ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ ; ಗಳಿಸಿದ ಒಂದು ಲಕ್ಷ ಮೊತ್ತ ಅಪಘಾತಕ್ಕೀಡಾದ ಯುವಕನಿಗೆ ಹಸ್ತಾಂತರ, ದೀನ, ದಲಿತರ ಅನುಕಂಪವೇ ನಿಜವಾದ ಧರ್ಮಪಾಲನೆ 

19-10-25 10:32 pm       Mangalore Correspondent   ಕರಾವಳಿ

ದೀನ, ದಲಿತರ ಮೇಲಿನ ಅನುಕಂಪವೇ ನಿಜವಾದ ಧರ್ಮಪಾಲನೆಯಾಗಿದೆ. ಬಹುತೇಕ ಕಡೆ ಸಂಘ- ಸಂಸ್ಥೆಗಳ ಕಚೇರಿಗಳು ಅಡ್ಡಾಡಿಗಳ ತಾಣವಾಗಿದ್ದೇ ಜಾಸ್ತಿ. ಆದರೆ ತಾವು ಮಾಡಿದ ಸೇವೆಯಲ್ಲಿ ಗಳಿಸಿದ್ದನ್ನ ಸಮಾಜಕ್ಕೆ ನೀಡುವ ಟೀಮ್ ಹನುಮಾನ್ ನಂತಹ ಸಂಘಟನೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಯುವ ಸಾಹಿತಿ, ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಉಳ್ಳಾಲ, ಅ.19 : ದೀನ, ದಲಿತರ ಮೇಲಿನ ಅನುಕಂಪವೇ ನಿಜವಾದ ಧರ್ಮಪಾಲನೆಯಾಗಿದೆ. ಬಹುತೇಕ ಕಡೆ ಸಂಘ- ಸಂಸ್ಥೆಗಳ ಕಚೇರಿಗಳು ಅಡ್ಡಾಡಿಗಳ ತಾಣವಾಗಿದ್ದೇ ಜಾಸ್ತಿ. ಆದರೆ ತಾವು ಮಾಡಿದ ಸೇವೆಯಲ್ಲಿ ಗಳಿಸಿದ್ದನ್ನ ಸಮಾಜಕ್ಕೆ ನೀಡುವ ಟೀಮ್ ಹನುಮಾನ್ ನಂತಹ ಸಂಘಟನೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಯುವ ಸಾಹಿತಿ, ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಉಳ್ಳಾಲ ಧರ್ಮನಗರದ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಧರ್ಮನಗರದ "ಟೀಮ್ ಹನುಮಾನ್" ಸಂಘಟನೆಯ ಸದಸ್ಯರು "ಭವತೀ ಭಿಕ್ಷಾಂ ದೇಹಿ" ಪರಿಕಲ್ಪನೆಯಡಿ ಕಳೆದ ನವರಾತ್ರಿಯಂದು ಯಕ್ಷ ವೇಷ ಧರಿಸಿ ಕ್ರೋಢೀಕರಿಸಿದ 1,05,905 ರೂ. ಸಹಾಯ ಧನದ ಚೆಕ್ಕನ್ನು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿರುವ ಕಾರ್ಕಳದ ನಾರಾವಿ ನಿವಾಸಿ ಯುವಕನಾದ ಶ್ರವಣ್ ಅವರ ಪೋಷಕರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಟೀಮ್ ಹನುಮಾನ್ ಸಂಘಟನೆಯ ಸದಸ್ಯರು ಬೆಳಕಿನ ತಿಂಗಳಲ್ಲಿ ಅಶಕ್ತ ಕುಟುಂಬಕ್ಕೆ ಬೆಳಕು ಚೆಲ್ಲುವ ಸತ್ಕಾರ್ಯ ಮಾಡಿದ್ದಾರೆ. ಈ ಸಂಘಟನೆಯಲ್ಲಿ ಶ್ರೀಮಂತರು ಯಾರೂ ಇಲ್ಲದಿದ್ದರೂ ಸಹ ಹದಿಹರೆಯದ ಯುವಕರು ವಿಭಿನ್ನ ರೀತಿಯಲ್ಲಿ ಸಮಾಜದ ಕಷ್ಟ, ಕಾರ್ಪಣ್ಯಗಳಿಗೆ ಸ್ಫಂದಿಸುತ್ತಿರುವುದು ಶ್ಲಾಘನೀಯ.  ಪೋಷಕರೇ ಟೀಮ್ ಹನುಮಾನ್ ಸಂಘಟನೆಯ ಚಟುವಟಿಕೆಗಳಿಗೆ ತಮ್ಮ ಮಕ್ಕಳನ್ನ ಕಳುಹಿಸಿ ಕೊಡುವಷ್ಟು ಉದ್ದೇಶಗಳು ವಿಸ್ತಾರವಾಗಿ ಸಂಘಟನೆಯು ಪ್ರಗತಿ ಪಥಕ್ಕೇರಲಿ ಎಂದು ಆಶಿಸಿದರು.

