ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದ ; ಅವನ ಹೇಳಿಕೆ ತಿರುಚಿದರೆ ಏನು ಮಾಡೋದು, ಸಿದ್ದು ಕ್ಲಾಸ್ 

24-10-25 09:35 pm       Bangalore Correspondent   ಕರ್ನಾಟಕ

ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ನಾನು ಮಗ ಯತೀಂದ್ರನನ್ನು ಕೇಳ್ದೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು, ಅ 24 : ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ನಾನು ಮಗ ಯತೀಂದ್ರನನ್ನು ಕೇಳ್ದೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾನು ಆ ಬಗ್ಗೆ ಯತೀಂದ್ರನನ್ನು ಕೇಳ್ದೆ. ನೀನು ಏನು ಮಾತನಾಡಿದ್ದೀಯ ಎಂದೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ, ಇಂಥವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಅಂತ ಹೇಳಿಲ್ಲ ಅಂದ. ಅವನ ಹೇಳಿಕೆಯನ್ನು ತಿರುಚಿದರೆ ಏನು ಮಾಡುವುದು? ಎಂದರು.

ಈ ಸಂದರ್ಭದಲ್ಲಿ ಆ ರೀತಿಯ ಹೇಳಿಕೆಯ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ಯಾರೋ ನಿಮ್ಮಂಥವರು ಕೇಳಿರಬಹುದು. ಯಾರೋ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ನಾನು ಸಹಕಾರ ಸಪ್ತಾಹದ್ದು ಹೇಳ್ದೆ. ಈಗ ನೀವು ಕೇಳಲಿಲ್ವೇ? ಹಾಗೆ ಕೇಳಿರುತ್ತಾರೆ. ಅದಕ್ಕೆ ಅಲ್ಲಿ ಹೇಳಿದ್ದಾನೆ ಎಂದರು.

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದೆ. ಜವಾಹರಲಾಲ್ ನೆಹರು ಅವರ ಜಯಂತಿ ದಿನವೇ 72ನೇ ಸಹಕಾರಿ ಸಪ್ತಾಹದ ಉದ್ಘಾಟನೆ ನಡೆಯಲಿದೆ. ರಾಜ್ಯ ಮಟ್ಟದ 72ನೇ ಸಪ್ತಾಹದ ಉದ್ಘಾಟನೆಯನ್ನು ನೆಹರು ಜಯಂತಿಯಂದೇ (ನ.14) ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಹ ನಡೆಯಲಿದೆ. ಇದರ ಉದ್ಘಾಟನೆಯನ್ನು ನಾನು ನೆರವೇರಿಸಲಿದ್ದೇನೆ. ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದೆ. ಸಮಾರೋಪ ಸಮಾರಂಭ ನವೆಂಬರ್ 20ರಂದು ಚಾಮರಾಜನಗರದಲ್ಲಿ ನಡೆಯಲಿದೆ. ನಾನು ಸಪ್ತಾಹದ ಉದ್ಘಾಟನೆಯನ್ನೂ ನೆರವೇರಿಸಿ, ಸಮಾರೋಪದಲ್ಲೂ ಭಾಗವಹಿಸುತ್ತೇನೆ ಎಂದು ಮಾಹಿತಿ ನೀಡಿದರು.

"ಸಹಕಾರ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭ ಸಪ್ತಾಹದ ಉದ್ಘಾಟನೆಯ ದಿನವೇ ನಡೆಯಲಿದೆ. ರಾಜ್ಯದ ಎಲ್ಲ ಸಹಕಾರಿ ಧುರೀಣರು ನನಗೇ ಜವಾಬ್ದಾರಿ ಕೊಟ್ಟಿದ್ದು ನಾನೇ "ಸಹಕಾರ ರತ್ನ" ಪ್ರಶಸ್ತಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾ ಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಗೆ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೇ. ಹೀಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟೆ. ಸಹಕಾರ ರಾಜ್ಯದ ವ್ಯಾಪ್ತಿಗೆ ಬರುವ ವಿಚಾರ. ಕೇಂದ್ರದ ವ್ಯಾಪ್ತಿಗೆ ಬರುವ ವಿಚಾರ ಅಲ್ಲ ಎಂದರು.

ಕೆ.ಎನ್.ರಾಜಣ್ಣ ಸಂಪುಟ ಮರುಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಣ್ಣ ಇಲ್ಲದಿರೋದ್ರಿಂದ ನಾನು ಸಭೆ ಮಾಡುತ್ತಿದ್ದೇನೆ. ರಾಜಣ್ಣ ಮತ್ತೆ ವಾಪಸ್ ಬರುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

Karnataka Chief Minister Siddaramaiah has dismissed speculation over his son Yathindra Siddaramaiah’s recent remarks on possible leadership change in the state, clarifying that his son’s comments were purely theoretical and had been misinterpreted.