ದೇಶ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ನವ ಸಂಕಲ್ಪ ; ಮಿಲೆಟ್ ಬಳಸಿ, ಎಣ್ಣೆ ತ್ಯಜಿಸಿ, ಸ್ವದೇಶಿ ಮಂತ್ರ- ಸಸ್ಯ- ನೀರು ರಕ್ಷಿಸಿ, ಸಾವಯವ ಆಹಾರ ಸೇವಿಸಿ, ಉಡುಪಿಯಲ್ಲಿ ಲಕ್ಷ ಕಂಠ ಗೀತ ಗಾಯನಕ್ಕೆ ಚಾಲನೆ, ಅದ್ದೂರಿ ರೋಡ್ ಶೋ 

28-11-25 02:48 pm       Udupi Correspondent   ಕರಾವಳಿ

2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಮಾಡುವುದು ಎಲ್ಲ ನಾಗರಿಕರ ಕರ್ತವ್ಯ ಮತ್ತು ಗುರಿಯಾಗಬೇಕು. ಇದಕ್ಕಾಗಿ ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿದಂತೆ, ನಮ್ಮ ಜೀವನ, ದೇಶದ ಕಲ್ಯಾಣಕ್ಕಾಗಿ ನವ ಸಂಕಲ್ಪಗಳನ್ನು ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  

ಉಡುಪಿ, ಅ.28 : 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಮಾಡುವುದು ಎಲ್ಲ ನಾಗರಿಕರ ಕರ್ತವ್ಯ ಮತ್ತು ಗುರಿಯಾಗಬೇಕು. ಇದಕ್ಕಾಗಿ ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿದಂತೆ, ನಮ್ಮ ಜೀವನ, ದೇಶದ ಕಲ್ಯಾಣಕ್ಕಾಗಿ ನವ ಸಂಕಲ್ಪಗಳನ್ನು ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  

ಉಡುಪಿ ಕೃಷ್ಣ ಮಠದಲ್ಲಿ ನಡೆದ ಲಕ್ಷ ಕಂಠ ಗೀತಾ ಗಾಯನ ಕಾರ್ಯಕ್ರಮಕ್ಕೆ ಭಗವದ್ಗೀತೆಯ 15ನೇ ಅಧ್ಯಾಯವನ್ನು ಲಕ್ಷ ಜನರ ಸಮ್ಮುಖದಲ್ಲಿ ಪಠಣ ಮಾಡುವ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಆಬಳಿಕ ಜನರನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ, ಕೃಷ್ಣನ ಆಳ್ವಿಕೆ ಇದ್ದ ಗುಜರಾತಿನಿಂದ ಬಂದಿದ್ದೇನೆ. ಕೃಷ್ಣನ ನಗರಿ ದ್ವಾರಕೆಯನ್ನು ಕಡಲಿನ ಒಳಗೆ ಇಳಿದು ದರ್ಶನ ಮಾಡಿಕೊಂಡು ಬಂದಿದ್ದೇನೆ, ಮೂರು ದಿನಗಳ ಹಿಂದೆ ಗೀತೆಯನ್ನು ಬೋಧಿಸಿದ ಕುರುಕ್ಷೇತ್ರದಲ್ಲಿದ್ದೆ. ಈಗ ಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿ ಕೃಷ್ಣನ ಊರಿಗೆ ಬಂದಿರುವುದಕ್ಕೆ ತುಂಬ ಸಂತೋಷ ಪಡುತ್ತೇನೆ. ಒಂದು ಲಕ್ಷ ಜನರ ಜೊತೆಗೆ ಭಗವದ್ಗೀತೆ ಪಠಣ ಮಾಡಿರುವುದು ನನ್ನ ಭಾಗ್ಯ ಎಂದರು.

ಉಡುಪಿ ಜನಸಂಘದ ಕಾಲದಿಂದಲೂ ದೇಶಕ್ಕೆ ಮಾದರಿ ಕೊಟ್ಟ ನಗರ. ಬಿಜೆಪಿಗೆ ಸುಶಾಸನದ ಮಾಡೆಲ್ ನೀಡಿದ್ದೇ ಉಡುಪಿ. 1968ರಲ್ಲಿ ಮೊದಲ ಬಾರಿಗೆ ವಿಎಸ್ ಆಚಾರ್ಯ ನೇತೃತ್ವದಲ್ಲಿ ಉಡುಪಿ ನಗರಸಭೆಯನ್ನು ಬಿಜೆಪಿ ಜಯಿಸಿತ್ತು. ನಗರಸಭೆ ಮೂಲಕ ಆಡಳಿತದ ಮಾದರಿಯನ್ನು ತೋರಿಸಿಕೊಟ್ಟಿದ್ದರು. ಸ್ವಚ್ಛತೆ, ಒಳಚರಂಡಿ ವಿಚಾರದಲ್ಲಿಯೂ ಉಡುಪಿ ಮಾಡೆಲ್ ಆಗಿದೆ.

