Kantara Controversy, Mangalore: ದೈವದ ಹೆಸರಲ್ಲಿ ಹಣ ಮಾಡಿದವರನ್ನು ಆಸ್ಪತ್ರೆ ಸೇರುವಂತೆ ಮಾಡುತ್ತೇನೆ ; ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ 

18-10-25 07:26 pm       Mangalore Correspondent   ಕರಾವಳಿ

ಕಾಂತಾರ ಚಿತ್ರದ ಬಗ್ಗೆ ಪೆರಾರ ಬ್ರಹ್ಮ ಬಲವಾಂಡಿ ದೈವ ನುಡಿ ಕೊಟ್ಟಿದೆ ಎಂಬ ವಿಚಾರದ ಬಗ್ಗೆ ಸದ್ರಿ ದೈವಸ್ಥಾನದ ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿದೆ.

ಮಂಗಳೂರು, ಅ.18: ಕಾಂತಾರ ಚಿತ್ರದ ಬಗ್ಗೆ ಪೆರಾರ ಬ್ರಹ್ಮ ಬಲವಾಂಡಿ ದೈವ ನುಡಿ ಕೊಟ್ಟಿದೆ ಎಂಬ ವಿಚಾರದ ಬಗ್ಗೆ ಸದ್ರಿ ದೈವಸ್ಥಾನದ ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿದೆ. ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ- ಪಿಲಿಚಂಡಿ ದೈವಸ್ಥಾನ ಪ್ರಕಟಣೆಯಲ್ಲಿ ಹೇಳಿದೆ.

ಕಾಂತಾರಾ ಸಿನಿಮಾ ನೋಡಿದ ಅಭಿಮಾನಿಗಳು ದೈವದ ಬಗ್ಗೆ ಅತಿರೇಕದ ವರ್ತನೆ ತೋರುತ್ತಿರುವ ವಿಚಾರದಲ್ಲಿ ದೈವಾರಾಧಕರು ಆಕ್ಷೇಪ ಕೇಳಿಬಂದಿದೆ. ಇದಲ್ಲದೆ, ಕಾಂತಾರ ಸಿನಿಮಾ ಬಗ್ಗೆಯೂ ಕೆಲವು ದೈವಾರಾಧಕರು ಆಕ್ಷೇಪ ತೋರಿದ್ದರು. ಇದೇ ವೇಳೆ, 'ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ‌ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಹುಚ್ಚು ಕಟ್ಟಿದವರನ್ನು ಹುಚ್ಚು ಹಿಡಿಸುತ್ತೇನೆ. ಅಪಚಾರ ಮಾಡುವವರಿಗೆ ಬುದ್ದಿ ಕಲಿಸುತ್ತೇನೆ ಎಂದು ದೈವ ನುಡಿ ಕೊಟ್ಟಿದೆ ಎಂದು ಸುದ್ದಿಯಾಗಿತ್ತು.

ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ, ವಾದ ನಡೆದಿದ್ದು ಇದು ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಎಂದು ಕೆಲವರು ಪ್ರಶ್ನಿಸುವ ಮೂಲಕ ದೈವದ ನುಡಿಯನ್ನು ಅಪಹಾಸ್ಯ ಮಾಡಿದ್ದರು. ಇದರ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿದೆ. 

ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದ್ದಾರ್ -ಮೆಚ್ಚಿ ಜಾತ್ರೆ ಸಮಯದಲ್ಲಿ ದೈವದ ನುಡಿಗಳ ಬಗ್ಗೆ ಉಂಟಾದ ಗೊಂದಲ- ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿ ಸ್ಪಷ್ಟಿಕರಣ ನೀಡುತ್ತಿದೆ. ಬ್ರಹ್ಮದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವವು ನೀಡಿದ ಅಭಯ ನಡೆ ನುಡಿಗಳ ವಿಚಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.

ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ ನುಡಿಗಳ ಸಂದರ್ಭದಲ್ಲಿ ಕೆಲವೊಂದು ಯುವಕರು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತಾರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ.

ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.‌

Following viral reports claiming that the Perara Brahma Balavandi Daiva had issued a divine warning related to the film Kantara, the temple’s administration committee has released an official clarification. The Daivasthana, which functions under the Hindu Religious and Charitable Endowments Department, stated that no divine statement was ever made about the film or its makers.