ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ, ಮೂವರು ಸಜೀವ ದಹನ, ಬಸ್‌, ಕಂಟೈನರ್‌ ಧಗಧಗ ! 

22-01-26 11:26 am       HK News Desk   ದೇಶ - ವಿದೇಶ

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ  ನಸುಕಿನ ಜಾವ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವ ದಹನಕ್ಕೀಡಾದ ಘಟನೆ ನಡೆದಿದೆ. ಜಿಲ್ಲೆಯ ಶಿರವೆಲ್ಲಾ ಮಂಡಲದ ಶಿರವೆಲ್ಲಾಮೆಟ್ಟ ಗ್ರಾಮದ ಬಳಿ ನಸುಕಿನ ಜಾವ 1 ರಿಂದ 2 ಗಂಟೆಯ ಸುಮಾರಿಗೆ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಮತ್ತು ಕಂಟೇನರ್ ಲಾರಿ ಬೆಂಕಿಗೆ ಆಹುತಿಯಾಗಿವೆ.

ನಂದ್ಯಾಲ್, ಜ 22 : ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ  ನಸುಕಿನ ಜಾವ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವ ದಹನಕ್ಕೀಡಾದ ಘಟನೆ ನಡೆದಿದೆ. ಜಿಲ್ಲೆಯ ಶಿರವೆಲ್ಲಾ ಮಂಡಲದ ಶಿರವೆಲ್ಲಾಮೆಟ್ಟ ಗ್ರಾಮದ ಬಳಿ ನಸುಕಿನ ಜಾವ 1 ರಿಂದ 2 ಗಂಟೆಯ ಸುಮಾರಿಗೆ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಮತ್ತು ಕಂಟೇನರ್ ಲಾರಿ ಬೆಂಕಿಗೆ ಆಹುತಿಯಾಗಿವೆ.

ಬಸ್ಸಿನಿಂದ ಬೃಹತ್ ಜ್ವಾಲೆಗಳು ಹೊರಬರುತ್ತಿರುವ ದೃಶ್ಯದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಕಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ವಾಹನಗಳ ಚಾಲಕರು ಮತ್ತು ಕಂಟೇನರ್ ಟ್ರಕ್‌ನ ಕ್ಲೀನರ್ ಇಬ್ಬರೂ ಸುಟ್ಟು ಕರಕಲಾದರು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ನೆಲ್ಲೂರಿನಿಂದ ಹೈದರಾಬಾದ್‌ಗೆ 36 ಪ್ರಯಾಣಿಕರೊಂದಿಗೆ ಬಸ್ ಪ್ರಯಾಣಿಸುತ್ತಿದ್ದಾಗ ಅದರ ಒಂದು ಟೈರ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಟೈರ್ ಸ್ಫೋಟಗೊಂಡ ಕಾರಣ, ಬಸ್‌ನ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ವಿಭಜಕವನ್ನು ದಾಟಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿತು, ಬೆಂಕಿ ಎರಡೂ ವಾಹನಗಳನ್ನು ಆವರಿಸಿಕೊಂಡಿತು. ಬಸ್‌ನ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ, ಕೆಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಬಸ್ ಚಾಲಕ, ಅದರ ಕ್ಲೀನರ್ ಮತ್ತು ಲಾರಿ ಚಾಲಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರನ್ನು ಹೊರತುಪಡಿಸಿ ಉಳಿದೆಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರೂ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಯಿತು ಎಂದು ಎಸ್ಪಿ ಹೇಳಿದರು. ಘಟನೆಯ ನಂತರ, ಸ್ಥಳೀಯರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಬಸ್ಸಿನ ಮುಂಭಾಗ ಮತ್ತು ತುರ್ತು ಬಾಗಿಲು ತೆರೆಯಲು ವಿಫಲವಾದ ಕಾರಣ, ಪ್ರಯಾಣಿಕರು ಸ್ವಲ್ಪ ಸಮಯದವರೆಗೆ ವಾಹನದೊಳಗೆ ಸಿಲುಕಿಕೊಂಡರು ಎಂದು ವರದಿಯಾಗಿದೆ.

