಕೂಟ ನೆಪದಲ್ಲಿ ದಲಿತ ಸಚಿವರು ಒಗ್ಗೂಡುವ ಸುಳಿವು ನೀಡಿದ್ದಾರೆ. 

ಸಚಿವ ಸ್ಥಾನ ಉಳಿಸಿಕೊಳ್ಳಲು ದೆಹಲಿ ಸರ್ಕಸ್! 

ನವೆಂಬರ್‌ನಲ್ಲಿ ಬೇರಾವ ಕ್ರಾಂತಿ ಆಗದಿದ್ದರೂ ಸಂಪುಟ ಪುನಾರಚನೆ ಆಗಲಿದೆ ಎಂಬುದು ಖಾತ್ರಿಯಾದ ಹಿನ್ನೆಲೆಯಲ್ಲಿ ಕೆಲವು ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಹೀಗಾಗಿ, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಓಲೈಕೆಗೆ ಮುಂದಾಗಿದ್ದಾರೆ. ದೆಹಲಿಗೆ ಹೋಗಿ ಬಂದ ಸಚಿವ ದಿನೇಶ್ ಗುಂಡೂರಾವ್, ಬೇರೆ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋಗಿದ್ದೆವು. ಹಲವು ಬಾರಿ ದೆಹಲಿ ಭೇಟಿ ನೀಡಿದ್ದೇವೆ, ಆದರೆ ಈ ಸಲ ಸುದ್ದಿ ಆಗಿದೆ ಎಂದಿದ್ದಾರೆ. ಅಲ್ಲದೆ, ಶೇ. 95 ಶಾಸಕರು ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ಈಗ ಸಿಎಂ ಇದ್ದಾರೆ, ಅವರು ಇರುವಾಗ ಮತ್ತೊಂದು ಸಿಎಂ, ಅಧಿಕಾರ ಹಂಚಿಕೆ ವಿಚಾರ ಅನಾವಶ್ಯಕ ಎಂದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಅಂತಹ ಪ್ರಶ್ನೆಯೂ ಬರುವುದಿಲ್ಲ. ಯಾವ ಕ್ರಾಂತಿನೂ ಆಗಲ್ಲ. ಎಲ್ಲಾ ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

Former minister K. Rajanna, who had predicted a ‘November Revolution’ six months ago, has invited Chief Minister Siddaramaiah and key Dalit ministers to a dinner gathering in Tumakuru.