ರಾಮಚರಿತ ಮಾನಸದಲ್ಲಿ ತುಳಸೀದಾಸರು ಕಲಿಯುಗದಲ್ಲಿ ಕೇವಲ ಭಗವನ್ನಾಮ ಸಂಕೀರ್ತನೆಯಿಂದ ಪರಮ ಸಾಧನೆ ಪಡೆಯಬಹುದು ಎಂದು ಹೇಳಿದ್ದಾರೆ. ಒಂದು ಲಕ್ಷ ಜನರ ಸಹಯೋಗದಲ್ಲಿ ಒಂದೇ ಸ್ವರದಲ್ಲಿ ಗೀತಾ ಪಠಣದೊಂದಿಗೆ ಭಗವನ್ನಾಮ ಸ್ಮರಣೆ ಮಾಡಿರುವುದು ಮನಸ್ಸು, ಬುದ್ಧಿಗೆ ಹೊಸ ಶಕ್ತಿ ನೀಡಿದೆ. ಇದುವೇ ನಮ್ಮ ಆಧ್ಯಾತ್ಮಿಕ ಶಕ್ತಿ, ಸಮಾಜದ ಏಕತೆಯ ಶಕ್ತಿ. ಇದಕ್ಕಾಗಿ ಪೂಜ್ಯ ಸುಗುಣೇಂದ್ರ ತೀರ್ಥರಿಗೆ ಪ್ರಣಾಮ ಸಲ್ಲಿಸುತ್ತೇನೆ. ಲಕ್ಷ ಕಂಠ ಗೀತಾ ಪಠಣ, ಕೋಟಿ ಗೀತಾ ಲೇಖನ ಯಜ್ಞ ಮೂಲಕ ಸನಾತನ ಪರಂಪರೆಯಲ್ಲಿ ಹೊಸ ಆಂದೋಲನ ಆರಂಭಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.

ಅಯೋಧ್ಯೆಯಲ್ಲಿ ಮಧ್ವಚಾರ್ಯ ದ್ವಾರ

ನವೆಂಬರ್ 25ರಂದು ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಪೂರ್ಣಗೊಂಡು ಧರ್ಮ ಧ್ವಜ ಸ್ಥಾಪನೆಯಾಗಿದೆ. ದಶಕಗಳ ಹಿಂದೆ ಉಡುಪಿಯ ವಿಶ್ವೇಶ ತೀರ್ಥರು ರಾಮ ಮಂದಿರ ಆಂದೋಲನ ಆರಂಭಿಸಿದ್ದರು. ರಾಮನ ಮಂದಿರ ಸಂಪೂರ್ಣಗೊಂಡು ಶ್ರೀಗಳ ಅಪೇಕ್ಷೆ ಈಡೇರಿದೆ. ರಾಮನ ಬಗ್ಗೆ ಶ್ಲೋಕಗಳನ್ನು ರಚಿಸಿದ್ದ ಮಧ್ವಾಚಾರ್ಯರ ಹೆಸರಲ್ಲಿ ಅಯೋಧ್ಯೆಯಲ್ಲಿ ವಿಶಾಲ ದ್ವಾರ ಸ್ಥಾಪಿಸಲಾಗಿದೆ. ಮಧ್ವರು ದ್ವೈತ ದರ್ಶನದ ಮೂಲಕ ಉಡುಪಿಯಲ್ಲಿ ಅಷ್ಟಮಠಗಳ ಪರಂಪರೆ ಹುಟ್ಟುಹಾಕಿದ್ದಲ್ಲದೆ, ಭಕ್ತಿ, ಸೇವಾ, ಜ್ಞಾನದ ಸಂಗಮ ಕ್ಷೇತ್ರವನ್ನು ಸ್ಥಾಪಿಸಿದ್ದಾರೆ.

ಪುರಂದರದಾಸರು, ಕನಕದಾಸರು ಕನ್ನಡದಲ್ಲಿ ದೇವರ ಶ್ಲೋಕ, ಪದಗಳನ್ನು ರಚಿಸಿ ಜನರಿಗೆ ಭಕ್ತಿಯೋಗವನ್ನು ತೋರಿಸಿದವರು. ಅಂಥ ಕನಕದಾಸರಿಗೆ ನಮನ ಸಲ್ಲಿಸುವ ಭಾಗ್ಯವೂ ನನಗೆ ಸಿಕ್ಕಿದೆ ಎಂದು ಹೇಳಿದ ಮೋದಿ, ಧರ್ಮಕ್ಕೆ ಗ್ಲಾನಿಯಾದಾಗ ಮತ್ತೆ ಹುಟ್ಟಿ ಬರುತ್ತೇನೆ ಎಂದಿರುವ ಕೃಷ್ಣ, ಗೀತೆಯನ್ನು ಹೇಳಿರುವುದು ಲೋಕ ಕಲ್ಯಾಣಕ್ಕಾಗಿ. ಸರ್ವ ಜನ ಹಿತಾಯ, ಸರ್ವ ಜನ ಸುಖಾಯ ಎನ್ನುವ ಕೃಷ್ಣನ ಶ್ಲೋಕಗಳಿಂದಲೇ ಪ್ರೇರಿತಗೊಂಡು ಸರ್ಕಾರದ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.  

