ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್  ತಲೆದಂಡ ; ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ ಎಂದ ಗೃಹ ಸಚಿವ 

20-01-26 12:20 pm       Bangalore Correspondent   ಕರ್ನಾಟಕ

ರಾಸಲೀಲೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ವಿಡಿಯೋ ವೈರಲ್ ಆಗ್ತಿದ್ದಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು, ಜ 19 : ರಾಸಲೀಲೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ವಿಡಿಯೋ ವೈರಲ್ ಆಗ್ತಿದ್ದಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆಯೂ ಪುತ್ರಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆ ವಾಪಸ್ ಬಂದಿದ್ದರು.

ಕಚೇರಿಯಲ್ಲಿ ಮಹಿಳೆಯರ ಜೊತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ಆಡಿಯೋ ಹಾಗೂ ವಿಡಿಯೋ ವೈರಲ್ ಆಗಿತ್ತು. ರಾಜ್ಯದಾದ್ಯಂತ ವೈರಲ್ ಆಗುತ್ತಿದ್ದಂತೆ ಸರಕಾರಕ್ಕೂ ಇದು ಇರುಸುಮುರುಸಾಗಿತ್ತು. ನಿನ್ನೆ ಸಿಎಂ ಸಿದ್ದರಾಮಯ್ಯ ಅವರೂ ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಿದ್ದರು. ಆದರೆ ಎಐ ಸೃಷ್ಟಿ ಮಾಡಿರುವ ವಿಡಿಯೋ ಎಂದು ರಾಮಚಂದ್ರ ರಾವ್ ಆರೋಪ ತಳ್ಳಿಹಾಕಿದ್ದರು.

ಮಹಿಳೆಯರ ಜತೆ ಸರಸವಾಡಿರುವ ವಿಡಿಯೊ ಹಾಗೂ, ಮಹಿಳೆ ಜತೆ ಮಾತನಾಡಿದ್ದಾರೆ ಎನ್ನಲಾದ ಎರಡು ಆಡಿಯೊಗಳು ವೈರಲ್‌ ಆಗಿವೆ. ಪೊಲೀಸ್‌ ಸಮವಸ್ತ್ರದಲ್ಲಿಯೇ ಮಹಿಳೆಯನ್ನು ಮುದ್ದಾಡಿ, ಚುಂಬಿಸಿರುವ ವಿಡಿಯೊ ವೈರಲ್‌ ಆಗುತ್ತಿರುವುದು ಪೊಲೀಸ್‌ ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ. ಮೂರು ಪ್ರತ್ಯೇಕ ವಿಡಿಯೊಗಳನ್ನು ಕೂಡಿಸಿ 47 ಸೆಕೆಂಡ್‌ಗಳ ವಿಡಿಯೊ ಮಾಡಲಾಗಿದೆ. ಮೂರು ವಿಡಿಯೊಗಳು ಸರಕಾರಿ ಕಚೇರಿ ಕೊಠಡಿಯಲ್ಲಿ ಮೊಬೈಲ್‌ ಬಳಸಿ ಸೆರೆಹಿಡಿದಿರುವ ಅನುಮಾನವಿದ್ದು, ಒಂದು ವಿಡಿಯೊದಲ್ಲಿ ರಾಮಚಂದ್ರ ರಾವ್‌ ಸಮವಸ್ತ್ರ ಧರಿಸಿದ್ದಾರೆ.

ಯಾವುದೇ ಇಲಾಖೆಯಲ್ಲಿಯೂ ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಇಂದು ಗೃಹ ಸಚಿವರು ಪ್ರತಿಕ್ರಿಯಿಸಿದರು.

ಈ ರೀತಿ ವಿಡಿಯೋ ವೈರಲ್ ಆಗುತ್ತಿರುವುದರ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಇಂಥದ್ದೆಲ್ಲ ಯಾವುದೇ ಇಲಾಖೆಯಲ್ಲಿಯೂ ಆಗಬಾರದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ. ಇದು ಸುಳ್ಳು ವಿಡಿಯೋ ಎಂದು ರಾಮಚಂದ್ರರಾವ್ ಹೇಳಿದ್ದನ್ನು ಗಮನಿಸಿದ್ದೇನೆ. ಅಂಥದ್ದೇನಾದಾರೂ ಇದ್ದರೆ ತನಿಖೆಯಲ್ಲಿ ತಿಳಿಯಲಿದೆ. ಆದರೆ ಮೇಲ್ನೋಟಕ್ಕೆ ಇಂಥ ವಿಚಾರಗಳು ಯಾರಿಗೂ ಶೋಭೆಯಲ್ಲ ಎಂದರು.

ವಿಡಿಯೋ ವೈರಲ್ ಆದ ನಂತರ ನಿನ್ನೆ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರಂತೆ, ಆ ಸಂದರ್ಭದಲ್ಲಿ ನಾನು ಮಲಗಿದ್ದರಿಂದ ಭೇಟಿಯಾಗಲಿಲ್ಲ, ಭೇಟಿಯಾಗುವುದೂ ಇಲ್ಲ. ಇಂಥ ಸನ್ನಿವೇಶದಲ್ಲಿ ನಾವು ಕಠಿಣವಾಗಿ ಇರಬೇಕಾಗುತ್ತೆ ಎಂದು ಹೇಳಿದರು.

The Karnataka government has suspended DGP Ramachandra Rao following the viral spread of alleged explicit videos showing him behaving indecently with women inside his office. Home Minister Dr. G. Parameshwara said the government will not tolerate such incidents in any department and acted on the Chief Minister’s directions.