Speaker U.T. Khader: ಶಾಸಕರು ಸಿನಿಮಾ ರೀತಿಯಲ್ಲಿ ಕಚ್ಚಾಡುವುದು, ಬೆದರಿಕೆ ಒಡ್ಡುವುದು ಸರಿಯಲ್ಲ, ಜನರ ನಡುವೆ ಶಾಸಕರ ಗೌರವಕ್ಕೆ ಧಕ್ಕೆ ; ಸ್ಪೀಕರ್ ಖಾದರ್ 

03-01-26 07:43 pm       Mangalore Correspondent   ಕರಾವಳಿ

ಶಾಸಕರು ಸಿನಿಮಾ ರೀತಿಯಲ್ಲಿ ಸವಾಲು ಹಾಕುವುದು, ಪರಸ್ಪರ ಬೈದಾಡುವುದು ಸರಿಯಲ್ಲ. ಇಂಥ ಕೆಲವರ ನಡವಳಿಕೆಯಿಂದಾಗಿ ಜನರು ಶಾಸಕರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ.

ಮಂಗಳೂರು, ಜ.3: ಶಾಸಕರು ಸಿನಿಮಾ ರೀತಿಯಲ್ಲಿ ಸವಾಲು ಹಾಕುವುದು, ಪರಸ್ಪರ ಬೈದಾಡುವುದು ಸರಿಯಲ್ಲ. ಇಂಥ ಕೆಲವರ ನಡವಳಿಕೆಯಿಂದಾಗಿ ಜನರು ಶಾಸಕರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ. ಶಾಸಕರು ಏಕವಚನದಲ್ಲಿ ಮಾತನಾಡುವುದು, ಬೆದರಿಕೆ ಹಾಕುವುದು ಸರಿಯಾಗಿರಲ್ಲ ಎಂದು ಸ್ಪೀಕರ್ ಯುಟಿ ಖಾದರ್, ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ನಡುವಿನ ಕಲಹದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‌

ಸುದ್ದಿಗೋಷ್ಟಿ ನಡೆಸಿದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ನಾಡಿನ ಸಂಸ್ಕೃತಿ ಉಳಿಸುವ ರೀತಿ ಶಾಸಕರ ವರ್ತನೆ ಇರಬೇಕು. ಜನರ ಸಮಸ್ಯೆ ಬಗೆಹರಿಸಲು ಶಾಸಕರನ್ನ ಜನ ಆಯ್ಕೆ ಮಾಡುತ್ತಾರೆ. ಇಲ್ಲಿ ಶಾಸಕರೇ ಕಚ್ಚಾಡಿಕೊಂಡು ಬೆದರಿಕೆ ಒಡ್ಡಿ ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು. ‌
 
ಬಳ್ಳಾರಿ ಜಿಲ್ಲೆಯ ಎಸ್ಪಿಯನ್ನು ಕರ್ತವ್ಯಕ್ಕೆ ಬಂದ ಒಂದೇ ದಿನದಲ್ಲಿ ಸಸ್ಪೆಂಡ್ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಸರ್ಕಾರದ ಕ್ರಮ. ನಾನು ಸರ್ಕಾರದ ಭಾಗವಾಗಿಲ್ಲ. ಯಾವ ಕಾರಣಕ್ಕೆ ಮಾಡಿದೆಯೋ ನನಗೆ ಗೊತ್ತಿಲ್ಲ ಎಂದರು. ಕೋಗಿಲು ವಿವಾದ ಕುರಿತ ಪ್ರಶ್ನೆಗೂ ಸರ್ಕಾರದ ನಡೆಯ ಬಗ್ಗೆ ಕಮೆಂಟ್ ಮಾಡಲ್ಲ ಎಂದರು.‌ ಮುಖ್ಯಮಂತ್ರಿ ಪದವಿಗೆ ತಾವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ಅದಕ್ಕಿನ್ನೂ 20 ವರ್ಷ ಬೇಕು. ಇನ್ನೂ ನಾಲ್ಕು ಬಾರಿ ಜನರು ಶಾಸಕನಾಗಿ ಆರಿಸಿದರೆ ನೋಡಬಹುದು ಎಂದರು.‌

ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ತಡೆಯೊಡ್ಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅಲ್ಲಿ ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಡೆಯುತ್ತೆ ಎಂದು ಪೊಲೀಸರು ಹೇಳುತ್ತಾರೆ. ಅಂಥವರ ಮೇಲೆ ಕ್ರಮ ಕೈಗೊಳ್ಳಿ ಕೋಳಿ ಅಂಕ ನಿಲ್ಲಿಸುವುದು ಯಾಕೆಂದು ಆಯೋಜಕರು ಕೇಳುತ್ತಾರೆ. ಇದರ ಬಗ್ಗೆ ಚರ್ಚೆ ಆಗ್ತಾ ಇದೆ, ಉಸ್ತುವಾರಿ ಸಚಿವರು, ಕಾನೂನು ಸಚಿವರು ನಿರ್ಧಾರ ತಗೊಳ್ತಾರೆ. ನನ್ನ ಸಲಹೆಯನ್ನು ಕೊಡುತ್ತೇನೆ, ಇದಕ್ಕೊಂದು ಪರ್ಮನೆಂಟ್ ಸೊಲ್ಯುಶನ್ ಆಗಬೇಕಾಗಿದೆ ಎಂದು ಖಾದರ್ ಹೇಳಿದರು. ‌

ದ್ವೇಷ ಭಾಷಣ ಮಸೂದೆ ತಂದಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ದೇಶ ಬಲಿಷ್ಠವಾಗಬೇಕು ಎನ್ನುವುದು ನಮ್ಮೆಲ್ಲರ ಕನಸು. ದ್ವೇಷ ಭಾಷಣದ ಮೂಲಕ ಸಮಸ್ಯೆ ಸೃಷ್ಟಿಸುವುದು ಯಾರಿಗೂ ಬೇಕಿಲ್ಲ‌. ಮಸೂದೆಯಲ್ಲಿ ಲೋಪ ದೋಷಗಳಿದ್ದಲ್ಲಿ ಲಿಖಿತವಾಗಿ ಕೊಡಬಹುದು. ಜನರ ಶಾಂತಿ, ನೆಮ್ಮದಿಗಾಗಿ ಕಾನೂನು ಬೇಕಾಗುತ್ತದೆ ಎಂದು ಹೇಳಿದರು. ‌

Karnataka Legislative Assembly Speaker U.T. Khader has strongly condemned the recent behaviour of MLAs involved in public quarrels and threats, saying such “cinematic fights” damage the dignity of elected representatives. He was responding to questions about the clash between Janardhan Reddy and Nara Bharat Reddy in Ballari.