ವಿರೋಧಿಗಳಿಗೆ ಸುದರ್ಶನ ಬಳಕೆ

ವಸುಧೈವ ಕುಟುಂಬಕಂ ಜೊತೆಗೆ ಧರ್ಮೋ ರಕ್ಷತಿ ರಕ್ಷಿತಂ ಎಂದೂ ಕೃಷ್ಣ ಹೇಳಿದ್ದಾನೆ. ಧರ್ಮ ವಿರೋಧಿಗಳಿಗೆ ಸುದರ್ಶನ್ ಚಕ್ರ ಬಳಸುವುದಕ್ಕೂ ಹೇಳಿದ್ದಾನೆ. ವಿರೋಧಿಗಳನ್ನು ಭೇದಿಸಲು ಜೊತೆಗೆ ಸಾತ್ವಿಜರನ್ನು ರಕ್ಷಿಸಲು ನಾವು ಸುದರ್ಶನ ಚಕ್ರ ಬಳಸಿದ್ದೇವೆ. ಪಹಲ್ಗಾಮ್ ಭಯೋತ್ಪಾದಕರ ವಿರುದ್ಧ ಆಪರೇಶನ್ ಸಿಂಧೂರ ಕಾರ್ಯಾಚರಣೆಯನ್ನೂ ಕೃಷ್ಣನ ಸಂದೇಶದಂತೆ ಮಾಡಿದ್ದೇವೆ ಎಂದರು.

ದೇಶಕ್ಕಾಗಿ ನವ ಸಂಕಲ್ಪ ಮಾಡಿ

ಇದೇ ವೇಳೆ, ದೇಶದ ಭವಿಷ್ಯಕ್ಕಾಗಿ ಜವಾಬ್ದಾರಿಯುತ ನಾಗರಿಕರು ನವ ಸಂಕಲ್ಪಗಳನ್ನು ತೊಡುವಂತೆಯೂ ಮೋದಿ ಕರೆ ನೀಡಿದ್ದಾರೆ. ಜಲ ಸಂರಕ್ಷಣೆ, ಗಿಡಗಳ ನೆಟ್ಟು ಪೋಷಣೆ ಮಾಡಿ, ಅಮ್ಮನ ಹೆಸರಲ್ಲಿ ಒಂದು ಗಿಡ ನೆಡಿ, ಜೀವನದಲ್ಲಿ ಒಬ್ಬ ಬಡವನ ಮನೆಯನ್ನು ಸುಧಾರಣೆ ಮಾಡಿ, ಸ್ವದೇಶಿ ಮಂತ್ರ ಅಳವಡಿಸಿಕೊಳ್ಳಿ, ಆತ್ಮನಿರ್ಭರ ಭಾರತಕ್ಕಾಗಿ ಸ್ವದೇಶಿ ಮಂತ್ರ,  ಅರ್ಥವ್ಯವಸ್ಥೆ ವೃದ್ಧಿಯಾಗಲು ನಮ್ಮ ಟೆಕ್ನಾಲಜಿ ಎಲ್ಲವೂ ಸ್ವಾವಲಂಬಿಯಾಗಬೇಕು, ನಾಳೆ ನಮ್ಮದೇ ಆಗಬೇಕಾಗಿದೆ(ಓ ಕಲ್ ಲೋಕಲ್) , ಆರೋಗ್ಯಕರ ಸಾವಯವ ಕೃಷಿ ಮಾಡಿ, ಆಹಾರದಲ್ಲಿ ಹೆಚ್ಚು ಮಿಲೆಟ್(ಸಿರಿಧಾನ್ಯ) ಉಪಯೋಗಿಸಿ, ಎಣ್ಣೆ ಬಳಕೆ ಕಡಿಮೆ ಮಾಡಿ, ಜೀವನದಲ್ಲಿ ಯೋಗಾಭ್ಯಾಸ ಪಾಲಿಸಿ, ತಾಳೆಗರಿಗಳ ಲಿಪಿ ಮತ್ತು ಅದರ ಜ್ಞಾನವನ್ನು ಸಂರಕ್ಷಣೆ ಮಾಡಿ, ಕನಿಷ್ಠ ದೇಶದಲ್ಲಿರುವ 25 ಪವಿತ್ರ ಕ್ಷೇತ್ರಗಳನ್ನು ದರ್ಶನ ಮಾಡಬೇಕೆಂಬ ಸಂಕಲ್ಪ ಮಾಡಿ ಎಂದು ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ.

