RSS Leader Kalladka Prabhakar Bhat: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಬೇಡ ; ಪುತ್ತೂರು ಸೆಶನ್ಸ್ ಕೋರ್ಟಿನಿಂದ ಮಧ್ಯಂತರ ರಿಲೀಫ್ 

27-10-25 07:24 pm       Mangalore Correspondent   ಕರಾವಳಿ

ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಸೂಚಿಸಿದೆ. 

ಮಂಗಳೂರು, ಅ.27: ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಸೂಚಿಸಿದೆ. 

ಮುಸ್ಲಿಂ ಮಹಿಳೆಯರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲ್ಲಡ್ಕ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ, ಕೇಸು ದಾಖಲು ಹಿನ್ನೆಲೆಯಲ್ಲಿ ಅ.30ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಪ್ರಭಾಕರ ಭಟ್ ಅವರಿಗೆ ನೋಟೀಸ್ ನೀಡಿದ್ದರು. 

ಇದರ ಬೆನ್ನಲ್ಲೇ ಪುತ್ತೂರು ಸೆಶನ್ಸ್ ಕೋರ್ಟಿನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಪ್ರಭಾಕರ ಭಟ್ ಪರವಾಗಿ ಅಪೀಲು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆ ದಿನಾಂಕದ ವರೆಗೆ ಬಲವಂತದ ಕ್ರಮ ಬೇಡವೆಂದು ಹೇಳಿ ಅ.29ಕ್ಕೆ ಮುಂದೂಡಿದೆ. ಅಲ್ಲದೆ, ಪ್ರತಿವಾದಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. 

ಪ್ರಭಾಕರ ಭಟ್ ಅವರು ಪುತ್ತೂರಿನ ಉಪ್ಪಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಹಿಂದು- ಮುಸ್ಲಿಂ ದ್ವೇಷ ಹುಟ್ಟಿಸುವ ರೀತಿ ಮಾತನಾಡಿದ್ದಾರೆಂದು ಈಶ್ವರಿ ಪದ್ಮುಂಜ ಅವರು ಪುತ್ತೂರಿನಲ್ಲಿ ಪೊಲೀಸ್ ದೂರು ನೀಡಿದ್ದರು.

The Puttur Additional District and Sessions Court has directed that no coercive action be taken against senior RSS leader Kalladka Prabhakar Bhat until the next hearing in connection with a case registered against him for allegedly making derogatory remarks against Muslim women.