ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರ ಆದ್ರೂ ಎಸ್ಸಿ ಪ್ರಮಾಣಪತ್ರ ! ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶ 

07-10-25 11:20 pm       Bangalore Correspondent   ಕರ್ನಾಟಕ

ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಯಾರೇ ಆದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ ಇದು ಅನ್ವಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರು, ಅ.7 : ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ ಎಸ್ಸಿ ಜಾತಿ ಪ್ರಮಾಣಪತ್ರ ನೀಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಯಾರೇ ಆದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ ಇದು ಅನ್ವಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಇತ್ಯಾದಿಗಳಲ್ಲಿ ಮೀಸಲಾತಿ) ಕಾಯ್ದೆ 1990, 2024ರ ತಿದ್ದುಪಡಿ ಕಾಯ್ದೆ ಮತ್ತು 1992ರ ನಿಯಮದಂತೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲು ಆಕ್ಟೋಬರ್ 6 ರಂದು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

ಬೌದ್ಧ ಧರ್ಮ ನಮೂದಿಸಲು ಅವಕಾಶ 

ಪರಿಶಿಷ್ಟ ಜಾತಿ ಪ್ರಮಾಣಪತ್ರಗಳ ಅರ್ಜಿಗಳ ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಲು ಹೊಸ ಆದೇಶವು ಅವಕಾಶ ನೀಡುತ್ತದೆ. ಅಲ್ಲದೆ, ಅರ್ಜಿದಾರರು, ಪೋಷಕರು ತಾವು ಬಯಸಿದಲ್ಲಿ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಇತರ ಶಿಕ್ಷಣ ಸಂಸ್ಥೆಗಳ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮವನ್ನು ನಮೂದಿಸಲು ಅವಕಾಶ ನೀಡುತ್ತದೆ. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು, ಇತರ ಸಂಸ್ಥೆಗಳು ಆದೇಶದಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ 1990ರಲ್ಲಿ ಬರೆದಿದ್ದ ಪತ್ರದ ಆಧಾರದ ಮೇಲೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಎಸ್ಸಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರ 2013 ರಲ್ಲಿ ಸುತ್ತೋಲೆ ಹೊರಡಿಸಿತ್ತು. 2016 ರಲ್ಲಿ ಬೌದ್ಧರಾಗುವ ಪರಿಶಿಷ್ಟ ಜಾತಿಯ ಜನರು ಎಸ್‌ಸಿ ಪ್ರಮಾಣಪತ್ರಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಸುತ್ತೋಲೆ ಹೊರಡಿಸಿದ್ದರೂ ಈ ಕುರಿತು ಸ್ಪಷ್ಟನೆ ಹಾಗೂ ಸೂಕ್ತ ಆದೇಶ ಕೋರಿ ಹಲವು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳು ಮತ್ತು ಜೈನರೊಂದಿಗೆ ಬೌದ್ಧರು ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿಗೆ ಬರುತ್ತಾರೆ.

The Karnataka government has issued an order allowing Scheduled Caste (SC) members who convert to Buddhism to continue receiving SC caste certificates. The directive applies to individuals from the 101 Scheduled Castes listed under the Karnataka SC category, even after conversion.