ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕಾರಿ ಸಂಘಗಳ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ, ನಿರ್ದೇಶಕರು ಪ್ರತಿ ವರ್ಷ ಆಸ್ತಿ ಘೋಷಣೆಗೆ ಮಸೂದೆ ತಿದ್ದುಪಡಿ, ಸಹಕಾರಿ ಹೆಸರಲ್ಲಿ 'ಸ್ವಾಹ'ಕ್ಕೆ ಕತ್ತರಿ ! 

19-08-25 11:13 am       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಸಹಕಾರ ಸಂಘಗಳ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಕೈಹಾಕಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಜಾರಿಗೆ ಮಸೂದೆ ತಂದಿದೆ. ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2025ಕ್ಕೆ ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಲಾಗಿದೆ.

ಬೆಂಗಳೂರು, ಆ.19 : ರಾಜ್ಯದಲ್ಲಿ ಸಹಕಾರ ಸಂಘಗಳ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಕೈಹಾಕಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಜಾರಿಗೆ ಮಸೂದೆ ತಂದಿದೆ. ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2025ಕ್ಕೆ ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಲಾಗಿದೆ.

ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಸರ್ಕಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸುವುದು ಹಾಗೂ ನಾಮನಿರ್ದೇಶನ ಮಾಡಲು ಅವಕಾಶ ಹೊಂದಿರುವ ಕಾನೂನನ್ನು ರೂಪಿಸಿದೆ. 2025ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿದೆ. ಪ್ರತಿಪಕ್ಷ ಸದಸ್ಯರ ಆಕ್ಷೇಪ, ಆಗ್ರಹಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಧ್ವನಿಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿದೆ.

2024ರಲ್ಲಿ ರಾಜ್ಯಪಾಲರಿಂದ ತಿರಸ್ಕೃತಗೊಂಡಿದ್ದ ವಿಧೇಯಕಕ್ಕೆ ತಿದ್ದುಪಡಿ ತಂದಿದ್ದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ಸದನದಲ್ಲಿ ಹೊಸ ಮಸೂದೆ ಮಂಡಿಸಿ ಚರ್ಚೆಗೆ ಅವಕಾಶ ಕೊಟ್ಟರು. ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಇತರ ಪ್ರಾಥಮಿಕ ನೆರವು ಪಡೆವ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ.  ಈ ಮೂಲಕ ಸಹಕಾರ ಸಂಸ್ಥೆಗಳಲ್ಲಿಯೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಪರ ವಿಧೇಯಕ ಮಂಡಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಹಕಾರ ಸಂಘಗಳಲ್ಲಿ ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಲು ಎಸ್ಸಿ/ಎಸ್ಟಿ, ಮಹಿಳೆ ಸೇರಿ ಮೂವರನ್ನು ನಾಮನಿರ್ದೇಶನ ಮಾಡಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಈ ನಾಮನಿರ್ದೇಶಿತ ಸದಸ್ಯರಿಗೆ ಈ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ರಾಜ್ಯಪಾಲರ ಸಲಹೆ ಮೇರೆಗೆ ಅದನ್ನು ತೆಗೆದು ಕೇವಲ ನಾಮನಿರ್ದೇಶನಕ್ಕಷ್ಟೇ ಸೀಮಿತಗೊಳಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಲಾಗಿದೆ ಎಂದು ಹೇಳಿದರು. 

ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳದ ಮತ್ತು ಸಂಘದೊಂದಿಗೆ ವ್ಯವಹಾರ ಮಾಡದ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವ ಅಂಶ ಈ ಹಿಂದಿನ ತಿದ್ದುಪಡಿಯಲ್ಲಿ ಸೇರಿಸಲಾಗಿತ್ತು. ಅದನ್ನು ಈ ತಿದ್ದುಪಡಿಯಲ್ಲಿ ತೆಗೆಯಲಾಗಿದೆ ಎಂದೂ ಪಾಟೀಲ್‌ ಮಾಹಿತಿ ನೀಡಿದರು. ಸರ್ಕಾರದಿಂದ ನೆರವು ಪಡೆಯುವ ಸಹಕಾರ ಸಂಘಗಳನ್ನು ನೆರವು ಪಡೆದ ಸಹಕಾರ ಸಂಘಗಳು ಎಂದು ಗುರುತಿಸುವ ಅಂಶಗಳನ್ನೂ ಸೇರಿಸಲಾಗಿದೆ. ಹಾಗೆಯೇ, ಸಹಕಾರ ಸಂಘಗಳ ನಿರ್ದೇಶಕರು ಪ್ರತಿವರ್ಷ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂಬ ಅಂಶವನ್ನೂ ಈ ವಿಧೇಯಕದಲ್ಲಿ ಸೇರಿಸಲಾಗಿದೆ ಎಂದರು. 

