ಲೈಂಗಿಕ ಕಿರುಕುಳ ; ಪ್ರೊಫೆಸರ್ ರಕ್ಷಣೆಗೆ ಹೋಗಿ ಖೆಡ್ಡಾ ತೋಡಿಕೊಂಡ ರಿಜಿಸ್ಟ್ರಾರ್ !

12-10-20 11:15 pm       Mangaluru Correspondent   ಕರಾವಳಿ

2018ರಲ್ಲಿ ವಿದ್ಯಾರ್ಥಿನಿಯೊಬ್ಬಳ ಲೈಂಗಿಕ ಕಿರುಕುಳ ಪ್ರಕರಣದ ವರದಿಯನ್ನು ಎರಡು ವರ್ಷಗಳ ಕಾಲ ಮುಚ್ಚಿಟ್ಟ ಆರೋಪ ಎದುರಿಸುತ್ತಿರುವ ಮಂಗಳೂರು ವಿವಿಯ ಈ ಹಿಂದಿನ ಕುಲಸಚಿವ ಪ್ರೊ.ಎ.ಎಂ. ಖಾನ್ ತಲೆದಂಡಕ್ಕೆ ವೇದಿಕೆ ಸಜ್ಜಾಗಿದೆ.

ಮಂಗಳೂರು, ಅಕ್ಟೋಬರ್ 12: 2018ರಲ್ಲಿ ವಿದ್ಯಾರ್ಥಿನಿಯೊಬ್ಬಳ ಲೈಂಗಿಕ ಕಿರುಕುಳ ಪ್ರಕರಣದ ವರದಿಯನ್ನು ಎರಡು ವರ್ಷಗಳ ಕಾಲ ಮುಚ್ಚಿಟ್ಟ ಆರೋಪ ಎದುರಿಸುತ್ತಿರುವ ಮಂಗಳೂರು ವಿವಿಯ ಈ ಹಿಂದಿನ ಕುಲಸಚಿವ ಪ್ರೊ.ಎ.ಎಂ. ಖಾನ್ ತಲೆದಂಡಕ್ಕೆ ವೇದಿಕೆ ಸಜ್ಜಾಗಿದೆ.

2018ರ ಎಪ್ರಿಲ್ ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳು ಮಂಗಳೂರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರಬಿ ಎಂಬವರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆಗಿನ ರಿಜಿಸ್ಟ್ರಾರ್ ಪ್ರೊ.ಎ.ಎಂ. ಖಾನ್ ಗೆ ದೂರು ನೀಡಿದ್ದರು. ಆದರೆ, ತನ್ನ ದೂರನ್ನು ಪರಿಗಣಿಸದೆ ಬದಿಗಿಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಹಿಳಾ ಆಯೋಗದಿಂದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ವಿವಿಗೆ ನೋಟೀಸ್ ಬಂದಿತ್ತು. ನಂತರ ತನಿಖೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ ಮಂಗಳೂರು ವಿವಿ ಆಡಳಿತ, ಅದಕ್ಕೊಂದು ವಿಶೇಷ ತಂಡ ರಚಿಸಿತ್ತು. ಪ್ರೊಫೆಸರ್ ಮೇಲಿನ ಆರೋಪಗಳ ಬಗ್ಗೆ ತನಿಖಾ ತಂಡ 2018ರ ಡಿಸೆಂಬರ್ ನಲ್ಲಿ ವರದಿ ರೆಡಿ ಮಾಡಿದ್ದಲ್ಲದೆ, ಮುಚ್ಚಿದ ಲಕೋಟೆಯಲ್ಲಿ ಅಂದಿನ ಕುಲಸಚಿವ ಪ್ರೊ.ಎ.ಎಂ. ಖಾನ್ ಗೆ ರಿಪೋರ್ಟ್ ಮಾಡಿತ್ತು. ಆದರೆ, ತನಿಖಾ ವರದಿಯನ್ನೇ ಮುಚ್ಚಿಟ್ಟ ಎ.ಎಂ. ಖಾನ್ ಪ್ರಕರಣದಲ್ಲಿ ಆರೋಪಿ ಪ್ರೊಫೆಸರ್ ಅರಬಿಯನ್ನು ಬಚಾವ್ ಮಾಡಲು ಯತ್ನಿಸಿದ್ದರು.

