19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು, ಈಗ ನವಿಲುಗಳ ಮಾರಣ ಹೋಮ; ತುಮಕೂರಿನಲ್ಲಿ 19 ನವಿಲುಗಳು ಅನುಮಾನಾಸ್ಪದ ಸಾವು, ವಿಷ ಇಟ್ಟು ಸಾಯಿಸಿರುವ ಶಂಕೆ, ಡಿಸಿಎಫ್‌ ನೇತೃತ್ವದಲ್ಲಿ ತನಿಖೆ

05-08-25 12:44 pm       HK News Desk   ಕರ್ನಾಟಕ

ಬರೋಬ್ಬರಿ 19 ನವಿಲುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ರೈತರು ಬೆಳ್ಳಂ ಬೆಳಗ್ಗೆ ತಮ್ಮ ಹೊಲಗದ್ದೆಗಳಿಗೆ ಹೋದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನವಿಲುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ತುಮಕೂರು, ಆ 04 : ಬರೋಬ್ಬರಿ 19 ನವಿಲುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ರೈತರು ಬೆಳ್ಳಂ ಬೆಳಗ್ಗೆ ತಮ್ಮ ಹೊಲಗದ್ದೆಗಳಿಗೆ ಹೋದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನವಿಲುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ರೈತರು ನವಿಲುಗಳು ಮೃತಪಟ್ಟಿರುವ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ನವಿಲುಗಳ ಮೃತದೇಹವನ್ನು ಪ್ರಾಥಮಿಕ ಪರೀಕ್ಷೆಗಾಗಿ ಸ್ಥಳೀಯ ಪಶುಪಾಲನ ಇಲಾಖೆ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ ಕೆರೆ ಕೋಡಿ ಜಲಪಾತದ ಬಳಿ ಆಗಸ್ಟ್ 2 ರಂದು ನವಿಲಿನ ಮೊದಲ ಕಳೇಬರ ಪತ್ತೆಯಾಗಿತ್ತು. ಬಳಿಕ ಐದು ಗಂಡು ಮತ್ತು 14 ಹೆಣ್ಣು ನವಿಲುಗಳ ಕಳೇಬರಗಳು ಹೊಲಗಳಲ್ಲಿ ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಗಸ್ಟ್ 1 ರ ರಾತ್ರಿ ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನವಿಲುಗಳಿಗೆ ವಿಷ ಇಟ್ಟು ಸಾಯಿಸಿರುವ ಅನುಮಾನ ಬಲವಾಗಿ ವ್ಯಕ್ತವಾಗಿದೆ.

ಪ್ರಕರಣದ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದ ತಂಡ ನಡೆಸಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, 'ನವಿಲುಗಳ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾವಿಗೆ ಕೀಟನಾಶಕ ಸೇವನೆ ಕಾರಣ ಎಂಬ ಅಂಶ ಮಾಧ್ಯಮಗಳಲ್ಲಿ ವರದಿಯಾಗಿದೆ. ನವಿಲುಗಳನ್ನು ಸಾಯಿಸಲೆಂದೇ ವಿಷ ಹಾಕಲಾಗಿತ್ತೆ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ ಎಂಬ ಬಗ್ಗೆ ತನಿಖೆ ನಡೆಸಿ, ಐದು ದಿನಗಳಲ್ಲಿ ವರದಿ ಸಲ್ಲಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ' ಎಂದರು.

ಇತ್ತೀಚೆಗೆ ಚಾಮರಾಜನಗರದಲ್ಲಿ ಕೀಟ ನಾಶಕ ಬಳಸಿ ಐದು ಹುಲಿಗಳ ಕೊಲೆ: 

ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂ ಸಮೀಪದ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಜೂನ್ 26 ರಂದು ಐದು ಹುಲಿಗಳು ಸಾವನ್ನಪ್ಪಿದ್ದವು. ತಾಯಿ ಹುಲಿ ಮತ್ತು 4 ಮರಿಗಳು ಅಸುನೀಗಿದ್ದವು. ಹುಲಿಗಳು ಮೃತಪಟ್ಟ ಅಣತಿ ದೂರದಲ್ಲಿ ಹಸುವೊಂದರ ಕಳೇಬರ ಪತ್ತೆಯಾಗಿತ್ತು. ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದರು. ಜೊತೆಗೆ ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಹಲವರನ್ನು ಸಚಿವ ಈಶ್ವರ ಬಿ ಖಂಡ್ರೆ ಅಮಾನತುಗೊಳಿಸಿದ್ದರು.

In a shocking incident, as many as 19 peacocks have been found dead under mysterious circumstances in Hanumanthapura village of Madhugiri taluk, Tumakuru district. Early in the morning, local farmers discovered the lifeless birds scattered across their fields.