ಬೆಂಕಿ ಹತ್ತಿ ಉರಿಯಲು ನಿಖರ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. ಬೆಂಕಿ ನೇರವಾಗಿ ಡಿಕ್ಕಿಯಿಂದ ಉಂಟಾಗಿದೆಯೇ ಅಥವಾ ಬ್ಯಾಟರಿ ಸಂಬಂಧಿತ ಸಮಸ್ಯೆಗಳಿಂದ ಉಂಟಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದ ಚಾಲಕನೊಬ್ಬನ ಸಮಯಪ್ರಜ್ಞೆಯಿಂದ 36 ಮಂದಿ ಸುರಕ್ಷಿತ ಇನ್ನು, ಬಸ್ ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಂದು ವಾಹನದ ಚಾಲಕ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ, ಬಸ್ಸಿನ ಕಿಟಕಿಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ಬರುವಂತೆ ಸೂಚಿಸಿದ್ದಾನೆ. ಈತನ ಸಮಯ ಪ್ರಜ್ಞೆಯಿಂದಾಗಿ, ಬಸ್ಸಿನಲ್ಲಿದ್ದ 36 ಪ್ರಯಾಣಿಕರು ಕಿಟಕಿಗಳಿಂದ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈ ವೇಳೆ, ಕಿಟಕಿಗಳಿಂದ ಜಿಗಿದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್‌ ಯಾವುದೇ ಹೆಚ್ಚಿನ ಅಪಾಯಗಳಿಲ್ಲದೆ,ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ಸಮಯದಲ್ಲಿ ಕಳೆದ ವರ್ಷ ಆಂಧ್ರದ ಕರ್ನೂಲ್‌ ಜಿಲ್ಲೆಯ ಬಳಿ ನಡೆದ ಭೀಕರ ಬಸ್‌ ದುರಂತವನ್ನು ಸ್ಮರಿಸಿಕೊಳ್ಳಬಹುದು. ಈ ದುರಂತದಲ್ಲಿ ಬಸ್‌ ಬೆಂಕಿಗಾಹುತಿಯಾಗಿ 19 ಜನ ಜೀವ ಬಲಿಪಡೆದ ಘಟನೆ ನಡೆದಿತ್ತು. ಆದರೆ, ಇಂದು ಅಂತಹುದೇ ಘಟನೆ ನಡೆಯುವ ಸಂಭವನೆಯಿತ್ತು. ಆದರೆ, ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಯಾಣಿಕನೊಬ್ಬನ ಸಮಯ ಪ್ರಜ್ಞೆಯಿಂದಾಗಿ ಹತ್ತಾರು ಜನರ ಜೀವ ಉಳಿದಿದ್ದು, ಮತ್ತೊಂದು ದುರಂತ ನಡೆಯುವುದು ಕ್ಷಣಾರ್ಧದಲ್ಲೇ ತಪ್ಪಿದೆ.

ಆದಾಗ್ಯೂ, ಎಷ್ಟೇ ಬಾರಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಾರಿಗೆ ಸಂಸ್ಥೆಗಳು ವಾಹನಗಳ ಸುರಕ್ಷತೆ ಬಗ್ಗೆ ಗಮನವಹಿಸದಿರುವುದು ವಿಪರ್ಯಾಸವೇ ಸರಿ..

A private bus caught fire after a tyre burst caused it to collide head-on with a container truck in Andhra Pradesh’s Nandyal district early Wednesday morning. The horrific accident claimed three lives, who were burnt alive, while 36 passengers narrowly escaped. The collision occurred near Sirivella Metta village, with both the bus and container engulfed in flames. Authorities are investigating the exact cause of the fire, while timely action by a passing motorist helped save dozens of lives.