ಮತ್ತೆ ಮಹಿಳಾ ಆಯೋಗದಿಂದ ನೋಟೀಸ್

ಆದರೆ, ಕಳೆದ ಮೇ ತಿಂಗಳಲ್ಲಿ ರಾಜ್ಯಾದ್ಯಂತ ವಿವಿಯ ರಿಜಿಸ್ಟ್ರಾರ್ ಹುದ್ದೆಗೆ ಕೆಎಎಸ್ ಅಧಿಕಾರಿಗಳನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿತ್ತು. ಎಂ.ಎಂ. ಖಾನ್ ಹುದ್ದೆಯಿಂದ ತೆರವಾಗಿ ಆ ಜಾಗಕ್ಕೆ ರಾಜು ಮೊಗವೀರ ನೇಮಕಗೊಂಡಿದ್ದರು. ಅಷ್ಟಕ್ಕೇ ಕಿರುಕಳ ರಿಪೋರ್ಟ್ ಮೇಲೆ ಬರ್ತಾ ಇರಲಿಲ್ಲ. 15 ದಿನಗಳ ಹಿಂದೆ ಮಹಿಳಾ ಆಯೋಗದಿಂದ ಮತ್ತೆ ನೋಟೀಸ್ ಬಂದಿದ್ದು ತನಿಖಾ ವರದಿ ಸಲ್ಲಿಸುವಂತೆ ವಿವಿಗೆ ಸೂಚನೆ ನೀಡಿತ್ತು. ಇದರಿಂದ ಎಚ್ಚೆತ್ತ ರಿಜಿಸ್ಟ್ರಾರ್, ಅ.9ರಂದು ನಡೆದ ವಿವಿಯ ಸಿಂಡಿಕೇಟ್ ಸಭೆಯಲ್ಲಿ ತನಿಖಾ ವರದಿಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಸಿಂಡಿಕೇಟ್ ಸದಸ್ಯರು ಗರಂ ಆಗಿದ್ದು, ವಿವಿಯ ಹಿಂದಿನ ರಿಜಿಸ್ಟ್ರಾರ್ ಮತ್ತು ಪ್ರೊ.ಅರಬಿ ಸೇರಿ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರಿಂದ ಸಭೆಯಲ್ಲಿ ಆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಕರಣದ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಸುವುದಕ್ಕೂ ನಿರ್ಣಯ ಮಾಡಲಾಗಿದೆ.

ವಿದ್ಯಾರ್ಥಿನಿ ಮೇಲಿನ ಕಿರುಕುಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿವಿಯ ಆಂತರಿಕ ದೂರು ಸಮಿತಿಯು ಸಮಗ್ರವಾಗಿ ತನಿಖೆ ನಡೆಸಿ ಈ ಹಿಂದಿನ ರಿಜಿಸ್ಟ್ರಾರ್ ಗೆ ವರದಿ ಸಲ್ಲಿಸಿತ್ತು. ಸಮಿತಿಯಲ್ಲಿ ವಿವಿಯ ಹಿರಿಯ ಮಹಿಳಾ ಹಾಗೂ ಪುರುಷ ಪ್ರಾಧ್ಯಾಪಕರು, ಮಹಿಳಾ ವಕೀಲರು, ಕೌನ್ಸೆಲರ್ ಗಳಿದ್ದು ವರದಿ ತಯಾರಿಸಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದರು. ಆದರೆ, ಎ.ಎಂ. ಖಾನ್, ಪ್ರೊ.ಅರಬಿ ಮತ್ತು ಕೆಲವು ಅಧಿಕಾರಿಗಳು ಸೇರಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ವಿಚಾರದಲ್ಲಿ ಖಾನ್ ವಿರುದ್ಧ ವಿವಿಯ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಅತ್ತ ಮಹಿಳಾ ಆಯೋಗವೂ ಪ್ರೊ.ಅರಬಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದಲ್ಲಿ ಖಾನ್ ಮತ್ತು ಅರಬಿ ಇಬ್ಬರ ತಲೆದಂಡ ನಿಶ್ಚಿತ ಎನ್ನಲಾಗುತ್ತಿದೆ. 

Mangalore university former registrar Dr AM Khan in big-time trouble after trying to protect a professor of the university from sexual assault charges. The case has been taken up by the National Commission for Women.