2047ರಲ್ಲಿ ದೇಶದ ಅಭಿವೃದ್ಧಿಗಾಗಿ ಸಂಕಲ್ಪ ತೊಡಬೇಕು, ಇದು ಎಲ್ಲ ಜನರ ಕರ್ತವ್ಯ ಮತ್ತು ಗುರಿಯಾಗಬೇಕು. ಇದು ಕೇವಲ ದೇಶಕ್ಕಾಗಿ ನೀವು ತೊಡುವ ಸಂಕಲ್ಪ ಆಗಬೇಕು. ನೀವೆಲ್ಲ ಕೈಜೋಡಿಸಿ ಎನ್ನುತ್ತ ಜೈ ಶ್ರೀಕೃಷ್ಣ ಎಂದು ಹೇಳಿ ಮೋದಿ ಮಾತು ಮುಗಿಸಿದರು.

ನರೇಂದ್ರ ಅರ್ಜುನ, ಭಾಗ್ಯ ವಿಧಾತ  

ಸಂಸ್ಕೃತದಲ್ಲಿ ಪ್ರಾಸ್ತಾವಿಕ ಮಾತನಾಡಿದ ಪುತ್ತಿಗೆ ಸುಗುಣೇಂದ್ರ ತೀರ್ಥರು, ಅರ್ಜುನ ಇಂದ್ರನ ಅವತಾರಿ, ನರೇಂದ್ರ ಅಂದರೆ ಈ ದೇಶಕ್ಕೆ ಅರ್ಜುನ. ಅರ್ಜುನ ರೂಪದಲ್ಲಿ ಮೋದಿಯವರು ಉಡುಪಿಗೆ ಆಗಮಿಸಿದ್ದಾರೆ. ಅರ್ಜುನ ಆಗಮನದೊಂದಿಗೆ ಲಕ್ಷ ಕಂಠ ಗೀತ ಗಾಯನ ಸಂಪೂರ್ಣ ಆಗಿದೆಯೆಂದು ನಾವು ಭಾವಿಸುತ್ತೇವೆ. ಶ್ರೀಕೃಷ್ಣ ಗೀತೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡು ಎಂದಿದ್ದಾನೆ. ಮೋದಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಧರ್ಮದ ರಕ್ಷಣೆಗಾಗಿ ಮೋದಿಯವರಿದ್ದಾರೆ. ಅವರಿಗೆ ವಿಶೇಷವಾಗಿ ಭಾರತ ಭಾಗ್ಯ ವಿಧಾತ ಎನ್ನುವ ಪ್ರಶಸ್ತಿಯೊಂದಿಗೆ ಕೃಷ್ಣಾನುಗ್ರಹ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿ ರಕ್ಷಾ ಕವಚ ಕಟ್ಟುವ ಮೂಲಕ ರಾಷ್ಟ್ರ ರಕ್ಷಣೆಯ ದೀಕ್ಷೆಯನ್ನು ಸ್ವಾಮೀಜಿ ನೀಡಿದ್ದಾರೆ. ಕೃಷ್ಣನ ನವಿಲು ಗರಿಯಿರುವ ಪೇಟವನ್ನು ತೊಡಿಸಿ ಸನ್ಮಾನಿಸಿದ್ದಾರೆ. ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಿದರು. 

ವೇದಿಕೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವ ಪ್ರಹ್ಲಾದ ಜೋಷಿ, ವಿಜಯೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರಿದ್ದರು.‌ ಇದಕ್ಕೂ ಮುನ್ನ ಉಡುಪಿ ಪೇಟೆಯಲ್ಲಿ ಮೋದಿಯವರು ಎರಡು ಕಿಮೀ ಉದ್ದಕ್ಕೆ ಅದ್ದೂರಿ ರೋಡ್ ಶೋ ನಡೆಸಿದರು. ಕಾರಿನ ಬಾಗಿಲು ತೆರೆದು ಮೋದಿ ಕೈಬೀಸುತ್ತಾ ಸಾಗುತ್ತಿದ್ದಂತೆ ಸೇರಿದ್ದ ಜನರು ಹೂವನ್ನು ಎಸೆದು ಹರ್ಷೋದ್ಗಾರ ತೋರಿದರು.

During the Laksha Kantha Gita Chanting event at Udupi Krishna Matha, Prime Minister Narendra Modi urged citizens to adopt “Nav Sankalp” for India’s development by 2047—protecting water, growing trees, embracing organic food, reducing oil use, promoting millets, and supporting Swadeshi. Modi launched the mass chanting of the 15th chapter of the Bhagavad Gita with one lakh participants and praised Udupi’s spiritual and governance legacy.