Hubballi Gold Robbery: ಬೆಂಗಳೂರು ದರೋಡೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಇ.ಡಿ ಅಧಿಕಾರಿಗಳ ಸೋಗಿನಲ್ಲಿ 3.20 ಕೋಟಿ ರೂ. ಲೂಟಿ ; ಕೇರಳ ಮೂಲದ ವ್ಯಾಪಾರಿಗೆ ಟೋಪಿ 

25-11-25 05:03 pm       HK News Desk   ಕ್ರೈಂ

ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ಸೋಗಿನಲ್ಲಿ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯಿಂದ ಅಂದಾಜು 3.20 ಕೋಟಿ ರೂ. ಮೌಲ್ಯದ ಸುಮಾರು 3 ಕೆಜಿ ಚಿನ್ನಾಭರಣ ಹಾಗೂ 2 ಲಕ್ಷ ನಗದು ದೋಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ, ನ 25 : ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ಸೋಗಿನಲ್ಲಿ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯಿಂದ ಅಂದಾಜು 3.20 ಕೋಟಿ ರೂ. ಮೌಲ್ಯದ ಸುಮಾರು 3 ಕೆಜಿ ಚಿನ್ನಾಭರಣ ಹಾಗೂ 2 ಲಕ್ಷ ನಗದು ದೋಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೇರಳ ಅಮ್ಮದಮ್ ಜಿಲ್ಲೆ ಪಾರಲಂ ಚಕ್ಕಯರ್ಕಡವುದ ಸುಧೀನ ಎಂ.ಎಸ್. ಎಂಬುವರೇ ಚಿನ್ನಾಭರಣ, ನಗದು ಕಳೆದುಕೊಂಡವರು. ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸಲು ಪೊಲೀಸ್ ಆಯುಕ್ತರು ಮೂರು ತಂಡಗಳನ್ನು ರಚಿಸಿದ್ದು, ತನಿಖಾ ತಂಡದ ಅಧಿಕಾರಿಗಳು ಕಾರು ಚಾಲಕ ಮತ್ತು ಸುಧೀನ ಜತೆ ಬಂದಿದ್ದ ಕೆಲಸಗಾರ ವಿವೇಕ ಎಂಬಿಬ್ಬರನ್ನ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಸಿಸಿಬಿ ಪೊಲೀಸರು ಕದೀಮರು ವ್ಯಾಪಾರಿ ಭೇಟಿಯಾದ ಸ್ಥಳ ಹಾಗೂ ಅವರು ವಾಹನದಲ್ಲಿ ಅಲೆದಾಡಿದ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸುಧೀನ ಜ್ಯುವೆಲ್ಲರಿ ಅಂಗಡಿಗಳಿಗೆ ಹೋಗಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದರು. ನ.15ರಂದು ಕೆಲಸಗಾರ ವಿವೇಕ ಜೊತೆ ಚಿನ್ನಾಭರಣಗಳೊಂದಿಗೆ ಮಂಗಳೂರಿನಿಂದ ಹೊರಟು ಬೆಳಗಾವಿ, ಗೋಕಾಕ, ಧಾರವಾಡ, ಹುಬ್ಬಳ್ಳಿಗೆ ತೆರಳಿ ಜ್ಯುವೆಲ್ಲರಿ ಅಂಗಡಿಗಳಿಗೆ ಭೇಟಿಕೊಟ್ಟು ಆರ್ಡರ್ ಪಡೆದಿದ್ದಾರೆ. 17ರಂದು ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಬಳಿಯ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು, 18ರಂದು ಹುಬ್ಬಳ್ಳಿ ಹಾಗೂ 19ರಂದು ಧಾರವಾಡದಲ್ಲಿನ ಕೆಲ ಜ್ಯುವೆಲ್ಲರಿ ಮಳಿಗೆಗಳಿಗೆ ಭೇಟಿಕೊಟ್ಟು ಆರ್ಡರ್ ಪಡೆದುಕೊಂಡು ಮತ್ತೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಮಧ್ಯಾಹ್ನ ನೀಲಿಜಿನ್ ರಸ್ತೆಯಲ್ಲಿ ಕೆಲಸಗಾರ ವಿವೇಕ ಜೊತೆ ಹೋಗುತ್ತಿದ್ದಾಗ, ಐವರ ತಂಡ ಇವರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

'ತಾವು ಇಡಿ ಅಧಿಕಾರಿಗಳು' ಎಂದು ಐಡಿ ಕಾರ್ಡ್ ತೋರಿಸಿದ ಖದೀಮರು 'ನಿಮ್ಮನ್ನು ತಪಾಸಿಸಬೇಕು, ನಮ್ಮೊಂದಿಗೆ ಕಚೇರಿಗೆ ಬನ್ನಿ, ವಿಚಾರಣೆ ಮಾಡುತ್ತೇವೆ' ಎಂದು ನಮ್ಮನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ನೀವು ಚಿನ್ನಾಭರಣಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದೀರಿ ಎಂದು ಬೆದರಿಸಿ, ನಮ್ಮ ಬಳಿ ಇದ್ದ ಮೊಬೈಲ್​ಗಳನ್ನು ಕಿತ್ತುಕೊಂಡು ಅದರಲ್ಲಿನ ಸಿಮ್ ಕಾರ್ಡ್​ ತೆಗೆದಿದ್ದಾರೆ. ಅಲ್ಲದೇ ನಮ್ಮ ಪರ್ಸ್‌ಗಳನ್ನು ಸಹ ಕಸಿದುಕೊಂಡಿದ್ದಾರೆ. ನಂತರ ವಿವೇಕ ಬಳಿಯಿದ್ದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಕಸಿದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ನಿಮ್ಮ ಕಚೇರಿ ಎಲ್ಲಿ ಎಂದು ಕೇಳಿದಾಗ ನಮ್ಮ ಮೇಲೆ ಹಲ್ಲೆ ನಡೆಸಿ, ಸುಮ್ಮನಿರಿ ಎಂದು ಹೆದರಿಸಿ ಕಿತ್ತೂರು ಬಳಿ ಕಾರು ನಿಲ್ಲಿಸಿ ವಿವೇಕನನ್ನು ಕೆಳಗೆ ಇಳಿಸಿದ್ದಾರೆ. ನಂತರ ನನ್ನನ್ನು ಕರೆದು ಕೊಂಡು ಹೋಗಿ ಎಂ.ಕೆ. ಹುಬ್ಬಳ್ಳಿ ಬಳಿ ಇಳಿಸಿ, ಬ್ಯಾಗಿನಲ್ಲಿದ್ದ 3.20 ಕೋಟಿ ರೂ. ಮೌಲ್ಯದ 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ತೆಗೆದುಕೊಂಡು ವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಸುಧೀನ ಅವರು ದೂರು ನೀಡಿದ್ದಾರೆ. ಇವರ ದೂರಿನನ್ವಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಇದನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ, ಇಡಿ ಅಧಿಕಾರಿಗಳ ಸೋಗಿನಲ್ಲಿ ಐವರುಳ್ಳ ಖದೀಮರ ತಂಡವು ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯಿಂದ 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದೆ. ಈಗಾಗಲೇ ತಂಡಗಳು ಮಹಾರಾಷ್ಟ್ರ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತೆರಳಿವೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

A shocking robbery has surfaced in Hubballi, where a five-member gang posing as Enforcement Directorate (ED) officials looted nearly ₹3.20 crore worth of gold jewellery and cash from a Kerala-based jeweller. The victim, Sudheen M.S. from Thrissur, was carrying almost 3 kg of gold and ₹2 lakh in cash while touring jewellery stores across Karnataka.