ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ದೋಖಾ ; ಭಾರೀ ಲಾಭ ತೋರಿಸಿ ಹೂಡಿಕೆ ಮಾಡಿಸಿ ಮೂರು ಕೋಟಿ ಮೋಸ, ಸೋದರರ ವಿರುದ್ಧ ಮಂಗಳೂರಿನಲ್ಲಿ ದೂರು  

05-02-23 05:26 pm       Mangalore Correspondent   ಕ್ರೈಂ

ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆಂದು ಹೂಡಿಕೆ ಮಾಡಿಸಿ ಬರೋಬ್ಬರಿ 3 ಕೋ.ರೂ. ವಂಚಿಸಿರುವ ಬಗ್ಗೆ ನಗರದ ಪಡೀಲ್ ಕಣ್ಣೂರು ನಿವಾಸಿಯೊಬ್ಬರು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಮಂಗಳೂರು, ಫೆ.5 : ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆಂದು ಹೂಡಿಕೆ ಮಾಡಿಸಿ ಬರೋಬ್ಬರಿ 3 ಕೋ.ರೂ. ವಂಚಿಸಿರುವ ಬಗ್ಗೆ ನಗರದ ಪಡೀಲ್ ಕಣ್ಣೂರು ನಿವಾಸಿಯೊಬ್ಬರು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಮುಹಮ್ಮದ್ ಶಫದ್ ಸಿ.ಕೆ. ಮತ್ತು ಮುಹಮ್ಮದ್ ಅಫೀದ್ ಸಿ.ಕೆ. ಆರೋಪಿಗಳು. ದೂರುದಾರ ವ್ಯಕ್ತಿಯ ಬಳಿ ಪರಿಚಯದ ಮುಹಮ್ಮದ್ ಶಫದ್ ಎಂಬಾತ 2020ರ ಜನವರಿಯ ಮೊದಲ ವಾರದಲ್ಲಿ ತಾನು ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದಿಸಿದ್ದು, ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸು ಎಂದಿದ್ದ ಎನ್ನಲಾಗಿದೆ. ಅದರಂತೆ ದೂರುದಾರರು ಮುಹಮ್ಮದ್ ಶಫದ್‌ನನ್ನು ಭೇಟಿಯಾಗಿದ್ದು, ಆವಾಗ ಆತ ಲ್ಯಾಪ್‌ಟಾಪ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಮಾಹಿತಿ ನೀಡುತ್ತಾ ತಿಂಗಳಿಗೆ ಶೇ.25 ಲಾಭಾಂಶ ನೀಡುವುದಾಗಿ ತಿಳಿಸಿದ್ದ.

ಜನವರಿ 3ನೇ ವಾರದಲ್ಲಿ ಮುಹಮ್ಮದ್ ಶಫದ್ ಮತ್ತು ಆತನ ತಮ್ಮ ಮುಹಮ್ಮದ್ ಅಫೀದ್ ತನ್ನ ಮನೆಗೆ ಭೇಟಿ ನೀಡಿದ್ದು 35 ಲಕ್ಷ ರೂ. ನಗದನ್ನು ಆರೋಪಿ ಸಹೋದರರಿಗೆ ನೀಡಿದ್ದೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಒಂದು ತಿಂಗಳ ಬಳಿಕ ಮುಹಮ್ಮದ್ ಶಫದ್ ವಾಟ್ಸಪ್ ಮೂಲಕ ದೂರುದಾರರಿಗೆ ಒಂದು ತಿಂಗಳ 8.75 ಲಕ್ಷ ರೂ. ಲಾಭಾಂಶ ಬಂದಿರುವುದಾಗಿ ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೋರಿಸಿದ್ದ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್‌ಡೇಟ್ ಆಗುತ್ತದೆ ಎಂದು ನಂಬಿಸಿದ್ದ. ಬಳಿಕ ಮತ್ತೆ ಕರೆ ಮಾಡಿಯೂ ಲಾಭಾಂಶದ ಬಗ್ಗೆ ನಂಬಿಸಿದ್ದ ಎನ್ನಲಾಗಿದೆ.

ಈ ನಡುವೆ, ಜಾಸ್ಮಿನ್ ಹಂಝ ಎಂಬವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ ಮತ್ತೆ 7 ಲ.ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದ. ದೂರುದಾರರು ತನ್ನ ಸ್ನೇಹಿತರಿಂದ ಸಂಗ್ರಹಿಸಿ ಆರೋಪಿಗಳಿಗೆ ಒಟ್ಟು 3 ಕೋ.ರೂ. ನೀಡಿದ್ದು, ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಆರೋಪಿಸಲಾಗಿದೆ. 2022ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮುಹಮ್ಮದ್ ಶಫದ್ ಮತ್ತು ಮುಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ತನಗೆ ಸಿಕ್ಕಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳಾದ ಮುಹಮ್ಮದ್ ಶಫದ್ ಸಿ.ಕೆ, ಮುಹಮ್ಮದ್ ಅಫೀದ್ ಸಿ.ಕೆ., ಸಾದಿಕ್, ಜಾಸ್ಮಿನ್, ಮುಹಮ್ಮದ್ ಬಶೀರ್ ವಿರುದ್ಧ ನೀಡಿದ್ದ ದೂರಿನಂತೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A person, resident of Kannur Borugudde filed complaint with police accusing two men of conning Rs three crore on the pretext of investing in cryptocurrency. Mohammad Shafad C K and Mohammad Afeed C K are the accused. Mohammed Shafad was known to the complainant. He told the complainant to inform him of any good investors to invest in cryptocurrency as he has made crore of rupees in January 2020.