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ತಿದ್ದುಪಡಿ ಕಾಯ್ದೆಯಿಂದ ಸಹಕಾರಿ ಸಂಘಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಪ್ರಾಥಮಿಕ ಸಹಕಾರ ಸಂಘಗಳಿದ್ದು ನಿರ್ದೇಶಕರು ಪ್ರತಿ ವರ್ಷ ಆಸ್ತಿ ಘೋಷಣೆ ಮಾಡುವುದು ಅಸಾಧ್ಯವಾಗಲಿದೆ. ಅಲ್ಲದೆ, ಆಡಿಟ್ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಸಹಕಾರ ಸಂಘಗಳ ಕಾರ್ಯದ ಜೊತೆ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ವಿಧೇಯಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿಧೇಯಕ ತಿದ್ದುಪಡಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಮೂರು ಜನರನ್ನು ನಾಮನಿರ್ದೇಶನ ಮಾಡಿದ್ದರೂ, ಅವರಿಗೆ ಮತದಾನದ ಹಕ್ಕು ನೀಡಿಲ್ಲ. ಮತದಾನಕ್ಕೆ ಅವಕಾಶ ಕೊಡಬೇಕು. ನಿರ್ದೇಶಕರ ಆಸ್ತಿ ವಿವರ ಸಲ್ಲಿಕೆ ನಿರ್ಧಾರ ಪರಿಷ್ಕರಿಸಬೇಕು ಎಂಬ ಸಲಹೆ ನೀಡಿದರು.

ಮೈಸೂರಿನ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ದಲಿತರ ಮೀಸಲಾತಿಗೆ ವಿರೋಧವಿಲ್ಲ. ಆದರೆ ಇದರಲ್ಲಿ ಸರ್ಕಾರ ಮತ್ತು ರಾಜಕೀಯ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಬೇಕು. ಹಸ್ತಕ್ಷೇಪ ಆದರೆ ಸಹಕಾರ ಸಂಘಗಳು ಉಳಿಯುವುದಿಲ್ಲ. ಜತೆಗೆ ದುರುಪಯೋಗ ಆಗುತ್ತಿರುವ 121ನೇ ಕಾಯ್ದೆಗೆ ತಿದ್ದುಪಡಿ ತರುವಂತೆ ಹೇಳಿದರು.

ಹಿರಿಯ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ದಲಿತರಿಗೆ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ವಿರೋಧವಿಲ್ಲ. ಸಹಕಾರ ಸಂಘಗಳ ನಿರ್ದೇಶಕರ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಮೀಸಲಾತಿ ಅಡಿ ನಾಮನಿರ್ದೇಶನ ಮಾಡುವ ಕ್ರಮವೂ ಸರಿಯಲ್ಲ. ಆದರೆ ನಿರ್ದೇಶಕರು ಪ್ರತಿವರ್ಷ ಆಸ್ತಿ ವಿವರ ಘೋಷಣೆ ಮಾಡುವುದು ಸಾಧ್ಯವಾ? ಸರ್ಕಾರ ಬೇರೆ, ಸಹಕಾರ ಬೇರೆ. ಹಾಗಾಗಿ ತಿದ್ದುಪಡಿ ತರುವ ಬದಲು ಸಹಕಾರ ಕ್ಷೇತ್ರವನ್ನೇ ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ನಾಮನಿರ್ದೇಶನ ಮಾಡಿದರೆ ಸಹಕಾರ ಸಂಘಗಳು ಮುಚ್ಚುತ್ತವೆ ಎಂಬುದು ಸರಿಯಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಧ್ವನಿ ಏರಿಸಿದರು. ಚರ್ಚೆ ವೇಳೆ ಶಾಸಕ ಜಿ.ಟಿ. ದೇವೇಗೌಡ ಅವರು, ಸರ್ಕಾರ ಕೈಗೊಳ್ಳಲು ಹೊರಟ ಕ್ರಮಗಳಿಂದಾಗಿ ಸಹಕಾರ ಸಂಘಗಳನ್ನು ಮುಚ್ಚುವ ಹಂತಕ್ಕೆ ಬರಲಿದೆ ಎಂದು ಕಳವಳ ಹೊರಹಾಕಿದಾಗ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಶಿವರಾಜ್ ತಂಗಡಗಿ, ಜಿ.ಟಿ. ದೇವೇಗೌಡ ಅವರ ಮಾತು ಸರಿಯಲ್ಲ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ನಾಮನಿರ್ದೇಶನ ಮಾಡಿದರೆ ಸಹಕಾರ ಸಂಘಗಳು ಮುಚ್ಚುತ್ತವೆ ಎಂದರೆ ಏನು ಅರ್ಥ? ಸಹಕಾರ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿ ಸಮುದಾಯದವರು ಏಳಿಗೆ ಹೊಂದುವುದಕ್ಕೆ ಅವಕಾಶ ಸಿಗಬಾರದೇ? ವಿಧೇಯಕದಲ್ಲಿನ ತಪ್ಪುಗಳ ಬಗ್ಗೆ ತಿಳಿಸಿ. ಅದರ ಬದಲು ಎಸ್ಸಿ/ಎಸ್ಟಿ ಸಮುದಾಯದವರನ್ನು ಸೇರಿಸಿದರೆ ಸಂಘ ಹಾಳಾಗುತ್ತದೆ ಎಂಬರ್ಥದಲ್ಲಿ ಮಾತನಾಡಬೇಡಿ ಎಂದರು.

The Karnataka government has initiated sweeping reforms in the state’s cooperative sector, including the introduction of reservation for the posts of President and Vice President in cooperative societies. The Karnataka Cooperative Societies (Amendment) Bill, 2025, was passed in the Legislative Assembly on Monday, despite opposition objections.