ಟೀಮ್ ಹನುಮಾನ್ ಸಂಘಟನೆಯ ನೂತನ ಕಾರ್ಯಾಲಯ "ಹನುಮಾನ್ ಕುಟೀರ"ವನ್ನ ಉದ್ಘಾಟಿಸಿದ ಚೀರುಂಭಾ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಮಾತನಾಡಿ ಸ್ವಂತ ನೆಲೆಗಾಗಿ ಸಂಘಟನೆಯ ಯುವಕರು ಹನುಮಾನ್ ಕುಟೀರ ನಿರ್ಮಿಸಿದ್ದು ,ಹನುಮಂತನೇ ಅವರ ಸಮಾಜಮುಖಿ ಕಾರ್ಯಗಳಿಗೆ ಬೆನ್ನುಲುಬಾಗಿ ಶಕ್ತಿ ನೀಡಲಿ. ವೇಷ ಹಾಕಿ ಬಂದಂತಹ ಆದಾಯದಲ್ಲಿ ಒಂದು ಪೈಸೆಯನ್ನೂ ದುರುಪಯೋಗಗೊಳಿಸದೆ ಸಮಾಜದ ಅಶಕ್ತರಿಗೆ ನೀಡುವ ಕಾರ್ಯ ಶ್ಲಾಘನೀಯ. ಇಂತಹ ಸಂಘಟನೆಗಳನ್ನ ಸರಕಾರವು ಗುರುತಿಸಿ ಪ್ರಶಸ್ತಿ ನೀಡಿದರೆ, ಪ್ರಶಸ್ತಿಗಳ ಮೌಲ್ಯವೂ ವೃದ್ಧಿಸುವುದೆಂದರು.

ಇದೇ ವೇಳೆ ಟೀಮ್‌ ಹನುಮಾನ್ ವತಿಯಿಂದ‌ ಸ್ಥಳೀಯ ಸ್ವಾಗತ್ ಫ್ರೆಂಡ್ಸ್ ಅವರ ಆಂಬ್ಯುಲೆನ್ಸ್ ಸೇವೆ, ಮಾಸ್ತಿಕಟ್ಟೆ ವೀರಾಂಜನೇಯ ವ್ಯಾಯಾಮ ಶಾಲೆಯ ನಿರ್ಮಾಣ ಕಾಮಗಾರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು. ಉಳ್ಳಾಲಬೈಲ್ ಅಂಗನವಾಡಿ ಕೇಂದ್ರಕ್ಕೆ ಎರಡು ಗಡಿಯಾರವನ್ನು ವಿತರಿಸಲಾಯಿತು. ಟೀಮ್‌ ಹನುಮಾನ್ ಸಂಘಟನೆಯ ಯುವಕರು ಕಳೆದ ನಾಲ್ಕು ವರುಷದಿಂದಲೂ ನವರಾತ್ರಿ ಉತ್ಸವದಂದು ಯಕ್ಷ ವೇಷ ಧರಿಸಿ, ಉಳ್ಳಾಲ ಶಾರದೋತ್ಸವದಲ್ಲಿ ದೃಶ್ಯರೂಪಕದ ಟ್ಯಾಬ್ಲೋ ಇಳಿಸಿ ದಾನಿಗಳಿಂದ ಸಂಗ್ರಹಿಸಿದ ಹಣವನ್ನ ಸಮಾಜದ ಅಶಕ್ತ ವರ್ಗದ ಒಳಿತಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ.

ಶ್ರೀ ಕ್ಷೇತ್ರ ಒಂಬತ್ತು ಕೆರೆಯ ಅಧ್ಯಕ್ಷರಾದ ಶರತ್ ಗಟ್ಟಿ ಸೋಮೇಶ್ವರ, ಸೋಮನಾಥ ಫ್ರೆಂಡ್ಸ್ ಅಧ್ಯಕ್ಷರಾದ ಸತೀಶ್ ನಾಯಕ್, ಧರ್ಮನಗರ ನಾಗಬನದ ಅಧ್ಯಕ್ಷ ನಾಗೇಶ್ ಉಳ್ಳಾಲ್, ಧರ್ಮನಗರ ರಾಹುಗುಳಿಗ ಬನದ ಅಧ್ಯಕ್ಷ ಭಾಸ್ಕರ ತೆಂಗಿನಹಿತ್ಲು, ಮಹಿಳಾ ಸಂಘದ ಅಧ್ಯಕ್ಷರಾದ ರತಿ ಶಂಕರ್, ಯಕ್ಷ ವೇಷ ಕಲಾವಿದರಾದ ವಿಘ್ನೇಶ್ ಕುಮಾರ್ ಬೋಳೂರು, ಗುತ್ತಿಗೆದಾರ ರಿಚರ್ಡ್ ವೇಗಸ್, ಬಿಜೆಪಿ ಮಂಗಳೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಾಧವಿ ಉಳ್ಳಾಲ್, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತ ಅಶ್ವಿನ್, ಕಾಂಗ್ರೆಸ್ ಮುಖಂಡರಾದ ನವನೀತ್ ಉಳ್ಳಾಲ್, ಸ್ವಾಗತ್ ಫ್ರೆಂಡ್ಸ್ ಅಧ್ಯಕ್ಷ ಧನರಾಜ್, ಟೀಮ್ ಹನುಮಾನ್ ಅಧ್ಯಕ್ಷ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

In Ullal’s Dharmanagara, members of Team Hanuman handed over ₹1,05,905 — raised by performing Yakshagana during Navaratri — to the parents of Shravan, a youth bedridden after an accident. Speaking at the event, scholar and lecturer Dr. Arun Ullal praised the group, saying true religiosity lies in compassion for the poor and oppressed, not in building offices for show.